ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಮ್ಮ 14ನೇ ಬಜೆಟ್ (Karnataka Budget 2023) ಮಂಡನೆ ಮಾಡಿದ್ದು, ಚಿತ್ರರಂಗಕ್ಕೂ (Sandalwood) ಭರ್ಜರಿ ಕೊಡುಗೆಯನ್ನು ನೀಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಸಿಎಂ ಸಿನಿಮಾ ರಂಗದ ಪರವಾಗಿ ನಿಂತುಕೊಂಡಿದ್ದಾರೆ. ಚಿತ್ರರಂಗದ ಬಗ್ಗೆ ಇನ್ನೂ ಹಲವು ಬೇಡಿಕೆಗಳು ಅವರ ಮುಂದಿದ್ದರೂ ಕಳೆದ ಬಾರಿಯ ಬಜೆಟ್ ಗೆ ಹೋಲಿಸಿದರೆ, ಈ ಬಾರಿ ಚಿತ್ರರಂಗಕ್ಕೆ ಹೆಚ್ಚಿನ ಮಹತ್ವ ಸಿಕ್ಕಿದೆ.
Advertisement
ಫಿಲ್ಮ್ ಸಿಟಿ (Film City) :
Advertisement
ಹಲವು ವರ್ಷಗಳಿಂದ ಚರ್ಚೆಯಲ್ಲಿರುವ ಚಿತ್ರನಗರಿ ಕುರಿತು ಈ ಬಾರಿಯೂ ಬಜೆಟ್ ನಲ್ಲಿ ಘೋಷಣೆ ಮಾಡಿದ್ದು, ಮೈಸೂರಿನಲ್ಲಿ ಚಿತ್ರನಗರಿ ಮಾಡುವುದಾಗಿ ಬಜೆಟ್ ನಲ್ಲಿ ತಿಳಿಸಿದ್ದಾರೆ. 2015-16ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಚಿತ್ರನಗರಿ ಸ್ಥಾಪಿಸಲು ಘೋಷಿಸಲಾಗಿತ್ತು. ನಂತರದ ಸರಕಾರವು ಸದರಿ ಚಿತ್ರನಗರಿಯನ್ನು ಬೆಂಗಳೂರಿಗೆ ಸ್ಥಳಾಂತರಗೊಳಿಸಲು ಉದ್ದೇಶಿಸಿತ್ತು. ಆದರೆ, ಇಲ್ಲಿವರೆಗೂ ಅನುಷ್ಠಾನಗೊಂಡಿಲ್ಲ. ಈ ಬಾರಿ ಮೈಸೂರು ಜಿಲ್ಲೆಯಲ್ಲೇ ಚಿತ್ರನಗರಿ ಮಾಡುವುದಾಗಿ ಘೋಷಿಸಿದ್ದಾರೆ.
Advertisement
Advertisement
ಈ ಹಿಂದೆ ಸಿದ್ದರಾಮಯ್ಯನವರ ಸರಕಾರವೇ ಮೈಸೂರಿನಲ್ಲಿ ಚಿತ್ರನಗರಿ ಮಾಡುವುದಾಗಿ ತಿಳಿಸಿತ್ತು. ಆ ಘೋಷಣೆಯಂತೆ ಮೈಸೂರು ಜಿಲ್ಲೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿಯನ್ನು ನಿರ್ಮಿಸಲು ಮತ್ತೆ ಮುಂದಾಗಿದೆ. ಅದನ್ನು ಈ ಬಾರಿಯ ಬಜೆಟ್ ನಲ್ಲಿ ಘೋಷಣೆ ಮಾಡಿದೆ. ಇದನ್ನೂ ಓದಿ:ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಭೂರಿ ಭೋಜನ, ಭರ್ಜರಿ ತಯಾರಿ
ಹಲವಾರು ಬಾರಿ ಚಿತ್ರನಗರಿಯ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವಾಗಿದೆ. ಕಾಂಗ್ರೆಸ್ ಸರಕಾರ ಮೈಸೂರಿನಲ್ಲಿ ಚಿತ್ರನಗರಿ ಎಂದಿದ್ದರೆ, ಜೆಡಿಎಸ್ ಸರಕಾರ ರಾಮನಗರದಲ್ಲಿ ಚಿತ್ರನಗರಿ ಮಾಡುವುದಾಗಿ ತಿಳಿಸಿತ್ತು. ಬಿಜೆಪಿ ಸರಕಾರವು ಅದನ್ನು ಬೆಂಗಳೂರಿನಲ್ಲೇ ಮಾಡುವುದಾಗಿ ಘೋಷಣೆ ಮಾಡಿತ್ತು. ಇದೀಗ ಮತ್ತೆ ಚಿತ್ರನಗರಿ ಮೈಸೂರು ಪಾಲಾಗಿದೆ.
