ಶಿವಮೊಗ್ಗ: ಲೋಕಸಭಾ ಉಪಚುನಾವಣೆಗೆ ಶಿವಮೊಗ್ಗದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರ ಅವರನ್ನು ಪಕ್ಷ ಸರ್ವಾನುಮತದಿಂದ ಆಯ್ಕೆ ಮಾಡಿದ್ದು, ಇದೇ 15ರಂದು ನಾಮಪತ್ರ ಸಲ್ಲಿಸಲು ತಿರ್ಮಾನಿಸಲಾಗಿದೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡರ ಮನೆಯಲ್ಲಿ ಭಾನುವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಯಿತು. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಕೆ.ಎಸ್.ಈಶ್ವರಪ್ಪ, ಆಯನೂರು ಮಂಜುನಾಥ್ ಹಾಗೂ ಇನ್ನಿತರ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
Advertisement
Advertisement
ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ರಾಘವೇಂದ್ರ ಅವರ ಹೆಸರನ್ನು ಕೆ.ಎಸ್.ಈಶ್ವರಪ್ಪ ಸೂಚಿಸಿದರೆ ಮಾಜಿ ಶಾಸಕ ಭಾನುಪ್ರಕಾಶ್ ಅನುಮೋದಿಸಿದರು. ಬಳಿಕ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕಿದ್ದು, ಕಾರ್ಯಕರ್ತರ ಶ್ರಮ ಅಗತ್ಯವಾಗಿದೆ. ಶಿವಮೊಗ್ಗ ಹಾಗೂ ರಾಜ್ಯದಲ್ಲಿ ಬಿಜೆಪಿಯನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂಬುದನ್ನು ತೋರಿಸಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
Advertisement
ಜಿಲ್ಲೆಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳು ಸ್ಥಾನವನ್ನು ಬಿಜೆಪಿ ಪಡೆದಿದ್ದು, ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಮಹಾನಗರ ಪಾಲಿಕೆ ನಮ್ಮ ಕೈಯಲ್ಲಿ ಇದೆ. ಹಿಂದಿನ ಯಾವುದೇ ಚುನಾವಣೆಗೆ ಹೋಲಿಸಿದರೆ ಈ ಬಾರಿ ನಮ್ಮ ಶಕ್ತಿ ಇಮ್ಮಡಿಯಾಗಿದೆ. ಶ್ರೀರಾಮುಲು ಜೊತೆ ಮಾತನಾಡುತ್ತಿದ್ದೇನೆ. ಸೋಮವಾರ ಬಳ್ಳಾರಿಯ ಪ್ರಮುಖರನ್ನು ಬೆಂಗಳೂರಿಗೆ ಕರೆಸಿಕೊಂಡು ಅಲ್ಲಿಯೂ ಉತ್ತಮ ಅಭ್ಯರ್ಥಿಯನ್ನು ನಿಲ್ಲಿಸಲು ಪ್ರಯತ್ನ ಮಾಡುತ್ತಿದ್ದೇವೆ. ಮಂಡ್ಯದಲ್ಲೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದ್ದೇವೆ ಎಂದರು.
Advertisement
ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಸಾಧನೆಗಳನ್ನು ಜನರ ಮುಂದೆ ಇಟ್ಟು ಮತ ಕೇಳುತ್ತೇವೆ. ಈ ಕ್ಷೇತ್ರವನ್ನು ಮತ್ತೊಮ್ಮೆ ಬಿಜೆಪಿಗೆ ಉಳಿಸಿಕೊಳ್ಳಲಿದ್ದೇವೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv