- ಗ್ರಾಮೀಣ ಪ್ರದೇಶದ ರೈತರ ಮನೆ, ತೋಟದ ಮನೆ, ದನದ ಕೊಟ್ಟಿಗೆಗಳಿಗೂ ಸಂಪೂರ್ಣ ವಿನಾಯಿತಿ
ಬೆಂಗಳೂರು: ರಾಜ್ಯಾದ್ಯಂತ (Karnataka) ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ (Electricity Connection) ಪಡೆಯಲು ಎದುರಾಗುತ್ತಿದ್ದ ಪ್ರಮುಖ ತೊಂದರೆಯೊಂದನ್ನು ನಿವಾರಿಸಲು ಕರ್ನಾಟಕ ಸರ್ಕಾರ ಅತ್ಯಂತ ಮಹತ್ವದ ತೀರ್ಮಾನ ಕೈಗೊಂಡಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ದಿಷ್ಟ ಮಿತಿಯೊಳಗಿನ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪ್ರಮಾಣ ಪತ್ರ (Occupation Certificate – OC) ಒದಗಿಸುವುದರಿಂದ ಒಂದು ಬಾರಿಯ ಕ್ರಮವಾಗಿ ವಿನಾಯಿತಿ (OC Relaxation) ನೀಡಿ ಇಂಧನ ಇಲಾಖೆಯು ಇಂದು (ಜೂ.22) ಅಧಿಕೃತ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಿರ್ಣಯದ ಹಿನ್ನೆಲೆಯಲ್ಲಿ ಈ ಜನಪರ ಆದೇಶವನ್ನು ಜಾರಿಗೊಳಿಸಲಾಗಿದೆ. ಇದನ್ನೂ ಓದಿ: ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಕಾಯುತ್ತಿರೋ ಜನರಿಗೆ ಗುಡ್ ನ್ಯೂಸ್ – ಒಸಿಯಿಂದ ವಿನಾಯಿತಿ ನೀಡಿ ಸರ್ಕಾರ ಆದೇಶ
ವಿನಾಯಿತಿಯ ಪ್ರಮುಖ ಮಾರ್ಗಸೂಚಿಗಳು
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿ, ರಾಜ್ಯದಲ್ಲಿನ ಮಹಾನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿ ಸೇರಿದಂತೆ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಪ್ರಕಟಿಸಲಾಗಿದೆ.
ಕಟ್ಟಡದ ವಿಸ್ತೀರ್ಣ ಮತ್ತು ಮಿತಿ: 2400 ಚದರ ಅಡಿಗಳವರೆಗೆ (+20% ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ) ಅಳತೆಯ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ಜಿ+3 (G+3) ಅಂತಸ್ತಿನ ವಸತಿ ಕಟ್ಟಡಗಳು ಅಥವಾ ಸ್ಟಿಲ್ಟ್ ಪಾರ್ಕಿಂಗ್ + 4 ಮಹಡಿಗಳನ್ನು ಹೊಂದಿರುವ ವಸತಿ ಕಟ್ಟಡಗಳಿಗೆ ಮಾತ್ರ ಈ ವಿನಾಯಿತಿ ಅನ್ವಯಿಸುತ್ತದೆ.
ಯಾರಿಗೆ ಲಭ್ಯ?
ದಿನಾಂಕ 31.05.2026ರ ಒಳಗಾಗಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ಪ್ರಕರಣಗಳು.
ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿ ಪೂರ್ಣಗೊಳಿಸಿರುವ ಪ್ರಕರಣಗಳು.
ಯಾವುದೇ ವಿದ್ಯುತ್ ಸಂಪರ್ಕ ಪಡೆಯದೇ ಕಟ್ಟಡ ಕಾಮಗಾರಿ ಪೂರ್ಣಗೊಂಡಿರುವ ಪ್ರಕರಣಗಳು.
ಅರ್ಜಿ ಸಲ್ಲಿಸಲು ಕೊನೆಯ ಅವಕಾಶ
ಈ ಆದೇಶ ಹೊರಡಿಸಿದ ದಿನಾಂಕದಿಂದ ಅಂದರೆ ಜೂನ್ 22, 2026 ರಿಂದ ಮುಂದಿನ 15 ದಿನಗಳವರೆಗೆ ಮಾತ್ರ ಹೊಸದಾಗಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಗ್ರಾಮೀಣ ಪ್ರದೇಶ ಮತ್ತು ರೈತರಿಗೆ ವಿಶೇಷ ಸವಲತ್ತು
ಗ್ರಾಮೀಣ ಭಾಗದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಮತ್ತೊಂದು ಪ್ರಮುಖ ನಿರ್ಧಾರ ಕೈಗೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ರೈತರು ವಾಸಿಸುವ ಮನೆಗಳು ಹಾಗೂ ಕೃಷಿ ಪೂರಕ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪ್ರಮಾಣಪತ್ರ (OC) ಪಡೆಯುವುದರಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ರೈತರು ವಾಸಿಸುವ ಮನೆ ಮತ್ತು ತೋಟದ ಮನೆ.
ಕೃಷಿ ಉಪಕರಣಗಳನ್ನು ಇಡುವ ಮನೆ.
ದನದ ಕೊಟ್ಟಿಗೆ ಹಾಗೂ ರೇಷ್ಮೆ ಗೂಡಿನ ಮನೆಗಳಿಗೆ ವಿನಾಯಿತಿ ನೀಡಲಾಗಿದೆ.
ಈ ಆದೇಶದ ಅನ್ವಯ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ಸಾರ್ವಜನಿಕರಿಗೆ ವಿದ್ಯುತ್ ಸಂಪರ್ಕ ನೀಡಲು ಅನುಸರಿಸಬೇಕಾದ ಸಾಮಾನ್ಯ ಮಾರ್ಗಸೂಚಿಗಳನ್ನು ಇಂಧನ ಇಲಾಖೆಯು ಪ್ರತ್ಯೇಕವಾಗಿ ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಶೀಘ್ರವೇ ಬಸ್ ಟಿಕೆಟ್ ದರ ಏರಿಕೆ – BMTC 44%, KSRTC 33% ರಷ್ಟು ಹೆಚ್ಚಳಕ್ಕೆ ಪ್ರಸ್ತಾಪ
