– 16ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಭಿನ್ನಮತ ಸ್ಫೋಟ
– ಪಕ್ಷಕ್ಕೆ ಹಲವು ಟಿಕೆಟ್ ವಂಚಿತರು ಗುಡ್‍ಬೈ
ಬೆಂಗಳೂರು: ಯಾವುದೇ ರಾಜಕೀಯ ಪಕ್ಷದಲ್ಲಿ ಟಿಕೆಟ್ ಹಂಚಿಕೆ ನಂತರ ಒಂದಿಷ್ಟು ಅಸಮಾಧಾನ, ಬಂಡಾಯ ಸಹಜ. ಕಾಂಗ್ರೆಸ್ ವಿಚಾರದಲ್ಲೂ ಹಾಗೆಯೇ ಆಗಿದೆ. ಆದರೆ ಕಾಂಗ್ರೆಸ್ ನಿರೀಕ್ಷಿಸಿದ ಪ್ರಮಾಣಕ್ಕಿಂತ ಬಂಡಾಯ ಬೆಂಕಿ ಜಾಸ್ತಿಯಾಗಿದೆ.
ಎರಡನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು (Candidate) ಪ್ರಕಟಿಸಿದ ನಂತರ ಕಾಂಗ್ರೆಸ್ (Congress) ಪಕ್ಷ ಈಗ ಕಾದ ಬಾಣಲೆಯಂತಾಗಿದೆ. 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಟಿಕೆಟ್ ವಂಚಿತರು ಸಿಡಿದಿದ್ದಾರೆ. ಪ್ರತಿಭಟನೆಗಳ ಮೇಲೆ ಪ್ರತಿಭಟನೆಗಳು ನಡೆಯುತ್ತಿವೆ. ಕೆಪಿಸಿಸಿ (KPCC) ನಾಯಕರ ವಿರುದ್ಧ ಬಹಿರಂಗ ಆಕ್ರೋಶ ಹೊರಹಾಕುತ್ತಿದ್ದಾರೆ.
Advertisement
ಟಿಕೆಟ್ ವಂಚಿತರನ್ನು ಓಲೈಸಲು ಪಕ್ಷದ ನಾಯಕರು ನೋಡಿದರೂ ಪ್ರಯೋಜನವಾಗುತ್ತಿಲ್ಲ. ತಮ್ಮ ರಾಜಕೀಯ ಭವಿಷ್ಯದ ಸಲುವಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಇದು ಚುನಾವಣೆ ಮೇಲೆ ಪರಿಣಾಮ ಬೀರುವುದರಿಂದ ಸಹಜವಾಗಿಯೇ ಕಾಂಗ್ರೆಸ್ ಆತಂಕಕ್ಕೆ ಒಳಗಾಗಿದೆ. ತುರ್ತಾಗಿ ಬಂಡಾಯ ಶಮನ ಮಾಡಿ. ಹೆಚ್ಚು ಬೆಳೆಯದಂತೆ ನೋಡಿಕೊಳ್ಳಿ ಎಂದು ಕೈ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಧೀಶರ ನಾಲಿಗೆ ಕತ್ತರಿಸುತ್ತೇವೆ – ಕೈ ನಾಯಕ
Advertisement
Advertisement
ಎಲ್ಲಿ ಯಾರು ಬಂಡಾಯ?
ಹಾನಗಲ್ – ಜೆಡಿಎಸ್ ಸೇರಿದ ಮನೋಹರ್ ತಹಶೀಲ್ದಾರ್
ನಿರೀಕ್ಷೆಯಂತೆಯೇ ಮಾಜಿ ಮಂತ್ರಿ ಮನೋಹರ್ ತಹಶೀಲ್ದಾರ್ ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರಿದ್ದಾರೆ. ಪಕ್ಷ ನನಗೆ ಮೋಸ ಮಾಡಿದೆ ಎನ್ನುತ್ತಾ ಕಣ್ಣೀರಿಟ್ಟಿದ್ದಾರೆ. ಪಕ್ಷಕ್ಕೆ ಬುದ್ದಿ ಕಲಿಸಬೇಕು ಎಂದು ಕರೆ ನೀಡಿದ್ದಾರೆ.
Advertisement
ಕಡೂರು – ವೈಎಸ್‍ವಿ ದತ್ತಾ
ಟಿಕೆಟ್ ವಿಚಾರದಲ್ಲಿ ಸಿದ್ದರಾಮಯ್ಯ ನಂಬಿಕೊಂಡಿದ್ದ ವೈಎಸ್‍ವಿ ದತ್ತಾಗೆ ನಿರಾಸೆಯಾಗಿದೆ. ಕ್ಷೇತ್ರದ ಕಾರ್ಯಕರ್ತರಿಗೆ ಬಹಿರಂಗ ಪತ್ರ ಬರೆದಿರುವ ಅವರು, ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ನೋವು ಹೊರಹಾಕಿದ್ದಾರೆ. ಇದೇ ಭಾನುವಾರ ಬೆಂಬಲಿಗರ ಸಭೆ ಕರೆದು ಮುಂದಿನ ನಡೆ ನಿರ್ಧರಿಸಲಿದ್ದಾರೆ. ಇದನ್ನೂ ಓದಿ: ಇಂದು ಪ್ರಜಾಪ್ರಭುತ್ವ ಅಪಾಯದಲ್ಲಿಲ್ಲ, ವಂಶಾಡಳಿತದ ರಾಜಕೀಯ ಅಪಾಯದಲ್ಲಿದೆ: ಅಮಿತ್ ಶಾ
ಚಿತ್ರದುರ್ಗ – ರಘು ಆಚಾರ್
ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೆ ರಘು ಆಚಾರ್ ರೆಬಲ್ ಆಗಿದ್ದಾರೆ. ಇದೇ 14ರಂದು ಜೆಡಿಎಸ್ ಸೇರುವುದಾಗಿ ಘೋಷಿಸಿದ್ದಾರೆ. ಏಪ್ರಿಲ್ 17ಕ್ಕೆ ನಾನು ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಚಿತ್ರದುರ್ಗ – ಎಸ್‍ಕೆ ಬಸವರಾಜನ್
ಟಿಕೆಟ್ ಸಿಗದ ಕಾರಣ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದಾರೆ. ರಘು ಆಚಾರ್ ಜೆಡಿಎಸ್ ಸೇರುತ್ತಿರುವುದರಿಂದ ಬಸವರಾಜನ್ ನಡೆ ಕುತೂಹಲ ಕೆರಳಿಸಿದೆ.
ಕಿತ್ತೂರು – ಕಾಂಗ್ರೆಸ್‍ಗೆ ಡಿಬಿ ಇನಾಂದಾರ್ ಕುಟುಂಬಸ್ಥರ ರಾಜೀನಾಮೆ
ಬಾಬಾ ಸಾಹೇಬ್ ಪಾಟೀಲ್‍ಗೆ ಕಾಂಗ್ರೆಸ್ ಟಿಕೆಟ್ ನೀಡಿದ ಪರಿಣಾಮ ಡಿಬಿ ಇನಾಂದಾರ್ ಕುಟುಂಬ, ಪಕ್ಷಕ್ಕೆ ರಾಜೀನಾಮೆ ನೀಡಿದೆ. ಡಿಬಿ ಇನಾಂದಾರ್ ಆಸ್ಪತ್ರೆಯಲ್ಲಿರುವ ಕಾರಣ ಅವರ ಸೊಸೆ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದಾರೆ. ಸದ್ಯದಲ್ಲೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ತುಮಕೂರು ನಗರ – ಕಾಂಗ್ರೆಸ್‍ಗೆ ಶಫಿ ಅಹ್ಮದ್ ರಾಜೀನಾಮೆ
ತುಮಕೂರು ನಗರದಲ್ಲಿ ಶಫಿ ಅಹ್ಮದ್ ಕುಟುಂಬಕ್ಕೆ ಟಿಕೆಟ್ ಕೈ ತಪ್ಪಿದೆ. ಇಕ್ಬಾಲ್ ಅಹ್ಮದ್‍ಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿರುವ ಮಾಜಿ ಶಾಸಕ ಶಫಿ ಅಹ್ಮದ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಕುಣಿಗಲ್ – ರಾಮಸ್ವಾಮಿ ಗೌಡ
ಕುಣಿಗಲ್‍ನಲ್ಲಿ ಮತ್ತೆ ಟಿಕೆಟ್ ಕೈತಪ್ಪಿರುವುದಕ್ಕೆ ಮಾಜಿ ಶಾಸಕ ರಾಮಸ್ವಾಮಿಗೌಡ ರೆಬೆಲ್ ಆಗಿದ್ದಾರೆ. ನನಗೆ ಡಿಕೆ ಸಹೋದರರಿಂದ ಟಿಕೆಟ್ ವಂಚನೆಯಾಗಿದೆ. ಅದೇನ್ ಮಾಡುತ್ತಾರೋ ಮಾಡಲಿ. ಹೊಡೆದು ಹಾಕಿಬಿಡ್ತಾರಾ ಹೊಡೆದು ಹಾಕಲಿ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಿಸಿದ್ದಾರೆ.
ಬೀಳಗಿ – ಬಸವಪ್ರಭು ಸರನಾಡಗೌಡ
ಕಾಂಗ್ರೆಸ್ ಮತ್ತೆ ಜೆ.ಟಿ. ಪಾಟೀಲ್‍ಗೆ ಟಿಕೆಟ್ ಕೊಟ್ಟಿರುವುದಕ್ಕೆ ಮತ್ತೋರ್ವ ಆಕಾಂಕ್ಷಿ ಬಸವಪ್ರಭು ಸರನಾಡಗೌಡ ರೆಬೆಲ್ ಆಗುವ ಸುಳಿವು ನೀಡಿದ್ದಾರೆ.
