ಬೆಂಗಳೂರು: 2018-19ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ 2,281 ಕೋಟಿ ರೂ. ಮೀಸಲಿಡಲಾಗಿದೆ. ಹಾಗಿದ್ರೆ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ಹೇಳಲಾದ ಹೊಸ ಯೋಜನೆಗಳು ಈ ಕೆಳಗಿನಂತಿವೆ.
* ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ವೃತ್ತಿ ಪ್ರೋತ್ಸಾಹ ಯೋಜನೆಯಡಿ ಮೆಕ್ಯಾನಿಕ್, ಕಾರ್‍ಪೆಂಟರ್, ಹಣ್ಣು ಮತ್ತು ತರಕಾರಿ ಮಾರಾಟ, ಬೇಕರಿ, ಪಂಚರ್ ಮತ್ತು ವೆಲ್ಡಿಂಗ್ ಶಾಪ್, ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ ರಿಪೇರಿ ಇತ್ಯಾದಿ ವೃತ್ತಿಗಳಿಗೆ ಬ್ಯಾಂಕ್ ಸಹಯೋಗದೊಂದಿಗೆ ಸಾಲ ಮತ್ತು ಸಹಾಯಧನ ನೀಡಲು 30 ಕೋಟಿ ರೂ.ಗಳ ಮೊತ್ತದಲ್ಲಿ ಹೊಸ ಯೋಜನೆ ಜಾರಿಗೊಳಿಸಲಾಗುವುದು.
* ಕ್ರೈಸ್ತ ಸಮುದಾಯ ಅಭಿವೃದ್ಧಿ ಹಾಗೂ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 200 ಕೋಟಿ ರೂ.ಗಳನ್ನು ಒದಗಿಸಲಾಗುವುದು.
* ಜೈನ ಮತ್ತು ಸಿಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 80 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು.
* ದಾರುಲ್ ಉಲೂಮ್ ಸಬೀಲುರ್ ರೆಹಮಾನ ರಿಷಾದ್ ಅರೆಬಿಕ್ ಕಾಲೇಜು ಬೆಂಗಳೂರು ಆವರಣದಲ್ಲಿ ಐವಾನ್-ಎ-ಅಶ್ರಫ್ ಸ್ಮಾರಕ ಭವನ ನಿರ್ಮಾಣ ಮಾಡಲು 10 ಕೋಟಿ ರೂ.ಗಳನ್ನು ಒದಗಿಸಲಾಗುವುದು.
Advertisement
* ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ (ಸೆಂಟ್ರಲ್ ಕಾಲೇಜು) ವೈವಿಧ್ಯತೆ ಮತ್ತು ಅಲ್ಪಸಂಖ್ಯಾತರ ಅಧ್ಯಯನ ಪೀಠ ಸ್ಥಾಪಿಸಲಾಗುವುದು.
* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಾದರಿಯಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯ/ ವಸತಿ ಶಾಲೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ ಅತ್ಯುತ್ತಮ ಫಲಿತಾಂಶ ಗಳಿಸಿದ ವಸತಿ ಶಾಲೆ/ ಕಾಲೇಜುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
* ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ 15 ಕೋಟಿ ರೂ.ಗಳ ವೆಚ್ಚದಲ್ಲಿ ಮಹಿಳೆಯರಿಗೆ ಕಾರ್ಯಾರಂಭ ಸಾಲ ಸೌಲಭ್ಯ ಯೋಜನೆ ಜಾರಿಗೊಳಿಸಲಾಗುವುದು.
* ಮದರಸಗಳ ಆಧುನೀಕರಣ, ಔಪಚಾರಿಕ ಶಿಕ್ಷಣ ಒದಗಿಸಲು ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹಂತ ಹಂತವಾಗಿ 15 ಕೋಟಿ ರೂ.ಗಳ ಸಹಾಯಧನ ನೀಡಲಾಗುವುದು.
Advertisement
Advertisement
* ಕರ್ನಾಟಕ ರಾಜ್ಯ ವಕ್ಫ್ ಪರಿಷತ್ತಿನ ರಜತ ಮಹೋತ್ಸವ ಅಂಗವಾಗಿ ಮುಂದಿನ 5 ವರ್ಷಗಳಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಈ ಉದ್ದೇಶಕ್ಕಾಗಿ ಪರಿಷತ್ತಿನ ಕಾರ್ಪಸ್ ಫಂಡ್‍ಗೆ 2018-19ನೇ ಸಾಲಿನಲ್ಲಿ 20 ಕೋಟಿ ರೂ.ಗಳನ್ನು ಒದಗಿಸಲಾಗುವುದು.
* 25 ಹೊಸ ಮೊರಾರ್ಜಿ ದೇಸಾಯಿ ವಸತಿ ಶಾಲೆ, 5 ಪದವಿ ಪೂರ್ವ ಮಹಿಳಾ ವಸತಿ ಕಾಲೇಜು, 2 ಮಾದರಿ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು.
* ಎಂ.ಎಸ್.ಡಿ.ಪಿ. ಯೋಜನೆಯಡಿಯಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗಿರುವ 25 ಸ್ಥಳಗಳಲ್ಲಿ ವಿದ್ಯಾರ್ಥಿನಿಲಯ/ಮಾದರಿ/ಆದರ್ಶ ಶಾಲೆ/ ವಸತಿ ಕಾಲೇಜುಗಳನ್ನು ಪ್ರಾರಂಭಿಸಲಾಗುವುದು.
*25 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ತಲಾ 25 ದಾಖಲಾತಿ ಸಂಖ್ಯೆ ಹೆಚ್ಚಿಸುವುದು. ಎಲ್ಲಾ ಮೆಟ್ರಿಕ್ ಪೂರ್ವ/ನಂತರ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಪರಸ್ಪರ ಪ್ರವೇಶ ನೀಡಲಾಗುವುದು. ಐದು ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳನ್ನು ಮೇಲ್ದರ್ಜೆಗೇರಿಸಲಾಗುವುದು.
Advertisement
* 5 ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಸ್ತುತ ವಿಜ್ಞಾನ ವಿಭಾಗವಿದ್ದು, ಜೊತೆಗೆ ವಾಣಿಜ್ಯ ವಿಭಾಗ ಪ್ರಾರಂಭಿಸಲಾಗುವುದು. 10 ಮೊರಾರ್ಜಿ ದೇಸಾಯಿ ವಸತಿ ಶಾಲೆ ದಾಖಲಾತಿ ಸಂಖ್ಯಾಬಲ 50 ರಿಂದ 60ಕ್ಕೆ ಹೆಚ್ಚಿಸಲಾಗುವುದು.
* ದಾಖಲಾತಿ ಪಡೆಯಲು ಪೋಷಕರ ವರಮಾನ ವಿದ್ಯಾರ್ಥಿನಿಲಯಗಳಿಗೆ 44,500 ರೂ ಹಾಗೂ ವಸತಿ ಶಾಲೆಗಳಿಗೆ 1 ಲಕ್ಷ ರೂ. ಇದ್ದು, ಇದನ್ನು 2.50 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು.
* ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯ ಮತ್ತು ವಸತಿ ಶಾಲಾ/ಕಾಲೇಜುಗಳ ವಿದ್ಯಾರ್ಥಿಗಳಿಗೆ ಕ್ರೈಸ್ ಮಾದರಿಯಲ್ಲಿ ದುರ್ಘಟನೆಗೆ ಪರಿಹಾರ ನೀಡಲಾಗುವುದು.
* ಸರ್ಕಾರಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಎಲ್ಲಾ ವಸತಿ ಶಾಲೆಯ/ಕಾಲೇಜುಗಳ ಪ್ರತಿ ವಿದ್ಯಾರ್ಥಿಗೆ ಆಹಾರ ಭತ್ಯೆಯನ್ನು ಮಾಸಿಕ 100 ರೂ.ಗಳಷ್ಟು ಹೆಚ್ಚಿಸಲಾಗುವುದು. ಖಾಸಗಿ ಅನುದಾನಿತ ಅನಾಥಾಲಯ/ ವಿದ್ಯಾರ್ಥಿಗಳ ಭೋಜನಾ ವೆಚ್ಚದ ದರಗಳನ್ನು ಮಾಹೆಯಾನ 750 ರೂ.ಗಳಿಂದ 800 ರೂ.ಗಳಿಗೆ ಹೆಚ್ಚಿಸಲಾಗುವುದು.
* ಎಸ್.ಎಸ್.ಎಲ್.ಸಿ. ಮತ್ತು 2ನೇ ಪಿ.ಯು.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಗೆ 2000 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು.
* ವೈದ್ಯಕೀಯ ಹಾಗೂ ತಾಂತ್ರಿಕ ಕೋರ್ಸುಗಳಲ್ಲಿ 1ನೇ ವರ್ಷದಲ್ಲಿ ಪ್ರವೇಶ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಟಡಿ ಕಿಟ್ ಯೋಜನೆಯಡಿ 25 ಸಾವಿರ ರೂ.ಗಳನ್ನು ನೀಡಲಾಗುವುದು.
* ಬಿ.ಎಡ್. ಹಾಗೂ ಡಿ.ಎಡ್. ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 25,000 ರೂ.ಗಳ ವಿಶೇಷ ಪ್ರೋತ್ಸಾಹ ಧನ ನೀಡಲಾಗುವುದು.
* ವಿದ್ಯಾಸಿರಿ ಯೋಜನೆಯಡಿ 2018-19ನೇ ಸಾಲಿನಿಂದ ಫಲಾನುಭವಿಗಳ ಸಂಖ್ಯೆಯನ್ನು 25,000ಕ್ಕೆ ಹೆಚ್ಚಿಸಲಾಗುವುದು.
* ನದಾಫ್/ಪಿಂಜಾರ್ ಸಮುದಾಯದ ರಾಜ್ಯಮಟ್ಟದ ಸಂಘಕ್ಕೆ 2 ಕೋಟಿ ರೂ.ಗಳನ್ನು ಮತ್ತು ದಿ ಬ್ಯಾರಿ ವೆಲ್‍ಫೇರ್ ಅಸೋಸಿಯೇಷನ್‍ಗೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ 2 ಕೋಟಿ ರೂ.ಗಳ ಸಹಾಯಧನ ನೀಡಲಾಗುವುದು.
* ಮೈಸೂರಿನಲ್ಲಿ ದಿವಂಗತ ಅಜೀಜ್ ಸೇಠ್ ಸ್ಮಾರಕ ಸಮುದಾಯ ಭವನ ನಿರ್ಮಿಸಲು 3 ಕೋಟಿ ರೂ.ಗಳ ಅನುದಾನ ನೀಡಲಾಗುವುದು.
* ಕಾನೂನು ಪದವೀಧರರಿಗೆ ಸಮಾಜ ಕಲ್ಯಾಣ ಇಲಾಖೆ ಮಾದರಿಯಲ್ಲಿ ಮಾಸಿಕ ತರಬೇತಿ ಭತ್ಯೆಯನ್ನು 4000 ರೂ.ಗಳಿಂದ 5000 ರೂ.ಗಳಿಗೆ ಹೆಚ್ಚಿಸಲಾಗುವುದು.
* ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವಿದ್ಯಾರ್ಥಿನಿಲಯಗಳಲ್ಲಿರುವ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಸಿ.ಇ.ಟಿ., NEET ಪಠ್ಯಪುಸ್ತಕಗಳನ್ನು ಪೂರೈಸಲಾಗುವುದು.
* ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಉಚಿತವಾಗಿ JEE, NEET, GATE, GMAT ಇತ್ಯಾದಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುವುದು.
* ಭಾರತದ ಪುರಾತತ್ವ ಸಮೀಕ್ಷೆ ಮತ್ತು ಕರ್ನಾಟಕ ರಾಜ್ಯದ ಪುರಾತತ್ವ ಸಮೀಕ್ಷೆ ಅಧೀನದಲ್ಲಿರುವ ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅತೀ ಸೂಕ್ಷ್ಮ ವಕ್ಫ್ ಆಸ್ತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ 15 ಕೋಟಿ ರೂ.ಗಳನ್ನು ಒದಗಿಸಲಾಗುವುದು.
* ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸಲು 800 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು.