ಬೆಂಗಳೂರು: ಸದ್ಯಕ್ಕೆ ದಿಕ್ಕು ಕಾಣದಂತಾದ ರಾಜ್ಯ ಕಾಂಗ್ರೆಸನ್ನು ಮತ್ತೆ ಹಳಿಗೆ ತರಲು ಜಿಎಲ್‍ಡಿ ಸೂತ್ರಕ್ಕೆ ಮೊರೆ ಹೋಗುವ ಬಗ್ಗೆ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಗಂಭೀರ ಚರ್ಚೆ ನಡೆಯತೊಡಗಿದೆ.
ಜಿಎಲ್‍ಡಿ ಸೂತ್ರ ಬೇರೇನು ಅಲ್ಲ. ಗೌಡ, ಲಿಂಗಾಯತ ಹಾಗೂ ದಲಿತ ಸೂತ್ರ. ವಿಪಕ್ಷ ನಾಯಕನ ಸ್ಥಾನ, ಸಿಎಲ್‍ಪಿ ನಾಯಕನ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹೀಗೆ ಮೂರು ಪ್ರಮುಖ ಹುದ್ದೆಗಳು ಖಾಲಿ ಇವೆ.
ಒಕ್ಕಲಿಗ, ಲಿಂಗಾಯತ ಹಾಗೂ ದಲಿತ ಕಾಂಬಿನೇಷನಲ್ಲಿ ಈ ಸ್ಥಾನಗಳನ್ನು ತುಂಬಿದರೆ ರಾಜ್ಯದಲ್ಲಿ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿರುವ ಕಾಂಗ್ರೆಸ್ಸಿಗೆ ಸ್ವಲ್ಪಮಟ್ಟಿಗಾದರೂ ಚೈತನ್ಯ ಕೊಡಬಹುದು ಎನ್ನುವುದು ಕೈ ನಾಯಕರ ಲೆಕ್ಕಾಚಾರ.
ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅಹಿಂದ ಮತ ಬ್ಯಾಂಕ್ ಮೇಲೆ ಹಿಡಿತ ಹೊಂದಿದರೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳಲು ಸಫಲರಾಗಿಲ್ಲ. ಆದ್ದರಿಂದ ರಾಜ್ಯ ಕೈ ನಾಯಕರು ಅನಿವಾರ್ಯವಾಗಿ ಸಾಮೂಹಿಕ ನಾಯಕತ್ವದ ಅಡಿಯಲ್ಲಿ ಜಿಎಲ್‍ಡಿ ಅಸ್ತ್ರದ ಮೊರೆ ಹೋಗುವ ಸಾಧ್ಯತೆಯೇ ಹೆಚ್ಚಿದೆ. ಇದನ್ನೂ ಓದಿ: ಸಚಿವ ಸ್ಥಾನ ಸಿಗುವುದು ಪಕ್ಕಾ, ಆದ್ರೆ ಲೆಕ್ಕನೇ ಬೇರೆ – ಯಾರಿಗೆ ಯಾವ ಖಾತೆ ಮೇಲೆ ಕಣ್ಣು
ಜಿಎಲ್‍ಡಿ ಪ್ರಸ್ತಾಪ ರಾಜ್ಯ ಕಾಂಗ್ರೆಸ್ ನಾಯಕರಿಂದ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಸಾಮೂಹಿಕ ನಾಯಕತ್ವದ ಮೊರೆ ಹೋಗುವ ಬಗ್ಗೆ ಆಸಕ್ತಿ ಹೊಂದಿರುವ ಕಾಂಗ್ರೆಸ್ ಹೈಕಮಾಂಡ್ ಇದೆ ಸೂತ್ರವನ್ನು ಒಪ್ಪಿಕೊಳ್ಳುವ ಸಾಧ್ಯತೆಯೆ ಹೆಚ್ಚಿದೆ ಎನ್ನಲಾಗುತ್ತಿದೆ.
ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಮತದಾರರು ನೀಡಿರುವ ತೀರ್ಪನ್ನು ನಾನು ಒಪ್ಪಿಕೊಂಡಿದ್ದೇನೆ. ಕುದುರೆ ವ್ಯಾಪಾರಕ್ಕೆ ಒಳಗಾಗಿದ್ದವರಿಗೆ ಜನರು ಶಿಕ್ಷೆ ನೀಡುತ್ತಾರೆಂಬ ನಿರೀಕ್ಷೆ ಇತ್ತು. ಇಂದು ನನ್ನ ನಿರೀಕ್ಷೆ ಹುಸಿಯಾಗಿದ್ದು, ಜನಾದೇಶವನ್ನು ಒಪ್ಪಿಕೊಂಡಿದ್ದೇನೆ. ಕಾಂಗ್ರೆಸ್ ಶಾಸಕಾಂಗ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರಿಗೆ ಸಲ್ಲಿಸಿದ್ದೇನೆ ಎಂದು ಹೇಳಿದರು.