ಸಿನಿಮಾ ವಸ್ತು ಸಂಗ್ರಹಾಲಯ (Cinema Museum) :
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 14ನೇ ಬಜೆಟ್ ಮಂಡನೆ ಮಾಡಿದ್ದು, ಹಲವು ವರ್ಷಗಳ ಒಂದು ಬೇಡಿಕೆಯನ್ನು ಈಡೇರಿಸಿದ್ದಾರೆ. ಚಿತ್ರಂಗದ ಇತಿಹಾಸವನ್ನು ಸಾರುವಂತಹ ವಸ್ತು ಸಂಗ್ರಹಾಲಯ ಬೇಕು ಎನ್ನುವುದು ಸಿನಿ ಇತಿಹಾಸಕಾರರ ಆಗ್ರಹವಾಗಿತ್ತು. ಅದನ್ನು ಈ ಬಾರಿಯ ಬಜೆಟ್ ನಲ್ಲಿ ಈಡೇರಿಸಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದ ಆವರಣದಲ್ಲಿರುವ ಡಾ.ರಾಜ್ ಕುಮಾರ್ ಸ್ಮಾರಕದ ಬಳಿ ಕನ್ನಡ ಚಿತ್ರರಂಗ ಬೆಳೆದು ಬಂದ ಇತಿಹಾಸವನ್ನು ದಾಖಲಿಸುವ ವಸ್ತು ಸಂಗ್ರಹಾಲಯವನ್ನು ನಿರ್ಮಿಸುವುದಾಗಿ ಈ ಬಾರಿಯ ಬಜೆಟ್ ನಲ್ಲಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ಮೂಲಕ ಚಿತ್ರರಂಗದ ಬೆಳವಣಿಗೆ ಇತಿಹಾಸ ಪರಿಚಯಿಸಲು ಮುಂದಾಗಿದ್ದಾರೆ.
ಡಾ.ರಾಜ್ ಕುಮಾರ್ ಸ್ಮಾರಕದ ಬಳಿ ವಸ್ತು ಸಂಗ್ರಹಾಲಯದ ಜೊತೆಗೆ ಸುಸಜ್ಜಿತದ ಥಿಯೇಟರ್ ನಿರ್ಮಾಣವಾಗಬೇಕು ಎನ್ನುವುದು ಹಲವರ ಕೋರಿಕೆಯಾಗಿತ್ತು. ಜೊತೆಗೆ ಡಾ.ರಾಜ್ ಕುಮಾರ್ ಅವರ ಕುರಿತಾಗಿಯೇ ವಸ್ತು ಸಂಗ್ರಹಾಲಯ ಇರಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಆದರೆ, ಸಮಗ್ರ ಚಿತ್ರರಂಗವನ್ನು ಒಳಗೊಳ್ಳುವಂತಹ ಸಂಗ್ರಹಾಲಯಕ್ಕೆ ಸಿದ್ದರಾಮಯ್ಯ ಸರಕಾರ ಅಸ್ತು ಎಂದಿದೆ.
ಸಬ್ಸಿಡಿಗೆ ಮರುಜೀವ (Reviving subsidy) :
ಕರ್ನಾಟಕ ಸರಕಾರ ಕನ್ನಡದ ಸಿನಿಮಾಗಳಿಗೆ ನೀಡುತ್ತಿದ್ದ ಸಹಾಯಧನವನ್ನು ಕಳೆದ ಮೂರು ವರ್ಷಗಳಿಂದ ನೀಡಿರಲಿಲ್ಲ. ನಾನಾ ರೀತಿಯ ಕಾರಣಗಳನ್ನು ಕೊಡುತ್ತಲೇ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗಿತ್ತು. ಮತ್ತೆ ಸಹಾಯಧನವನ್ನು ನೀಡಲು ಕ್ರಮ ಕೈಗೊಳ್ಳುವುದಾಗಿ ಬಜೆಟ್ ನಲ್ಲಿ ತಿಳಿಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.
