ಬೆಂಗಳೂರು: ಈ ಅವಧಿಯ ಬಿಜೆಪಿ ಸರ್ಕಾರದ ಮೊದಲ ಬಜೆಟ್‍ಗೆ ಸಿದ್ಧತೆಗಳು ಪ್ರಾರಂಭವಾಗಿದೆ. ಸಿಎಂ ಯಡಿಯೂರಪ್ಪ ಮಾರ್ಚ್ ನಲ್ಲಿ ಬಜೆಟ್ ನ್ನ ಮಂಡನೆ ಮಾಡಲಿದ್ದು, ಈಗಾಗಲೇ ಸಿದ್ಧತೆ ಆರಂಭ ಮಾಡಿದ್ದಾರೆ. ವಿಶೇಷ ಅಂದರೆ ಈ ಬಾರಿಯೂ ರೈತರ ಪರವಾಗಿ ಬಜೆಟ್ ಮಂಡಿಸಲು ಸಿಎಂ ಸಿದ್ಧತೆ ಆರಂಭಿಸಿದ್ದಾರೆ.
ಸಿಎಂ ಯಡಿಯೂರಪ್ಪ ಮೂಲತಃ ರೈತಾಪಿ ಕುಟುಂಬದಿಂದ ಬಂದವರು. ಹೀಗಾಗಿ ರೈತರ ಮೇಲೆ ಬಿಎಸ್‍ವೈಗೂ ವಿಶೇಷ ಕಾಳಜಿ. 2008 ರಲ್ಲಿ ಸಿಎಂ ಆದಾಗ ಯಡಿಯೂರಪ್ಪ ಹೊಸ ಇತಿಹಾಸ ಸೃಷ್ಟಿ ಮಾಡಿ ವಿಶೇಷವಾಗಿ ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದ್ದರು. ರೈತರಿಗಾಗಿ ಮೀಸಲಿಟ್ಟ ಆ ಬಜೆಟ್ ರೈತಾಪಿ ವರ್ಗಕ್ಕೆ ಅನೇಕ ಕೊಡುಗೆಗಳನ್ನ ನೀಡಿತ್ತು. ಬಡ್ಡಿ ರಹಿತ ಸಾಲ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಯಂತ್ರೋಪಕರಣಗಳ ಖರೀದಿಗೆ ರಿಯಾಯ್ತಿ ಹೀಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ರೈತ ನಾಯಕ ಅನ್ನಿಸಿಕೊಂಡಿದ್ದರು.
Advertisement
Advertisement
ಈ ಬಾರಿ ರೈತರಿಗಾಗಿ ಪ್ರತ್ಯೇಕ ರೈತ ಬಜೆಟ್ ಮಂಡನೆ ಮಾಡಲು ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಈಗಾಗಲೇ ಸಿದ್ಧತೆ ಆರಂಭ ಮಾಡಿರುವ ಯಡಿಯೂರಪ್ಪ, ಸಾಮಾನ್ಯ ಬಜೆಟ್ ಜೊತೆಗೆ ವಿಶೇಷವಾಗಿ ಪ್ರತ್ಯೇಕ ರೈತ ಬಜೆಟ್ ಮಂಡನೆಗೂ ಪ್ಲ್ಯಾನ್ ಮಾಡಿದ್ದಾರೆ. ಪ್ರತ್ಯೇಕ ಬಜೆಟ್ ಮಂಡನೆ ಮಾಡಿದರೆ ರೈತಾಪಿ ವರ್ಗಕ್ಕೂ ಒಂದಷ್ಟು ಲಾಭ ಸಿಗುತ್ತವೆ. ಬರ, ನೆರೆಯಿಂದ ತತ್ತರಿಸಿರುವ ರೈತರಿಗೂ ಅನುಕೂಲ ಆಗಬಹುದು ಎಂಬ ನಿರೀಕ್ಷೆಯಿದೆ.