ಗ್ಯಾರಂಟಿಗೆ ಅನುದಾನ ಕಳೆದ ಬಾರಿ ಎಷ್ಟಿತ್ತು? ಈ ಬಾರಿ ಎಷ್ಟು ಹಂಚಿಕೆಯಾಗಿದೆ? ಸಾಲ ಎಷ್ಟು?

Public TV
2 Min Read
Congress Guarantee

ಬೆಂಗಳೂರು: ಪಂಚ ಗ್ಯಾರಂಟಿಗಳು ಸೇರಿ ಕಲ್ಯಾಣ ಕಾರ್ಯಕ್ರಮಗಳು ಉಚಿತ ಕೊಡುಗೆಗಳಲ್ಲ.. ಇವು ಆರ್ಥಿಕ, ಸಾಮಾಜಿಕ ತತ್ವದಡಿ ಮಾಡಿರುವ ಹೂಡಿಕೆ ಎಂದು ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ. ಈ ಮೂಲಕ ಗ್ಯಾರಂಟಿಗಳನ್ನು ಸಮರ್ಥಿಸಿದ್ದಾರೆ.

ಪಂಚ ಗ್ಯಾರಂಟಿಗಳಿಗಾಗಿ 51,034 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. ಇದು ಕಳೆದ ಬಾರಿಗಿಂತ 975 ಕೋಟಿ ಕಡಿಮೆ ಎಂಬುದು ಗಮನಾರ್ಹ. ಗೃಹಲಕ್ಷ್ಮಿ ಹಣವನ್ನು ಹೂಡಿಕೆ ಮಾಡಲು ಮಹಿಳೆಯರಿಗೆ ಉತ್ತೇಜನ ನೀಡುವ ಸಲುವಾಗಿ, ಸಿಎಂ ವಿಶೇಷ ಯೋಜನೆ ಪ್ರಕಟಿಸಿದ್ದಾರೆ.

ಗೃಹಲಕ್ಷ್ಮಿ ದುಡ್ಡನ್ನು ಸ್ವಸಹಾಯ ಗುಂಪುಗಳ ಮೂಲಕ ಹೂಡಿಕೆ ಮಾಡಲು ಅಕ್ಕ ಸಹಕಾರಿ ಸಂಘ ಸ್ಥಾಪನೆಯ ಘೋಷಣೆ ಮಾಡಿದ್ದಾರೆ. ಉಳಿತಾಯ, ಉದ್ಯಮಶೀಲತೆ ಮತ್ತು ತ್ವರಿತ ಸಾಲ ಸೌಲಭ್ಯಕ್ಕಾಗಿ ಈ ಯೋಜನೆ ಎಂದು ಸಿಎಂ ಹೇಳಕೊಂಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮೈಕ್ರೋಫೈನಾನ್ಸ್ ವ್ಯವಸ್ಥೆಗೆ ಸರ್ಕಾರ ಗುದ್ದು ನೀಡಿದೆ.  ಇದನ್ನೂ ಓದಿ: Karnataka Budget 2025: ಯಾವ ಇಲಾಖೆಗೆ ಎಷ್ಟು ಹಣ ಹಂಚಿಕೆ?

cm siddaramaiah 1

ಸಿದ್ದು ಬಜೆಟ್ ಲೆಕ್ಕಾಚಾರ
ಗಾತ್ರ – 4,09,549 ಕೋಟಿ ರೂ. (ಕಳೆದ ಬಾರಿ: 3,71,121 ಕೋಟಿ  ರೂ.  ಜಾಸ್ತಿ: 38,166 ಕೋಟಿ ರೂ.)
ಸಾಲ – 1,16,000 ಕೋಟಿ ರೂ. (ಕಳೆದ ಬಾರಿ: 1,10,000 ಕೋಟಿ ರೂ.  ಜಾಸ್ತಿ: 10,000 ಕೋಟಿ ರೂ.)

