– ಮುಸ್ಲಿಂ ಮೀಸಲಾತಿಯನ್ನು4% ರಿಂದ 8% ಹೆಚ್ಚಿಸಿ
– ಲಿಂಗಾಯತ, ಒಕ್ಕಲಿಗರಿಗೆ ಕ್ರಮವಾಗಿ 8%,7% ಮೀಸಲಾತಿ
– ಎಸ್‌ಸಿ, ಎಸ್‌ಟಿ ಮೀಸಲಾತಿ ಯಥಾಸ್ಥಿತಿಯಲ್ಲಿ ಮುಂದುವರಿಕೆ
ಬೆಂಗಳೂರು: ಹಿಂದುಳಿದ ಜಾತಿಗಳ (ಒಬಿಸಿ) ಮೀಸಲಾತಿ (Reservation) ಪ್ರಮಾಣವನ್ನು 32% ರಿಂದ 51% ಏರಿಕೆ ಮಾಡುವಂತೆ ಕೆ. ಜಯಪ್ರಕಾಶ್ ಹೆಗ್ಡೆ (Jayaprakash Hegde) ಅಧ್ಯಕ್ಷತೆಯ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಲಿಂಗಾಯತರು, ಒಕ್ಕಲಿಗರು, ಮುಸ್ಲಿಮರು, ಹಿಂದುಳಿದ ತಳ ಸಮುದಾಯಗಳೂ ಸೇರಿಕೊಂಡಂತೆ ಇತರೇ ಹಿಂದುಳಿದ ಜಾತಿಗಳ (ಒಬಿಸಿ) ಪಟ್ಟಿಯಲ್ಲಿರುವ ವಿವಿಧ ಜಾತಿಗಳ ಮೀಸಲಾತಿಯನ್ನು ಮರುವರ್ಗೀಕರಿಸಿ ಆಯಾ ಜಾತಿಯವರ ಜನಸಂಖ್ಯೆಗೆ ಅನುಗುಣಗವಾಗಿ ಮೀಸಲಾತಿ ನೀಡಬೇಕೆಂದು ಶಿಫಾರಸಿನಲ್ಲಿ ಉಲ್ಲೇಖಿಸಿದೆ.
ಶುಕ್ರವಾರ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಹೆಚ್.ಕಾಂತರಾಜ ನೇತೃತ್ವದ ಆಯೋಗ ನಡೆಸಿದ್ದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು (ಜಾತಿ ಜನಗಣತಿ) ಆಧರಿಸಿ ಹೆಗ್ಡೆ ನೇತೃತ್ವದ ಆಯೋಗವು 2024ರ ಫೆಬ್ರುವರಿಯಲ್ಲಿ ಸಲ್ಲಿಸಿದ್ದ ‘2015ರ ದತ್ತಾಂಶಗಳ ಅಧ್ಯಯನ ವರದಿ 2024’ರ ಶಿಫಾರಸು ಹಾಗೂ ಮುಖ್ಯಾಂಶಗಳನ್ನು ಮಂಡಿಸಲಾಯಿತು. ಅದರ ವಿವರಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಶಿಫಾರಸ್ಸಿನಲ್ಲಿ ಏನಿದೆ?
ಒಟ್ಟು ರಾಜ್ಯದಲ್ಲಿ 6.35 ಕೋಟಿ ಜನಸಂಖ್ಯೆಯಿದ್ದು ಇದರಲ್ಲಿ 5.98 ಕೋಟಿ ಜರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಸದ್ಯ ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ 32% , ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ 24.1% ಮೀಸಲಾತಿ ಇದೆ. ಈಗ ಹಿಂದುಳಿದ ವರ್ಗಗಳ ಮೀಸಲಾತಿಯನ್ನು 51% ಏರಿಕೆ ಮಾಡಬೇಕು.
