ಗದಗ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election) ದಿನಾಂಕ ಘೋಷಣೆಯಾಗಿದ್ದು, ರಣಕಣ ರಂಗೇರಿದೆ. ಜಿಲ್ಲೆಯ ರೋಣ ಕ್ಷೇತ್ರದಲ್ಲಿ ಇತ್ತೀಚಿನ ಅನಿರೀತ ಬೆಳವಣಿಗೆಗಳಿಂದ ರಾಷ್ಟ್ರೀಯ ಪಕ್ಷಗಳ ಮತಬ್ಯಾಂಕ್ ಛಿದ್ರಗೊಳ್ಳುವ ಲಕ್ಷಣ ಕಾಣುತ್ತಿವೆ. ಸದ್ಯದ ಈ ಬೆಳವಣಿಗೆಗಳು ಬಿಜೆಪಿ (BJP) ಶಾಸಕ ಕಳಕಪ್ಪ ಬಂಡಿ ಮತ್ತು ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಮಾಜಿ ಶಾಸಕ ಜಿ.ಎಸ್. ಪಾಟೀಲರಿಗೆ (GS Patil) ತಲೆನೋವಾಗಿ ಪರಿಣಮಿಸಿವೆ.
ಏಕೆಂದರೆ ರೋಣ ಕ್ಷೇತ್ರದಲ್ಲಿ (Rona Constituency) ಒಬ್ಬರ ಸಕ್ರೀಯ ರಾಜಕಾರಣವು ಮತ್ತೊಬ್ಬರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ. ರಾಜಕಾರಣ ಮತ್ತು ಕುಟುಂಬದ ವ್ಯವಹಾರದಲ್ಲಿ ಸಮತೋಲನ ಸಾಧಿಸಿದ್ದ ಬಂಡಿ ಬ್ರದರ್ಸ್ ನಡುವೆ ಟಿಕೆಟ್‌ಗಾಗಿ ಪೈಪೋಟಿ ಸೃಷ್ಟಿಯಾಗಿದೆ. ಬಿಜೆಪಿ ಶಾಸಕ ಕಳಕಪ್ಪ ಬಂಡಿಗೆ ಸಹೋದರ ಸಿದ್ದಪ್ಪ ಬಂಡಿ ನೂತನ ಬಿಜೆಪಿ ಆಕಾಂಕ್ಷಿಯಾಗಿ ಮಗ್ಗಲ ಮುಳ್ಳಾಗಿ ಪರಿಣಮಿಸಿದ್ದಾರೆ. ಇದನ್ನೂ ಓದಿ: Karnataka Politics: ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದ ಪರ್ವ ಏಳು ಬೀಳುಗಳು
Advertisement
Advertisement
ರಾಜ್ಯ ಮತ್ತು ರಾಷ್ಟ್ರ ನಾಯಕರನ್ನ ಸಂಪರ್ಕಿಸಿ ಸಹೋದರ ಸಿದ್ದಪ್ಪ ಬಂಡಿ ತನಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಪಂಚಮಸಾಲಿ ಮತದಾರರಲ್ಲೂ ಗೊಂದಲ ಸೃಷ್ಟಿಯಾಗಿದೆ. ಸಹೋದರರ ಕಚ್ಚಾಟದಿಂದ ಬಿಜೆಪಿ ಮತ ಬ್ಯಾಂಕ್‌ಗೆ ಅಪಾಯ ತಂದೊಡ್ಡಬಹುದು ಎಂಬ ಲೆಕ್ಕಾಚಾರಗಳಿವೆ. ಇದನ್ನೂ ಓದಿ: Mood Of Karnataka – ಬೆಂಗಳೂರಿನಲ್ಲಿ ಬಿಜೆಪಿಗೆ ಮುನ್ನಡೆ, ಕಾಂಗ್ರೆಸ್‌ಗೆ ಶಾಕ್
Advertisement
