ಮಂಗಳೂರು: ದುಷ್ಕರ್ಮಿಗಳಿಂದ ಬರ್ಬರ ಹತ್ಯೆಯಾದ ಸುಹಾಸ್ ಶೆಟ್ಟಿ (Suhas Shetty) ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಘೋಷಣೆ ಮಾಡಿದ್ದಾರೆ.
ಮೃತ ಸುಹಾಸ್ ಶೆಟ್ಟಿ ಅಂತಿಮ ದರ್ಶನದ ಬಳಿಕ ಮಾತನಾಡಿದ ಅವರು, ಕಾಶ್ಮೀರ ಪಹಲ್ಗಾಮ್ ಹತ್ಯೆ ಮರೆಯುವ ಮೊದಲೇ ಮಂಗಳೂರಿನಲ್ಲಿ ಘಟನೆ ನಡೆದಿರುವುದು ಖಂಡನಾರ್ಹ. ಬಿಜೆಪಿ ಈ ಘಟನೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಪೊಲೀಸ್ ಇಲಾಖೆ ವೈಫಲ್ಯ ಮೇಲ್ನೋಟಕ್ಕೆ ಕಂಡು ಬರ್ತಿದೆ. ಜೀವಕ್ಕೆ ರಕ್ಷಣೆ ನೀಡದಿರುವುದು ಪೊಲೀಸರ ವೈಫಲ್ಯ ಎಂದು ಹೇಳಿದರು. ಇದನ್ನೂ ಓದಿ: ಫಾಜಿಲ್ ಫೋಟೊ ಜೊತೆಗೆ ಸುಹಾಸ್ ಫೋಟೊ ಹಾಕಿ ಟಾರ್ಗೆಟ್ ಫಿಕ್ಸ್ ಮಾಡಿದ್ದ ಹಂತಕರು!
ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ. ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ಕುಟುಂಬಕ್ಕೆ ಧೈರ್ಯ ಹೇಳುವ ಪ್ರಯತ್ನ ಮಾಡಿದ್ದೇವೆ. ಬಿಜೆಪಿಯ ಮುಖಂಡರು, ಕಾರ್ಯಕರ್ತರು ಅವರ ಕುಟುಂಬದ ಜೊತೆ ಇದ್ದೇವೆ. ಕುಟುಂಬದ ಆಧಾರ ಸ್ತಂಬ ಕಳಚಿ ಬಿದ್ದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುಹಾಸ್ ಶೆಟ್ಟಿ ಕುಟುಂಬಕ್ಕೆ ಪಕ್ಷದ ಪರವಾಗಿ 25 ಲಕ್ಷ ಪರಿಹಾರ ನೀಡುವ ತೀರ್ಮಾನ ಮಾಡಿದ್ದೇವೆ. ಮುಖ್ಯಮಂತ್ರಿ, ಗೃಹಸಚಿವರು ಘಟನೆಯ ಗಂಭೀರತೆ ಅರ್ಥ ಮಾಡಿಕೊಳ್ಳಬೇಕು. ಸರ್ಕಾರದಿಂದ ಪರಿಹಾರ ನೀಡಬೇಕು. ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ನಡೆಸಬೇಕು ಎಂದು ಆಗ್ರಹಿಸಿದರು.