ಮುಸ್ಲಿಂ (Muslims) ಸಮುದಾಯದವರ ಮೀಸಲಾತಿ ಪ್ರಮಾಣವನ್ನು ಈಗಿರುವ 4% ನಿಂದ 8% ಏರಿಕೆ ಮಾಡಬೇಕು. ಮುಸ್ಲಿಂ ಸಮುದಾಯದ ಜನಸಂಖ್ಯೆ 75.27 ಲಕ್ಷದಷ್ಟಿದೆ. ಪರಿಶಿಷ್ಟ ಜಾತಿ ಬಳಿಕ ಮುಸ್ಲಿಂ ಸಮುದಾಯದವರ ಸಂಖ್ಯೆ ಹೆಚ್ಚಿರುವ ಕಾರಣ ಮೀಸಲಾತಿ ಕಲ್ಪಿಸಬೇಕು.
‘3 ಬಿ’ ಪಟ್ಟಿಯಲ್ಲಿರುವ ಲಿಂಗಾಯತ (Lingayat) ಹಾಗೂ ಅದರ ಉಪ ಜಾತಿಗಳ ಒಟ್ಟು ಜನಸಂಖ್ಯೆ 81 ಲಕ್ಷ ಇದೆ. ಅದರಲ್ಲಿ ಲಿಂಗಾಯತರ ಸಂಖ್ಯೆ 66 ಲಕ್ಷದಷ್ಟಿದೆ. ಸದ್ಯ ಮೀಸಲಾತಿ ಪ್ರಮಾಣ 5% ರಷ್ಟಿದೆ. ಜನಸಂಖ್ಯೆಗೆ ಅನುಗುಣವಾಗಿ 8%ಕ್ಕೆ ಏರಿಸಬೇಕು.
‘3 ಎ’ ಪಟ್ಟಿಯಲ್ಲಿರುವ ಒಕ್ಕಲಿಗ (Vokkaliga) ಮತ್ತು ಅದರ ಉಪ ಜಾತಿಗಳ ಒಟ್ಟು ಜನಸಂಖ್ಯೆ 72 ಲಕ್ಷದಷ್ಟಿದೆ. ಒಕ್ಕಲಿಗರು 61.50 ಲಕ್ಷದಷ್ಟಿದ್ದು, ಒಟ್ಟು ಮೀಸಲಾತಿ 4%ರಷ್ಟಿದೆ, ಅದನ್ನು 7% ಹೆಚ್ಚಿಸಬೇಕು. ಇದನ್ನೂ ಓದಿ: ಜಾತಿಗಣತಿ ವರದಿ ಸೀಲ್ ಓಪನ್… ಕ್ಯಾಬಿನೆಟ್‌ನಲ್ಲಿ ಮಂಡನೆ; ಮುಂದಿನ ಕ್ಯಾಬಿನೆಟ್‌ಗೆ ಕ್ಲೈಮ್ಯಾಕ್ಸ್!
ಎಸ್‌ಸಿ, ಎಸ್‌ಟಿ (SS, ST) ಒಟ್ಟಾರೆ ಜನಸಂಖ್ಯೆ 1.60 ಕೋಟಿಗೂ ಅಧಿಕ ಇದ್ದು ಸದ್ಯ ಪರಿಶಿಷ್ಟ ಜಾತಿಗೆ 17.15%, ಪರಿಶಿಷ್ಟ ಪಂಗಡಕ್ಕೆ 6.95% ಮೀಸಲಾತಿ ಇದೆ. ಈ ಮೀಸಲಾತಿ ಯಥಾಸ್ಥಿತಿಯಲ್ಲಿ ಮುಂದುವರಿಯಬೇಕು.
ಪ್ರವರ್ಗ 1ಕ್ಕೆ ಇದ್ದ ಮೀಸಲಾತಿಯನ್ನು 4% ರಿಂದ 6%ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. 2 ಎಗೆ 15% ರಷ್ಟಿದ್ದ ಮೀಸಲಾತಿಯನ್ನು ‘1 ಬಿ’ ಹಾಗೂ ‘2 ಎ’ಗೆ ಮರು ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ‘1 ಬಿ’ಗೆ 12% ಹಾಗೂ ‘2 ಎ’ಗೆ 10%ರಷ್ಟು ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ಹಿಂದುಳಿದ ಜಾತಿಯವರಿಗೆ (2ಎ)ಇದ್ದ 15% ಮೀಸಲಾತಿ 22% ರಷ್ಟು ಏರಿಕೆಯಾಗಿದೆ.
ಶಿಫಾರಸಿನಲ್ಲಿರುವ ಮೀಸಲಾತಿ ಪ್ರಮಾಣ ಎಷ್ಟು?