ರಾಜಕಾರಣಿಗಳ ಕೆಲವು ನಡೆಗಳು ಸ್ವಯಂಕೃತ ಅಪರಾಧಕ್ಕೆ ಎಡೆ ಮಾಡಿಕೊಡುತ್ತಿದ್ದು, ಸರಳ ಮಾರ್ಗವನ್ನೇ ಮತ್ತಷ್ಟು ಕಠಿಣ ಮಾಡಿಕೊಳ್ಳುತ್ತಾ ಸಾಗುತ್ತಿದ್ದಾರೆ. ಹೊಸಬರ ಎಂಟ್ರಿಯಿಂದ ರಾಷ್ಟ್ರೀಯ ಪಕ್ಷಗಳ ಮತ ಬ್ಯಾಂಕ್‌ಗೆ ಕೊಳ್ಳಿ ಇಟ್ಟಂತಾಗಿದೆ. ಕ್ಷೇತ್ರಕ್ಕೆ ಬಿಜೆಪಿಯಿಂದಲೇ (BJP) 7 ಜನರು ಟಿಕೆಟ್ ಪೈಪೋಟಿಗೆ ಬಿದ್ದಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಲಾಭವಾಗುತ್ತೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಆದ್ರೆ ಎಎಪಿ ಅಭ್ಯರ್ಥಿ ಆನೇಕಲ್ ದೊಡ್ಡಯ್ಯನಿಂದ ಕಾಂಗ್ರೆಸ್ಸಿನ (Congress) ಗಟ್ಟಿ ಮತ ಬ್ಯಾಂಕ್ ಆಗಿರುವ ಕುರುಬ ಸಮುದಾಯದ ಕೆಲವು ಪ್ರತಿಶತದಷ್ಟು ಮತಗಳು ಚದುರಬಹುದು ಎಂದೂ ಅಂದಾಜಿಸಲಾಗಿದೆ.
Advertisement
ಕುರುಬ ಸಮುದಾಯದಿಂದ ಪ್ರತಿನಿಧಿಸುವ ಆನೇಕಲ್ ದೊಡ್ಡಯ್ಯ (Anekal Doddaiah) ಎಎಪಿಯಿಂದ (AAP) ಸ್ಪರ್ಧೆ ಮಾಡುತ್ತಿದ್ದು, ಎಎಪಿ ಮತಗಳನ್ನು ಸೆಳೆಯುವುದರ ಮೇಲೆ ಕಾಂಗ್ರೆಸ್ ಫಲಿತಾಂಶ ನಿರ್ಧಾರವಾಗುತ್ತೆ ಎನ್ನೋದು ಚರ್ಚೆಯಲ್ಲಿರುವ ವಿಷಯ. ಹೀಗಾಗಿ ಹಾಲಿ ಶಾಸಕ ಕಳಕಪ್ಪ ಬಂಡಿ ಮತ್ತು ಜಿ.ಎಸ್ ಪಾಟೀಲ ಅವರಿಗೆ ಸಿದ್ದಪ್ಪ ಬಂಡಿ ಮತ್ತು ಆನೇಕಲ್ ದೊಡ್ಡಯ್ಯ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಇದನ್ನೂ ಓದಿ: Mood Of Karnataka – `ಪಬ್ಲಿಕ್’ ಸರ್ವೆಯಲ್ಲಿ ಕರ್ನಾಟಕ ಕುರುಕ್ಷೇತ್ರ ಅತಂತ್ರ
ದಕ್ಷಿಣ ಭಾರತದ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳು ಪರಿಪೂರ್ಣವಾಗಿ ನೆಲೆ ಕಂಡಿದ್ದು ಕರ್ನಾಟಕದಲ್ಲಿ. ಹೀಗಾಗಿ ಈ ಬಾರಿ ಶತಾಯ ಗತಾಯದಿಂದ ಅಧಿಕಾರಕ್ಕೆ ಬರಬೇಕು ಎನ್ನುವ ಹಂಬಲವನ್ನು ರಾಷ್ಟ್ರೀಯ ಪಕ್ಷಗಳು ಹೊಂದಿವೆ. ಪ್ರಯತ್ನಿಸಿದರೆ ಗೆಲ್ಲಬಹುದು ಎಂಬ ಕ್ಷೇತ್ರಗಳಲ್ಲಿ ರೋಣ ಕ್ಷೇತ್ರವು ಒಂದಾಗಿದೆ. ಟಿಕೆಟ್‌ಗಾಗಿ ಪೈಪೋಟಿ, ಪಕ್ಷಗಳ ಮತಬ್ಯಾಂಕ್ ಛಿದ್ರಗೊಳ್ಳುವಂತಹ ಬೆಳವಣಿಗೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಲೆನೋವು ತಂದೊಡ್ಡಿವೆ.