ಮುಧೋಳ – ಸತೀಶ್ ಬಂಡಿವಡ್ಡರ
ಮಾಜಿ ಮಂತ್ರಿ ಆರ್.ಬಿ ತಿಮ್ಮಾಪುರ್‌ಗೆ ಮತ್ತೆ ಮಣೆ ಹಾಕಿರುವುದನ್ನು ಮತ್ತೋರ್ವ ಆಕಾಂಕ್ಷಿ ಸತೀಶ್ ಬಂಡಿವಡ್ಡರ್‌ಗೆ ಸಹಿಸಿಕೊಳ್ಳಲು ಆಗಿಲ್ಲ. ಪಕ್ಷೇತರರಾಗಿ ಸ್ಫರ್ಧೆ ಮಾಡುವ ಸುಳಿವು ಕೊಟ್ಟಿದ್ದಾರೆ.
ಬಾಗಲಕೋಟೆ – ದೇವರಾಜ ಪಾಟೀಲ್
ಮತ್ತೆ ಹೆಚ್.ವೈ ಮೇಟಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿರುವುದರಿಂದ ದೇವರಾಜ್ ಪಾಟೀಲ್ ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಗಂಗಾವತಿ – ಹೆಚ್‍ಆರ್ ಶ್ರೀನಾಥ್
ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ನೀಡಲಾಗಿದೆ. ಹೆಚ್.ಆರ್ ಶ್ರೀನಾಥ್‍ಗೆ ಟಿಕೆಟ್ ಮಿಸ್ ಆಗಿರುವುದರಿಂದ ಕಾಂಗ್ರೆಸ್ ವಿರುದ್ಧ ಈಡಿಗ ಸಮುದಾಯ ಆಕ್ರೋಶ ಹೊರಹಾಕಿದೆ. ಕಾಂಗ್ರೆಸ್ ತನ್ನ ನಿರ್ಧಾರ ಪುನರ್ ಪರಿಶೀಲನೆ ಮಾಡಬೇಕು ಎಂದು ಎಚ್ಚರಿಕೆ ಕೊಟ್ಟಿದೆ.
ಚನ್ನಗಿರಿ – ವಡ್ನಾಳ್ ರಾಜಣ್ಣ
ಚನ್ನಗಿರಿ ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ವಡ್ನಾಳ್ ರಾಜಣ್ಣ ಸಹೋದರನ ಪುತ್ರ ವಡ್ನಾಳ್ ಆಶೋಕ್‍ಗೆ ಟಿಕೆಟ್ ನೀಡುವಂತೆ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. ವಡ್ನಾಳ್ ಕುಟುಂಬಸ್ಥರು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಸಿದ್ದರಾಮಯ್ಯ ಭೇಟಿಯಾಗಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಮಂಡ್ಯ – ಕೀಲಾರ ರಾಧಾಕೃಷ್ಣ
ರವಿಕುಮಾರ್‌ಗೆ ಮಂಡ್ಯ ಟಿಕೆಟ್ ನೀಡಿರುವುದನ್ನು ವಿರೋಧಿಸಿ ರಾಧಕೃಷ್ಣ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಕಾರ್ಯಕರ್ತರನ್ನು ಸಮಾಧಾನಪಡಿಸಿರುವ ಅವರು, ಶೀಘ್ರವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಆತ್ಮಾನಂದ ನೇತೃತ್ವದಲ್ಲಿ ಮೂಲ ಕಾಂಗ್ರೆಸ್ಸಿಗರು ಸಭೆ ನಡೆಸಿದ್ದಾರೆ.
ಯಾದಗಿರಿ – ಅಬ್ದುಲ್ ಜಲೀಲ್, ಕಾಮರೆಡ್ಡಿ ಅಸಮಾಧಾನ
ಯಾದಗಿರಿಯಲ್ಲಿ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್‌ಗೆ ಟಿಕೆಟ್ ನೀಡಲಾಗಿದೆ. ಈ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಗಳಾದ ಅಬ್ದುಲ್ ಜಲೀಲ್, ಎಸ್‍ಬಿ ಕಾಮರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ತೀರ್ಮಾನಕ್ಕೆ ಬರಲು ನಿರ್ಧರಿಸಿದ್ದಾರೆ
ಉಡುಪಿ – ಕೃಷ್ಣಮೂರ್ತಿ ಆಚಾರ್ಯ
ಮೊಗವೀರ ಮುಖಂಡ ಪ್ರಸಾದ್ ಕಾಂಚನ್‍ಗೆ ಟಿಕೆಟ್ ಘೋಷಣೆ ಮಾಡಿದ್ದಕ್ಕೆ ಕೃಷ್ಣಮೂರ್ತಿ ಆಚಾರ್ಯ ಕಿಡಿಕಾರಿದ್ದಾರೆ. ಉಡುಪಿ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷೇತರನಾಗಿ ಕಣಕ್ಕಿಳಿಯಲು ಕೃಷ್ಣಮೂರ್ತಿ ಆಚಾರ್ಯ ಚಿಂತನೆ ನಡೆಸಿದ್ದಾರೆ.