‘ಕಳೆದ ಮೂರು ವರ್ಷಗಳಿಂದ ಕನ್ನಡದ ಗುಣಾತ್ಮಕ ಚಿತ್ರಗಳಿಗೆ ಸಹಾಯಧನ ನೀಡುವ ಯೋಜನೆ ಸ್ಥಗಿತಗೊಂಡಿತ್ತು. ಈ ಬಾರಿ ಆಯ್ಕೆ ಸಮಿತಿಗಳನ್ನು ರಚಿಸಿ, ಸಹಾಯಧನ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಬಜೆಟ್ ಘೋಷಣೆ ಮಾಡಿದ್ದಾರೆ ಮುಖ್ಯಮಂತ್ರಿಗಳು. ಈ ಮೂಲಕ ಗುಣಾತ್ಮಕ ಕನ್ನಡ ಚಿತ್ರಗಳ ನಿರ್ಮಾಪಕರ ಸಹಾಯಕ್ಕೆ ನಿಂತಿದ್ದಾರೆ.
ಮೊನ್ನೆಯಷ್ಟೇ ಸಿನಿಮಾ ಸಬ್ಸಡಿ ಮತ್ತು ಸಿನಿಮಾ ಪ್ರಶಸ್ತಿಗೆ ಸಂಬಂಧಿಸಿದಂತೆ ನಿಯೋಗವೊಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತ್ತು. 2018 ರಿಂದ ಸಿನಿಮಾ ಪ್ರಶಸ್ತಿಯನ್ನು ನೀಡಿಲ್ಲ ಮತ್ತು ಸಬ್ಸಿಡಿ ಕೂಡ ಸ್ಥಗಿತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗಿತ್ತು. ಮನವಿಗೆ ಸ್ಪಂದಿಸಿರುವ ಸಿದ್ದರಾಮಯ್ಯ ಅವರು ಈ ಬಾರಿ ಬಜೆಟ್ ನಲ್ಲಿ ಸಬ್ಸಿಡಿ ಕುರಿತಾಗಿ ಉಲ್ಲೇಖಿಸಿದ್ದಾರೆ. ಪ್ರಶಸ್ತಿಯ ಮನವಿಯನ್ನು ಪುರಸ್ಕರಿಸಿಲ್ಲ.
ಪುನೀತ್ ಸ್ಮರಣಾರ್ಥ ಯೋಜನೆ (Puneeth Memorial Project) :
ಕನ್ನಡದ ಹೆಸರಾಂತ ನಟ ಪುನೀತ್ ರಾಜ್ ಕುಮಾರ್ ಹಠಾತ್ ನಿಧನ ಕರುನಾಡಿಗೆ ಶಾಕ್ ನೀಡಿತ್ತು. ಹೃದಯಾಘಾತದಿಂದ ಅಪ್ಪು ನಿಧನರಾದಾಗ ಆ ಸಾವಿನ ಬಗ್ಗೆ ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗಿತ್ತು. ಪುನೀತ್ ಕುಟುಂಬದ ವೈದ್ಯರ ಮೇಲೆಯೇ ಅನುಮಾನ ಪಡುವಂತಹ ಘಟನೆಗಳು ಕೂಡ ನಡೆದವು. ಪುನೀತ್ ಅವರಿಗೆ ಹಠಾತ್ ಹೃದಯಬೇನೆ ಕಾಣಿಸಿಕೊಂಡಾಗ ಯಾವ ರೀತಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಬೇಕಿತ್ತು ಎಂದೆಲ್ಲ ಚರ್ಚೆ ಆಯಿತು. ಅದೆಲ್ಲವನ್ನೂ ಪರಿಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಬಜೆಟ್ ನಲ್ಲಿ ಪುನೀತ್ ಹೆಸರಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒಂದಷ್ಟು ಅನುದಾನ ನೀಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥವಾಗಿ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು Automated External Defibrillators (AED) ಗಳನ್ನು ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗುವುದು. ಇದಕ್ಕಾಗಿ ಆರು ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಮ್ಮ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಯಸ್ಸಿನ ಹಂಗಿಲ್ಲದೇ ಹಠಾತ್ ಸಾವುಗಳು ಆಗುತ್ತಿವೆ. ಆರೋಗ್ಯವಂಥರು ಎನಿಸಿಕೊಂಡವರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಹಾಗಾಗಿಯೇ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಯಲು ಆರು ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಬಜೆಟ್ ನಲ್ಲಿ ತಿಳಿಸಿದ್ದಾರೆ.
Web Stories