ಮತ ಛಿದ್ರಗೊಳಿಸುವವರಾರು?
ಎಬಿವಿಪಿ ರಾಜ್ಯ ಕಾರ್ಯದರ್ಶಿಯಾಗಿ, ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿ, ಯುವ ಬ್ರಿಗೇಡ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಅನೇಕಲ್ ದೊಡ್ಡಯ್ಯ ಅವರು, ಬ್ರಿಗೇಡ್ ಹಾಗೂ ಪಕ್ಷದಲ್ಲಿ ಅಸ್ತಿತ್ವ ಸಿಗದ ಕಾರಣ ಬೇಸತ್ತು ಇತ್ತೀಚೆಗೆ ಎಎಪಿ ಸೇರಿಕೊಂಡಿದ್ದರು. ಕುರುಬ ಮತಗಳನ್ನೊಳಗೊಂಡು ರೋಣದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಅಹಿಂದ ಮತಗಳಿವೆ. ಈ ಕಾರಣ ರೋಣ ಕ್ಷೇತ್ರ ಆಯ್ಕೆ ಮಾಡಿಕೊಂಡು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇನ್ನೂ ಶಾಸಕರ ಸಹೋದರ ಸಿದ್ದಪ್ಪ ಬಂಡಿ ಗಜೇಂದ್ರಗಡ ಪುರಸಭೆ ಮಾಜಿ ಅಧ್ಯಕ್ಷನಾಗಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ಹಾಗೂ ಬಿಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ಮೊದಲು ಸಹೋದರ ಕಳಕಪ್ಪ ಬಂಡಿ ಎಲ್ಲಾ ಕೆಲಸ ಕಾರ್ಯಗಳನ್ನ ತಾನೇ ಮುಂದೆ ನಿಂತುಕೊಂಡು ನೋಡಿಕೊಳ್ಳುತ್ತಿದ್ದರು. ಈಗ ಈ ಅದೇ ಸಹೋದರ ಸವಾಲ್ ಹಾಕಿ, ಪ್ರತಿ ಸ್ಪರ್ಧಿಯಾಗಿ ಕಣಕ್ಕಿಳಿದಿದ್ದಾರೆ. ಈ ಹಿಂದೆ ಅಹಿಂದ ಮತಗಳ ಸಂಖ್ಯೆ ಅಧಿಕ ಇರುವ ಹಿನ್ನೆಲೆ ಮಾಜಿ ಸಿ.ಎಂ ಸಿದ್ದರಾಮಯ್ಯ 2023ರ ಚುನಾವಣೆಗೆ ಕ್ಷೇತ್ರ ಹುಡುಕಾಟದಲ್ಲಿದ್ದ ಸಂದರ್ಭದಲ್ಲಿ ರೋಣ ಕ್ಷೇತ್ರದ ಗುಪ್ತಚರ ವರದಿ ತರಿಸಿಕೊಂಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಕ್ಷೇತ್ರದಲ್ಲಿ ಒಟ್ಟು 2 ಲಕ್ಷ 27 ಸಾವಿರ ಮತಗಳಿವೆ. ಒಟ್ಟು 1.13 ಲಕ್ಷ ಮಹಿಳಾ ಮತಗಳು ಹಾಗೂ 1.14 ಲಕ್ಷ ಪುರುಷ ಮತಗಳು ಈ ಕ್ಷೇತ್ರದಲ್ಲಿವೆ. ಇದರಲ್ಲಿ ಅಹಿಂದ ಮತಗಳು 1.10 ಲಕ್ಷ ಇವೆ. ಎರಡೂ ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳ ಕಣ್ಣು ಕ್ಷೇತ್ರದ ಅಹಿಂದ ಮತಗಳ ಮೇಲಿವೆ. ಒಟ್ಟಿನಲ್ಲಿ ಅಹಿಂದ ಮತಗಳು ಕಾಂಗ್ರೆಸ್‌ಗೆ ವರವಾಗುತ್ತಾ? ಅಥವಾ ಆಪ್ ಪಕ್ಷದ ಅಹಿಂದ ಅಭ್ಯರ್ಥಿಯ ಪರವಾಗುತ್ತಾ? ಅಥವಾ ಆಡಳಿತ ಪಕ್ಷದ ತೆಕ್ಕೆಗೆ ಬಿಳುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.