ಬೆಂಗಳೂರು: ಹಠಾತ್ ಅನಾರೋಗ್ಯದ ಹಿನ್ನೆಲೆಯಲ್ಲಿ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದ ಡಿಸಿಎಂ ಡಾ. ಜಿ. ಪರಮೇಶ್ವರ್(Parameshwara) ಅವರ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದ್ದು ಇಂದು ಸಂಜೆ ಡಿಸ್ಚಾರ್ಜ್ ಆಗಲಿದ್ದಾರೆ.
ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಶ್ರೀನಿವಾಸ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ತೀವ್ರ ಸುಸ್ತು ಹಾಗೂ ಹೃದಯ ಬಡಿತ (Heart Rate) ಏಕಾಏಕಿ ಹೆಚ್ಚಾಗಿದ್ದರಿಂದ ಸಚಿವರು ಆಸ್ಪತ್ರೆಗೆ ಬಂದಿದ್ದರು. ಸಾಮಾನ್ಯ ಸಂದರ್ಭದಲ್ಲಿ ಹೃದಯ ಬಡಿತ 70 ರಿಂದ 90 ಇರಬೇಕಾಗುತ್ತದೆ. ಆದರೆ ಸಚಿವರು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಅವರ ಹೃದಯ ಬಡಿತ 160 ರಿಂದ 170 ರಷ್ಟಿತ್ತು. ಕೂಡಲೇ ಇಸಿಜಿ (ECG) ಸೇರಿದಂತೆ ಅಗತ್ಯ ವೈದ್ಯಕೀಯ ತಪಾಸಣೆಗಳನ್ನು ನಡೆಸಿ ತಕ್ಷಣದ ಚಿಕಿತ್ಸೆ ನೀಡಲಾಯಿತು ಎಂದು ತಿಳಿಸಿದರು.
ಸದ್ಯ ಅವರ ಇಸಿಜಿ ಮತ್ತು ಇತರ ಎಲ್ಲಾ ಆರೋಗ್ಯ ಪರೀಕ್ಷಾ ವರದಿಗಳು ನಾರ್ಮಲ್ ಬಂದಿವೆ. ಅವರು ಆರೋಗ್ಯವಾಗಿದ್ದು, ಆಹಾರ ಸೇವಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಚಿವರು ಪ್ರಸ್ತುತ ಅಪಾಯದಿಂದ ಪಾರಾಗಿದ್ದು, ಇಂದೇ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು. ಆದರೆ ಮುಂದಿನ ಎರಡು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯಕೀಯ ಸಲಹೆ ನೀಡಲಾಗಿದೆ ಎಂದು ಹೇಳಿದರು.
