ಬೆಂಗಳೂರು: ಕರ್ನಾಟಕ ಚುನಾವಣೆಗೆ (Karnataka Election) ದಿನಗಣನೆ ಆರಂಭವಾಗಿದ್ದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಈಗಾಗಲೇ ಬಿಡುಗಡೆ ಆಗಿದೆ. 224 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಮುಂದಾದ ಕಾಂಗ್ರೆಸ್‍ಗೆ (Congress) ಕೆಲವು ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಗಳ (Candidates) ಕೊರತೆ ಎದುರಾಗಿದೆ.
ಅದರಲ್ಲೂ ಪ್ರಮುಖ 4 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಚನ್ನಪಟ್ಟಣ, ಯಶವಂತಪುರ, ಕೆ.ಆರ್.ಪುರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಸೂಕ್ತ ಅಭ್ಯರ್ಥಿಗಳು ಸಿಕ್ಕಿಲ್ಲ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಕೋಲಾರದಲ್ಲಿ ಮತ್ತೆ ʻಮುಂದಿನ ಸಿಎಂ ಸಿದ್ದರಾಮಯ್ಯʼ ಘೋಷಣೆ – ಕೈ ನಾಯಕರ ಭಾಷಣಕ್ಕೂ ಅಡ್ಡಿಪಡಿಸಿದ ಕಾರ್ಯಕರ್ತರು
ಸ್ಕ್ರೀನಿಂಗ್ ಸಮಿತಿಯಲ್ಲೂ ಈ ಬಗ್ಗೆ ಚರ್ಚೆ ಆಗಿದ್ದು, ಯಾರನ್ನಾದರೂ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮೊದಮೊದಲು ಆಸಕ್ತಿ ತೋರಿದ್ದ ಕೆಲವರು ಕಡೇ ಗಳಿಗೆಯಲ್ಲಿ ಹಿಂದೇಟು ಹಾಕಿದ್ದರಿಂದ ಕಾಂಗ್ರೆಸ್ ಹೊಸ ಅಭ್ಯರ್ಥಿಗಳ ಹುಡುಕಾಟದಲ್ಲಿದೆ.
ಯಶವಂತಪುರದಿಂದ ಎಸ್‌ಟಿ ಸೋಮಶೇಖರ್, ಕೆಆರ್ ಪುರದಿಂದ ಭೈರತಿ ಬಸವರಾಜ್, ಚಿಕ್ಕಬಳ್ಳಾಪುರದಿಂದ ಸುಧಾಕರ್ ಕಣಕ್ಕೆ ಇಳಿಯಲಿದ್ದಾರೆ. ಕಾಂಗ್ರೆಸ್ ನಾಯಕರಾಗಿದ್ದ ಇವರು ಆಪರೇಷನ್ ಕಮಲದ ಮೂಲದ ಬಿಜೆಪಿಗೆ ವಲಸೆ ಬಂದಿದ್ದಾರೆ. ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ.