ಬೆಂಗಳೂರು: ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಪಕ್ಷದ ರೋಡ್ ಶೋಗಳು (Road Show) ನಾನು ನಾಲ್ಕು ತಿಂಗಳ ಹಿಂದೆ ನಡೆಸಿದ್ದ ರೋಡ್ ಶೋ ಮುಂದೆ ಏನೂ ಅಲ್ಲ. ನಾನು ಅಮಿತ್ ಶಾ (Amit Shah) ರೋಡ್ ಶೋವನ್ನೂ ಗಮನಿಸಿದ್ದೇನೆ. ನನ್ನ ಕಾರ್ಯಕ್ರಮದ ವಿಶೇಷತೆಗಳೇ ಬೇರೆಯಿತ್ತು. ಅವರ ಕಾರ್ಯಕ್ರಮ ನನ್ನ ಕಾರ್ಯಕ್ರಮಕ್ಕೆ ಸರಿಸಾಟಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (H.D.Kumaraswamy) ವ್ಯಂಗ್ಯವಾಡಿದರು.
ಪ್ರಧಾನಿ ಮೋದಿ (Narendra Modi) ರಾಮನಗರಕ್ಕೆ ಆಗಮನ ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಪ್ರಧಾನಿಯನ್ನಾದರೂ ಕರೆಸಿಕೊಳ್ಳಲಿ, ಅಮೆರಿಕಾ ಅಧ್ಯಕ್ಷರನ್ನಾದರೂ ಕರೆಸಿಕೊಳ್ಳಲಿ. ನನಗೇನು ಆತಂಕ ಇಲ್ಲ. ಒಂದು ದಿನ ಭಾಷಣ ಮಾಡಿ ಹೋಗುತ್ತಾರೆ. ಚನ್ನಪಟ್ಟಣಕ್ಕೆ ಮಂಡ್ಯ, ತುಮಕೂರು ಹಾಗೂ ಮೈಸೂರಿನಿಂದ ಜನ ಸೇರಿಸಬಹುದು. ಒಂದು ಜಾತ್ರೆ ಮಾಡಿ ಹೋಗಬಹುದು. ಅವರು ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ. ಅದನ್ನು ಹೊರತುಪಡಿಸಿ ಜನಕ್ಕೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಮಾಡುತ್ತಾರಾ? ಅವರೆಲ್ಲಾ ಬರುತ್ತಾರೆ, ಹೋಗುತ್ತಾರೆ. ಏನಾದರು ಮಾಡಿದ್ದಾರ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಮಾಜಿ ಸಚಿವ ಡಿ.ಬಿ ಇನಾಮ್ದಾರ್ ವಿಧಿವಶ
ಲಿಂಗಾಯತ ಸಿಎಂ ಭ್ರಷ್ಟ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ಅದೆಲ್ಲಾ ದೊಡ್ಡವರ ವಿಚಾರ. ನಮಗ್ಯಾಕೆ? ಭ್ರಷ್ಟಾಚಾರದ ಬಗ್ಗೆ ನಾನ್ಯಾಕೆ ಮಾತಾಡಲಿ? ಇಬ್ಬರೂ ಸೇರಿ ಮಾತನಾಡಿಕೊಳ್ಳುತ್ತಾರೆ. ಅದನ್ನು ಅವರಿಗೆ ಬಿಟ್ಟುಬಿಡೋಣ. ಸದ್ಯ ನಮ್ಮ ಪಕ್ಷದ ಬಗ್ಗೆ ಅಥವಾ ಭ್ರಷ್ಟಾಚಾರದ ಬಗ್ಗೆ ಯಾರೂ ಪ್ರಶ್ನೆ ಮಾಡಿಲ್ಲ ಎಂದರು. ಇದನ್ನೂ ಓದಿ: ಯಾದಗಿರಿಯಲ್ಲಿ ಅಮಿತ್ ಶಾ ರೋಡ್ ಶೋ – ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್ ಪರ ಮತಯಾಚನೆ
ತಮ್ಮ ಆರೋಗ್ಯದ ಕುರಿತಾಗಿ ಮಾತನಾಡಿದ ಅವರು, ವೈದ್ಯರು ಮೂರು ದಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಆದರೆ ನಾನು ವಿಶ್ರಾಂತಿ ಪಡೆಯುವ ಸ್ಥಿತಿಯಲ್ಲಿ ಇಲ್ಲ. ಮಂಗಳವಾರ ಕೆಆರ್ ಪೇಟೆ, ಚಾಮರಾಜನಗರ ಮತ್ತು ವರುಣಾ ಕ್ಷೇತ್ರದಲ್ಲಿ ಸಭೆಯನ್ನು ಕರೆದಿದ್ದೇನೆ. ಮೇ 8ರವರೆಗೆ ನಿರಂತರ ಕಾರ್ಯಕ್ರಮಗಳಿಗೆ ಚಾಲನೆ ಕೊಡುತ್ತೇನೆ. ನನ್ನ ಆರೋಗ್ಯದ ಬಗ್ಗೆ ದೇವೇಗೌಡರಿಗೆ (H.D.Deve Gowda) ಸ್ವಲ್ಪ ಆತಂಕವಿದೆ. ಸೋಮವಾರದಿಂದ ಶಿರಾ, ಮಧುಗಿರಿ ಹಾಗೂ ಕೊರಟಗೆರೆಯ ಬಿಸಿಲಿನ ಸಭೆಯಲ್ಲಿ ಭಾಗಿಯಾಗಿದ್ದಾರೆ. ಮಂಗಳವಾರ ಪಿರಿಯಾಪಟ್ಟಣ ಹಾಗೂ ಕೆಆರ್ ನಗರಕ್ಕೆ ಹೊರಟಿದ್ದಾರೆ. ನಾವು 123 ಸೀಟು ಗುರಿ ಮುಟ್ಟಲು ಅವರು ಇಳಿ ವಯಸ್ಸಿನಲ್ಲೂ ಶ್ರಮ ಹಾಕುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಮೇ 10ರಂದು ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