ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2018-19ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಕೃಷಿ ಇಲಾಖೆಗೆ 5,849 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಮೂಲಕ ಸಿಎಂ ಅತಿ ಹೆಚ್ಚು ಪಾಲನ್ನು ಕೃಷಿಗೆ ನೀಡಿದ್ದಾರೆ.
ಬಜೆಟ್ ನಲ್ಲಿ ಖುಷ್ಕಿ ಭೂಮಿಯ ರೈತರ ಸಂಕಷ್ಟಗಳನ್ನು ನೇರವಾಗಿ ಪರಿಹರಿಸಲು ಹಾಗೂ ರೈತರಿಗೆ ನೇರ ಆದಾಯ ನೆರವು ನೀಡುವ `ರೈತ ಬೆಳಕು’ ಹೆಸರಿನ ವಿಶಿಷ್ಟ ಯೋಜನೆಯನ್ನು ಈ ಬಾರಿಯ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.
Advertisement
Advertisement
ಏನಿದು ಯೋಜನೆ?
Advertisement
ಈ ಯೋಜನೆಯಡಿ 2018-19ರಿಂದ ಮಳೆ ಆಶ್ರಿತ ಬೆಳೆ ಬೆಳೆಯುವ ರೈತರಿಗೆ ಪ್ರತಿವರ್ಷ, ಪ್ರತಿ ರೈತನಿಗೆ ಗರಿಷ್ಠ 10,000 ರೂ.ಗಳ ಮಿತಿಗೆ ಒಳಪಟ್ಟು ಪ್ರತಿ ಹೆಕ್ಟೇರ್‍ಗೆ 5,000 ರೂ.ಗಳನ್ನು ನೀಡಲಾಗುತ್ತದೆ. ಈ ಹಣವನ್ನು ರೈತರಿಗೆ ಬ್ಯಾಂಕ್ ಖಾತೆಗಳ ಮೂಲಕ ನೇರ ವರ್ಗಾವಣೆ ಮಾಡಲಾಗುತ್ತದೆ. ಯೋಜನೆಗೆ ಪ್ರತಿವರ್ಷ 3,500 ಕೋಟಿ ರೂ. ವೆಚ್ಚವಾಗಲಿದ್ದು, ಅಂದಾಜು 70 ಲಕ್ಷಕ್ಕೂ ಹೆಚ್ಚು ರೈತರು ಪ್ರಯೋಜನ ಪಡೆಯುವ ಸಾಧ್ಯತೆಯಿದೆ.
Advertisement
ರಾಜ್ಯ ಸರ್ಕಾರ ಈ ಕೃಷಿ ಹೆಚ್ಚಿನ ಆದ್ಯತೆಯ ನೀಡಿ ಆಯವ್ಯಯ ದೊಡ್ಡ ಮೊತ್ತವನ್ನು ಮೀಸಲಿಟ್ಟಿದೆ. ಕಳೆದ ಸಾಲಿನ ಆಯವ್ಯದಲ್ಲಿ ಕೃಷಿ (5,080 ಕೋಟಿ ರೂ.) ತೋಟಗಾರಿಕೆ (1,091ಕೋಟಿ ರೂ.), ಪಶುಸಂಗೋಪನೆ (2,245 ಕೋಟಿ ರೂ.), ರೇಷ್ಮೆ (429ಕೋಟಿ ರೂ.), ಮೀನುಗಾರಿಕೆ (337 ಕೋಟಿ ರೂ.), ಜಲಸಂಪನ್ಮೂಲ (15,929 ಕೋಟಿ ರೂ.), ಸಣ್ಣ ನೀರಾವರಿ (2,099 ಕೋಟಿ ರೂ.) ಸಹಕಾರ ಕ್ಷೇತ್ರ (1,663 ಕೋಟಿ ರೂ.) ವಿದ್ಯುತ್ ಸಬ್ಸಿಡಿ (8,841 ಕೋಟಿ ರೂ.), ಹಾಲಿನ ಸಬ್ಸಿಡಿ (1,200 ಕೋಟಿ ರೂ.) ಮತ್ತು ಸಾಲದ ಮೇಲಿನ ಬಡ್ಡಿ ಸಹಾಯಧನಕ್ಕಾಗಿ (800 ಕೋಟಿ ರೂ.). ಹೀಗೆ ಸುಮಾರು 40 ಸಾವಿರ ಕೋಟಿ ರೂಪಾಯಿಗಳನ್ನು ನಿಗದಿಪಡಿತ್ತು.
ಕೃಷಿ ಹೊಂಡಗಳು ಮತ್ತು ಪಾಲಿ ಹೌಸ್ ಗಳ ನಿರ್ಮಾಣ, ಮಣ್ಣು ಆರೋಗ್ಯ ಕಾರ್ಡ್ ವಿತರಣೆ, ಹನಿ ನೀರಾವರಿಗೆ ಎಲ್ಲಾ ವರ್ಗದ ರೈತರಿಗೂ ಶೇಕಡಾ 90ರಷ್ಟು ಸಹಾಯಧನ, ರೈತರಿಗೆ ಕೃಷಿ ಯಂತ್ರೋಪಕರಣ ಮತ್ತು ಕೃಷಿ ಸಲಕರಣೆಗಳ ಬಾಡಿಗೆಗೆ ನೀಡುವುದು. ಹಾಲು ಉತ್ಪಾದನಾ ಸಹಾಯಧನ ಯೋಜನೆಗಳನ್ನು ಘೋಷಿಸಿತ್ತು.
ಪ್ರತಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಸ್ಥಾಪನೆ. ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತಲಾ ಐದು ಕೋಟಿ ರೂ. ವೆಚ್ಚದಲ್ಲಿ ಗೋದಾಮು ನಿರ್ಮಾಣ. ಶೂನ್ಯ ಬಡ್ಡಿದರದಲ್ಲಿ ಮೂರು ಲಕ್ಷಗಳ ವರೆಗೆ ಸಾಲ ಸೌಲಭ್ಯ. ಜತೆಗೆ ಶೇಕಡಾ ಮೂರರ ಬಡ್ಡಿ ದರದಲ್ಲಿ 3 ಲಕ್ಷದಿಂದ 10 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತಿದೆ. ಅಲ್ಲದೇ ದಿನಾಂಕ 30-9-2015ಕ್ಕೆ ಸುಸ್ತಿಯಾಗಿರುವ ಎಲ್ಲಾ ಬಗೆಯ ಕೃಷಿ ಸಾಲಗಳ ಅಸಲನ್ನು 2017ರ ಮಾರ್ಚ್ 31ರೊಳಗೆ ಪಾವತಿಸಿದ ರೈತರ 124.70 ಕೋಟಿ ರೂ. ಮೊತ್ತದ ಪೂರ್ಣ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 10.7 ಲಕ್ಷ ರೈತರ. 2359 ಕೋಟಿ ರೂ. ಬಡ್ಡಿ ಮನ್ನಾ ಮಾಡಲಾಗಿದೆ.
ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ನ್ಯಾಯಬದ್ಧ ಬೆಲೆ ಸಿಗುವಂತೆ ಮಾಡಲು ಜಾರಿಗೆ ರಾಜ್ಯದಲ್ಲಿ 157 ಕೃಷಿ ಮಾರುಕಟ್ಟೆಗಳಲ್ಲಿ ಆನ್ ಲೈನ್ ಮಾರುಕಟ್ಟೆ ಸ್ಥಾಪನೆ ಮಾಡಲಾಗಿದೆ. ರಾಜಸ್ತಾನದ ನಂತರ ಅತ್ಯಂತ ಹೆಚ್ಚು ಒಣಭೂಮಿ ಇರುವ ಪ್ರದೇಶ ಕರ್ನಾಟಕದಲ್ಲಿ ಮಳೆ ಆಶ್ರಿತ ರೈತರ ಗಮನದಲ್ಲಿಟ್ಟುಕೊಂಡು ಮಳೆ ನೀರು ಸಂಗ್ರಹಣೆ ಮತ್ತು ಪುನರ್ ಬಳಕೆಗೆ ಆದ್ಯತೆ ನೀಡಿ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿಲಾಗಿದೆ. ಮೊದಲ ಹಂತದಲ್ಲಿ 5 ಮುಖ್ಯ ಒಣ ಭೂಮಿ ವಲಯಗಳ ರಾಜ್ಯದ 23 ಜಿಲ್ಲೆಗಳ 107 ತಾಲ್ಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಬೆಳೆಗಳ ಸಂದಿಗ್ಧ ಪರಿಸ್ಥಿತಿಯಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸಿ ಉತ್ತಮ ಆದಾಯ ಪಡೆಯುವಲ್ಲಿ ಕೃಷಿ ಭಾಗ್ಯ ಯೋಜನೆಯು ಮಹತ್ವದ ಪಾತ್ರವಹಿಸಿದೆ. ಕಳೆದ ವರ್ಷಗಳ ಯಶಸ್ವಿ ಫಲಿತಾಂಶವನ್ನಾಧರಿಸಿ 2018-19ನೇ ಸಾಲಿನಲ್ಲಿಯೂ ಕೂಡ 600 ಕೋಟಿ ರೂ.ಗಳ ಅನುದಾನದೊಂದಿಗೆ ಈ ಯೋಜನೆಯನ್ನು ಮುಂದುವರೆಸಲಾಗಿದೆ. ಕಳೆದ 5 ವರ್ಷಗಳಲ್ಲಿ ರಾಜ್ಯವು ನಿರಂತರವಾಗಿ ಬರ ಪರಿಸ್ಥಿತಿ ಎದುರಿಸುತ್ತಿದ್ದು, ರಾಜ್ಯ ಸರ್ಕಾರವು ರೈತರಿಗೆ ಆರ್ಥಿಕ ಸ್ಥಿರತೆ ಒದಗಿಸಲು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ರಾಜ್ಯದ ವಂತಿಗೆಯೊಂದಿಗೆ ಸೂಕ್ತ ನೆರವು ಕಲ್ಪಿಸಲಾಗಿದೆ.
ನಮ್ಮ ರಾಜ್ಯದ ಮುಖ್ಯವಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಯುವ ನೆಲಗಡಲೆ ಬೆಳೆ ಬೆಳೆಯುವ ಕ್ಷೇತ್ರವು ಇಳಿಮುಖವಾಗುತ್ತಿದ್ದು, ಇದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು. ನೆಲಗಡಲೆ ಬೆಳೆ ಬೆಳೆಯುವ ರೈತರಿಗೆ ಸಹಾಯ ಮಾಡಲು 50 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಅನ್ನು ಪ್ರಾರಂಭಿಕವಾಗಿ ತುಮಕೂರು ಜಿಲ್ಲೆಯ ಪಾವಗಡ, ಸಿರಾ ಮತ್ತು ಮಧುಗಿರಿ ತಾಲ್ಲೂಕುಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲ್ಲೂಕುಗಳಿಗೆ ಒದಗಿಸಲಾಗುತ್ತಿದೆ.
ನೇರ ಭತ್ತ ಬಿತ್ತನೆ ಪದ್ಧತಿಯಿಂದ ಶೇ.35ವರೆಗೆ ನೀರಿನ ಉಳಿತಾಯವಾಗುವುದಲ್ಲದೇ, ಬೆಳೆ ಅವಧಿ 8 ದಿನಗಳವರೆಗೆ ಕಡಿತವಾಗುವುದೆಂದು ಹಲವು ವರ್ಷಗಳ ಸಂಶೋಧನೆಯಿಂದ ದೃಢಪಟ್ಟಿದೆ. ಇದರಿಂದ ಬೇಸಾಯ ವೆಚ್ಚ ಕಡಿಮೆಯಾಗಿ, ರೈತರು ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಗಳಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ನೇರ ಭತ್ತ ಬಿತ್ತನೆ ಪದ್ಧತಿಯನ್ನು ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರೋತ್ಸಾಹಿಸವ ಉದ್ದೇಶವಿದೆ. ಕಬ್ಬು ಬೆಳೆಯಲ್ಲಿ ಲಾಭದಾಯಕತೆ ಮತ್ತು ಸುಸ್ಥಿರತೆ ಹೊಂದಲು ಹಾಗೂ ಹೆಚ್ಚುತ್ತಿರುವ ಕೂಲಿ ವೆಚ್ಚ ಮತ್ತು ಕೂಲಿಕಾರ್ಮಿಕರ ಕೊರತೆಯನ್ನು ನಿವಾರಿಸಲು ಕಬ್ಬು ಕಟಾವು ಯಂತ್ರಗಳ ಬಳಕೆಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಇದಕ್ಕಾಗಿ ಕೇಂದ್ರ ನೆರವಿನೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಕಬ್ಬು ಕಟಾವು ಯಂತ್ರಗಳಿಗೆ ಸಹಾಯಧನ ನೀಡಲು 20 ಕೋಟಿ ರೂ.ಗಳನ್ನು ನೀಡಲಾಗಿದೆ.
ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಸಮಯದಲ್ಲಿ ಹಾವು ಕಡಿತದಿಂದ ಆಕಸ್ಮಿಕ ಮರಣ ಹೊಂದಿದ ರೈತರ ಹಾಗೂ ಕೃಷಿ ಕಾರ್ಮಿಕರ ಕುಟುಂಬಗಳಿಗೆ ನೀಡುತ್ತಿರುವ ಪರಿಹಾರ ಧನವನ್ನು 2 ಲಕ್ಷ ರೂ.ಗಳಿಗೆ ದ್ವಿಗುಣಗೊಳಿಸಗಿದೆ. ಬೆಳೆ ಕಟಾವು ನಂತರ ಶೇಖರಿಸಲ್ಪಟ್ಟ ಹುಲ್ಲು ಮೆದೆ/ಬಣವೆಗಳು ಆಕಸ್ಮಿಕ ಬೆಂಕಿಯಿಂದ ನಷ್ಟವಾಗುವ ಪ್ರಕರಣಗಳಿಗೆ ಹಾಲಿ ಇರುವ ಪರಿಹಾರ ಧನವನ್ನು ದ್ವಿಗುಣಗೊಳಿಸಿ ಗರಿಷ್ಠ 20,000 ರೂ. ಗೆ ಹೆಚ್ಚಿಸಲಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ನೂತನ ಕೃಷಿ ಕಾಲೇಜನ್ನು ಸ್ಥಾಪನೆ. ರಾಜ್ಯದಲ್ಲಿ ಕೃಷಿಕರ ಬೇಡಿಕೆಗೆ ಅನುವಾಗುವಂತೆ ಕೃಷಿಯಲ್ಲಿ ಹೆಚ್ಚಿನ ಸಂಶೋಧನೆಗೆ ಒತ್ತು ಕೊಡಲು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನೂತನ ಕೃಷಿ ಸಂಶೋಧನಾ ಕೇಂದ್ರವನ್ನು ಸ್ಥಾಪನೆ. ಬೆಂಗಳೂರಿನಲ್ಲಿರುವ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ನಂಜುಂಡಸ್ವಾಮಿ ಸಂಶೋಧನಾ ಪೀಠವನ್ನು ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವ ಉದ್ದೇಶವಿದೆ.