ಆವರಣದ ಒಳಗಡೆ ಇರುವುದು ಹಾಲಿ ಮೀಸಲಾತಿ ಪ್ರಮಾಣ
ಪ್ರವರ್ಗ 1ಎ – 35 ಲಕ್ಷ ಜನಸಂಖ್ಯೆ – 6% ಮೀಸಲಾತಿ (4%)
ಪ್ರವರ್ಗ 1ಬಿ – 73.94 ಲಕ್ಷ ಜನಸಂಖ್ಯೆ – 12% ಮೀಸಲಾತಿ
2ಎ – 77.78 ಲಕ್ಷ ಜನಸಂಖ್ಯೆ – 10% ಮೀಸಲಾತಿ(15%)
2ಬಿ – 75.27 ಲಕ್ಷ ಜನಸಂಖ್ಯೆ – 8% ಮೀಸಲಾತಿ(4%)
3ಎ – 72 ಲಕ್ಷ ಜನಸಂಖ್ಯೆ – 7% ಮೀಸಲಾತಿ (4%)
3ಬಿ – 81 ಲಕ್ಷ ಜನಸಂಖ್ಯೆ – 8% ಮೀಸಲಾತಿ(5%)
ಮೀಸಲಾತಿ ಸಾಧ್ಯವೇ?
ರಾಜ್ಯದಲ್ಲಿ ಸದ್ಯ ಹಿಂದುಳಿದ ವರ್ಗಗಳಿಗೆ ಈವರೆಗೆ 32% ಹಾಗೂ ಪರಿಶಿಷ್ಟ ಜಾತಿ–ಪಂಗಡದವರಿಗೆ 24.1%ರಷ್ಟು ಮೀಸಲಾತಿ ಇದೆ. ಹಿಂದುಳಿದವರ ಮೀಸಲಾತಿಯನ್ನು 51%ಕ್ಕೆ ಏರಿಸುವಂತೆ ಆಯೋಗ ತನ್ನ ಶಿಫಾರಸಿನಲ್ಲಿ ಹೇಳಿದೆ. ಈಗಿರುವ ಕಾನೂನಿನಂತೆ ಒಟ್ಟು ಮೀಸಲಾತಿ ಪ್ರಮಾಣ 50% ಮೀರುವಂತಿಲ್ಲ. ಈ ಶಿಫಾರಸಿನ ಅನ್ವಯ ಮೀಸಲಾತಿ ಏರಿಕೆ ಮಾಡಿದರೆ 75.1% ಹೋಗುತ್ತದೆ. ಇದರೆ ಜೊತೆ ಸದ್ಯ ಆರ್ಥಿಕವಾಗಿರುವ ದುರ್ಬಲ ವರ್ಗಕ್ಕೆ 10% ಮೀಸಲಾತಿಯೂ ಇದೆ. ಎಲ್ಲವನ್ನು ಸೇರಿಸಿದಾಗ ಒಟ್ಟು ಮೀಸಲಾತಿ ಪ್ರಮಾಣ 85.1% ಏರಿಕೆಯಾಗುತ್ತದೆ. ಸಾಮಾನ್ಯ ವರ್ಗಕ್ಕೆ 14.9% ಮೀಸಲಾತಿ ಲಭ್ಯವಾಗುತ್ತದೆ. ಹಿಂದುಳಿದವರ ಮೀಸಲು ಪ್ರಮಾಣವನ್ನು ಹೆಚ್ಚಿಸಬೇಕಾದರೆ ಕೇಂದ್ರ ಸರ್ಕಾರವು ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತಂದ ಬಳಿಕ ಮೀಸಲಾತಿ ಹೆಚ್ಚಿಸಬೇಕಾಗುತ್ತದೆ.
ಜಾತಿ ಗಣತಿ ಉದ್ದೇಶ ಏನು?
1931ರ ಜನಗಣತಿಯ ನಂತರ ಯಾವುದೇ ಜನಗಣತಿ ದಾಖಲೆಗಳಿಂದ ಜಾತಿ / ಸಮುದಾಯವಾರು ಜನಸಂಖ್ಯೆಯ ಅಂಕಿ-ಅಂಶಗಳು ಖಚಿತವಾಗಿ ದೊರೆಯುತ್ತಿಲ್ಲ. ಜಾತಿವಾರು ಜನಗಣತಿ ಅಂಕಿ-ಅಂಶಗಳು ಲಭ್ಯವಿಲ್ಲದೇ ಇರುವುದರಿಂದ ಕಾರ್ಯಕ್ರಮಗಳ ಮುಖಾಂತರ ಸೌಲಭ್ಯಗಳನ್ನು ಸಾಮಾಜಿಕ ನ್ಯಾಯ ತತ್ವದ ಆಧಾರದ ಮೇಲೆ ಒದಗಿಸುವುದು ಸರ್ಕಾರಕ್ಕೆ ಕಷ್ಟವಾಗುತ್ತಿತ್ತು.
ಸಮುದಾಯಗಳ ಈಗಿರುವ ಸ್ಥಿತಿಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾದ ವಿಶ್ಲೇಷಣೆ ನಡೆಸುವುದು, ಜನಸಂಖ್ಯೆಯ ಪ್ರಮಾಣವನ್ನು ತಿಳಿಯುವುದು ಅಗತ್ಯವಾಗಿದೆ ಎಂಬ ಉದ್ದೇಶಕ್ಕಾಗಿ ಆಗಿನ ಸಿದ್ದರಾಮಯ್ಯ ಸರ್ಕಾರ ಸಮೀಕ್ಷೆಗೆ ಆದೇಶಿಸಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿಗಳು ಹಾಗೂ ಇತರ ಜಾತಿಗಳನ್ನೊಳಗೊಂಡಂತೆ ರಾಜ್ಯದ ಪ್ರತಿಯೊಂದು ಕುಟುಂಬದ ಸಮಗ್ರ ಸಮೀಕ್ಷೆಯನ್ನು ಕೈಗೊಂಡು ವಿವಿಧ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವಿಶ್ಲೇಷಣೆ ಮಾಡಿ, ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸುವ ಕುರಿತು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಜವಾಬ್ದಾರಿಯನ್ನು ಆಯೋಗಕ್ಕೆ ನೀಡಲಾಗಿತ್ತು. ರಾಜ್ಯದ ಎಲ್ಲ ವರ್ಗಗಳ / ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಣೆಗೆ ಸೂಚಿಸಲಾಗಿತ್ತು.
ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅರಿಯಲು 158.47 ಕೋಟಿ ರೂ. ವೆಚ್ಚದಲ್ಲಿ ಹೆಚ್. ಕಾಂತರಾಜ (Kantharaju) ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ಸಮೀಕ್ಷೆ (Socio-Economic Survey) ನಡೆಸಿತ್ತು. ಈ ಆಯೋಗದ ಅವಧಿ ಮುಕ್ತಾಯದ ಸಂದರ್ಭದಲ್ಲಿ ವರದಿಯನ್ನು ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಸಿರಲಿಲ್ಲ. ಕಳೆದ ವರ್ಷ ಕೆ. ಜಯಪ್ರಕಾಶ್ ಹೆಗ್ಡೆ (Jayaprakash Hegde) ಅಧ್ಯಕ್ಷತೆಯ ಈಗಿನ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ವಿವಿಧ ವಿಷಯಕ್ಕೆ ಸಂಬಂಧಿಸಿದ ಟಿಪ್ಪಣಿಗಳೊಂದಿಗೆ 2015ರ ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿತ್ತು.
ಕಳೆದ ವರ್ಷದ ಫೆಬ್ರವರಿ 14ರಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಜಾತಿ ಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದರು. ಒಂದು ವರ್ಷದಿಂದಲೂ ವರದಿಯನ್ನು ಮುಟ್ಟದೇ ರಾಜ್ಯ ಸರ್ಕಾರ ಸುಮ್ಮನಿತ್ತು. ಕಳೆದ ವರ್ಷ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕ್ಯಾಬಿನೆಟ್‌ಗೆ ವರದಿ ತರಲು ಹಿಂದೇಟು ಹಾಕಿತ್ತು. ಆದರೆ ಈಗ ಕ್ಯಾಬಿನೆಟ್ ಮುಂದೆ ವರದಿಯನ್ನು ಮಂಡಿಸಿದೆ.