ಗ್ಯಾರಂಟಿ ಅನುದಾನ
ಗೃಹಲಕ್ಷ್ಮಿ:
28,608 ಕೋಟಿ ರೂ. ಮೀಸಲಿಡಲಾಗಿದೆ ಕಳೆದ ಬಜೆಟ್‌ನಲ್ಲಿ 28,608.40 ಕೋಟಿರೂ. ಅನುದಾನ ನೀಡಲಾಗಿತ್ತು. ಈ ಬಾರಿ 40 ಲಕ್ಷ ರೂ. ಕಡಿಮೆ ಹಣವನ್ನು ಹಂಚಲಾಗಿದೆ.

congress guarantee card

ಶಕ್ತಿ:
5,300 ಕೋಟಿ ರೂ. ಮೀಸಲಿಡಲಾಗಿದೆ. ಕಳೆದ ಬಾರಿ 5,015 ಕೋಟಿ ರೂ. ಮೀಸಲಿಡಲಾಗಿತ್ತು. ಹಾಗೆ ನೋಡಿದರೆ ಈ ಬಾರಿ 285 ಕೋಟಿ ರೂ. ಜಾಸ್ತಿ ಹಣ ಹಂಚಿಕೆ ಮಾಡಲಾಗಿದೆ.

ಗೃಹಜ್ಯೋತಿ:
10,100 ಕೋಟಿ ರೂ. ಹಣವನ್ನು ಹಂಚಲಾಗಿದೆ. ಕಳೆದ ಬಾರಿ 9,657 ಕೋಟಿ ರೂ. ಮೀಸಲಿಡಲಾಗಿತ್ತು. ಈ ಬಜೆಟ್‌ನಲ್ಲಿ 443 ಕೋಟಿ ರೂ. ಹೆಚ್ಚು ಅನುದಾನ ನೀಡಲಾಗಿದೆ.

Congress Guarantee Electricity

ಅನ್ನಭಾಗ್ಯ:
6,426 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಕಳೆದ ಬಾರಿ 8,079 ಕೋಟಿ ರೂ. ಮೀಸಲಿಡಲಾಗಿತ್ತು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ 1,653 ಕೋಟಿ ರೂ. ಅನುದಾನ ಕಡಿಮೆಯಾಗಿದೆ. ಇದನ್ನೂ ಓದಿ: Karnataka Budget: ಒಂದು ರೂಪಾಯಿ ಬಂದಿದ್ದು ಎಲ್ಲಿಂದ? ಹೋಗಿದ್ದು ಎಲ್ಲಿಗೆ?

ಯುವನಿಧಿ:
600 ಕೋಟಿ ರೂ. ಮೀಸಲಿಡಲಾಗಿದೆ. ಕಳೆದ ಬಜೆಟ್‌ನಲ್ಲಿ 650 ಕೋಟಿ ರೂ. ಮೀಸಲಿಡಲಾಗಿತ್ತು. ಈ ಬಾರಿ 50 ಕೋಟಿ ರೂ. ಅನುದಾನ ಕಡಿಮೆಯಾಗಿದೆ.

SHAKTHI SCHEME

ಗ್ಯಾರಂಟಿ ಯೋಜನೆಗಳು ಯಾವುದು?
ಗೃಹಜ್ಯೋತಿ : ಎಲ್ಲಾ ಮನೆಗಳಿಗೂ 200 ಯೂನಿಟ್‌ ಉಚಿತ ವಿದ್ಯುತ್‌
ಗೃಹಲಕ್ಷ್ಮಿ : ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 2,000 ರೂ.
ಅನ್ನಭಾಗ್ಯ : ಬಿಪಿಎಲ್‌ ಕುಟುಂಬಗಳಿಗೆ 10 ಕೆಜಿ ಆಹಾರ ಧಾನ್ಯ
ಯುವನಿಧಿ : ಎರಡು ವರ್ಷಗಳ ಕಾಲಕ್ಕೆ ನಿರುದ್ಯೋಗಿ ಭತ್ಯೆ – ಪದವೀಧರರಿಗೆ ತಿಂಗಳಿಗೆ 3,000 ರೂ. ಮತ್ತು ಡಿಪ್ಲೋಮಾ ಮಾಡಿದವರಿಗೆ ತಿಂಗಳಿಗೆ 1,500 ರೂ.
ಶಕ್ತಿ: ಸರ್ಕಾರಿ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ

Share This Article