ಬೆಂಗಳೂರು: ಕ್ಷೇತ್ರ ಆಯ್ಕೆಯ ಗೊಂದಲದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಆಪ್ತರು 5 ಕ್ಷೇತ್ರಗಳ ಆಯ್ಕೆಯನ್ನು ನೀಡಿದ್ದಾರೆ.
ಕೋಲಾರದಲ್ಲಿ (Kolara) ಸ್ಪರ್ಧಿಸಲು ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದರು. ಆದರೆ ಕಾಂಗ್ರೆಸ್ (Congress) ಹೈಕಮಾಂಡ್ ರೆಡ್ ಸಿಗ್ನಲ್ ತೋರಿಸಿದ ಹಿನ್ನೆಲೆಯಲ್ಲಿ ವರುಣಾದಲ್ಲಿ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ವರುಣಾದಲ್ಲಿ ಸ್ಪರ್ಧಿಸಿದರೆ ಪುತ್ರ ಯತೀಂದ್ರನ ರಾಜಕೀಯ ಬೆಳವಣಿಗೆಗೆ ಸಮಸ್ಯೆಯಾಗಬಹುದು ಎಂದು ಸಿದ್ದರಾಮಯ್ಯ ಬೇರೆ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ
ಸಿದ್ದರಾಮಯ್ಯ ಬೇರೆ ಕ್ಷೇತ್ರಗಳತ್ತ ಕಣ್ಣು ಹಾಕಿದ ಬೆನ್ನಲ್ಲೇ ಆಪ್ತರು 5 ಕ್ಷೇತ್ರಗಳ ಆಯ್ಕೆಯನ್ನು ನೀಡಿದ್ದಾರೆ. ಐದರಲ್ಲಿ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಗೆಲುವು ಸುಲಭ. ನೀವು ರಾಜ್ಯವನ್ನು ಸುಲಭವಾಗಿ ಸುತ್ತಬಹುದು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟಕ್ಕೆ ಕುಮಾರಸ್ವಾಮಿ ವ್ಯಂಗ್ಯ!
5 ಕ್ಷೇತ್ರಗಳು ಯಾವುದು?
ವರುಣಾ: ಸಿದ್ದರಾಮಯ್ಯ ತವರು ಕ್ಷೇತ್ರ. ಅಲ್ಲಿಂದ ಸ್ಪರ್ಧೆ ಮಾಡಿದರೆ ಸುಲಭ ಗೆಲುವು ಸಾಧ್ಯ.
ಚಾಮರಾಜಪೇಟೆ: ಸಿದ್ದರಾಮಯ್ಯ ಆಪ್ತ ಶಾಸಕ ಜಮೀರ್ ಅಹಮದ್ ಪ್ರತಿನಿಧಿಸುವ ಕ್ಷೇತ್ರ. ಸಿದ್ದರಾಮಯ್ಯ ನಾಮಪತ್ರ ಸಲ್ಲಿಸಿ ಒಮ್ಮೆ ಪ್ರಚಾರಕ್ಕೆ ಹೋಗಿ ಬಂದರೆ ಸಾಕು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಜಮೀರ್ ವಹಿಸಿಕೊಳ್ಳಲಿದ್ದಾರೆ.
ಹೆಬ್ಬಾಳ: ಸಿದ್ದರಾಮಯ್ಯ ಆಪ್ತ ಬೈರತಿ ಸುರೇಶ್ ಬೆಂಗಳೂರಿನ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಜಾತಿ ಸಮೀಕರಣದಲ್ಲೂ ಈ ಕ್ಷೇತ್ರ ಸಿದ್ದು ಪಾಲಿಗೆ ಸೇಫ್.
ಬಾದಾಮಿ: ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಪ್ರತಿಧಿಸಿದ್ದ ಕ್ಷೇತ್ರ. ಕಳೆದ ಬಾರಿಯಂತೆ ಈ ಬಾರಿ ಇಲ್ಲಿ ಪೈಪೋಟಿ ಇಲ್ಲ. ಇಲ್ಲಿ ಸ್ಪರ್ಧಿಸಿದರೆ ಗೆಲುವು ಸುಲಭ ಎಂದು ಆಪ್ತರು ಸಲಹೆ ನೀಡಿದ್ದಾರೆ.
ಕೊಪ್ಪಳ: ಸಿದ್ದರಾಮಯ್ಯ ಆಪ್ತ ರಾಘವೇಂದ್ರ ಹಿಟ್ನಾಳ್ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಜಾತಿ ಸಮೀಕರಣದಲ್ಲೂ ಈ ಕ್ಷೇತ್ರ ಸೇಫ್ ಆಗಿದ್ದು ಇಲ್ಲೂ ಸ್ಪರ್ಧೆ ಮಾಡಬಹುದು ಎಂಬ ಸಲಹೆ ಬಂದಿದೆ.