ಬೆಂಗಳೂರು: ಮಾ.22 ರಂದು ಕರ್ನಾಟಕ ಬಂದ್ (Karnataka Bandh) ಹಿನ್ನಲೆಯಲ್ಲಿ ಈಗಾಗಲೇ ನಿಗದಿಯಾಗಿರುವ ಯಾವುದೇ ಪರೀಕ್ಷೆಗಳನ್ನು (Exams) ಮುಂದೂಡಿಕೆ ಮಾಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಮಾ.22 ರಂದು 7,8,9ನೇ ತರಗತಿ ಪರೀಕ್ಷೆಗಳ ನಿಗದಿಯಾಗಿದೆ. ಬಂದ್ ಎಂದು ಈಗ ಮುಂದೂಡಿಕೆ ಸಾಧ್ಯವಿಲ್ಲ. ಬಂದ್ ಇದ್ದರೂ ಯಾವುದೇ ಪರೀಕ್ಷೆ ಮುಂದೂಡಿಕೆ ಮಾಡೊಲ್ಲ. ಪರೀಕ್ಷೆ ಅದರ ಪಾಡಿಗೆ ನಡೆಯಲಿದೆ. ಮಕ್ಕಳಿಗೆ ಯಾವುದೇ ತೊಂದರೆ ಆಗದೇ ಇರೋ ರೀತಿ ಬಂದ್ ಮಾಡೋರು ಸಹಕಾರ ಕೊಡ್ತಾರೆ. ಹೋರಾಟಗಾರರಿಗೆ ಮನವಿ ಮಾಡ್ತೀನಿ. ಹೋರಾಟ ಮಾಡೋಕೆ ನಿಮಗೆ ಹಕ್ಕು ಇದೆ. ಆದರೆ ಪರೀಕ್ಷೆ ಅನ್ನೋದು ಮಕ್ಕಳಿಗೆ ಮುಖ್ಯ. ಮಕ್ಕಳ ಭವಿಷ್ಯ ಪರೀಕ್ಷೆಯಲ್ಲಿದೆ. ಮಕ್ಕಳ ಭವಿಷ್ಯಕ್ಕೆ ಯಾವುದೇ ಅಡಚಣೆ ಮಾಡೋದಿಲ್ಲ ಎಂಬ ವಿಶ್ವಾಸ ಇದೆ ಎಂದಿದ್ದಾರೆ.
ಬಂದ್ ಮಾಡುವ ಹೋರಾಟಗಾರರು ಯಾರು ಎಕ್ಸಾಂಗೆ ಹೋಗಬೇಡಿ ಎಂದು ಮಕ್ಕಳಿಗೆ ಹೇಳೋದಿಲ್ಲ. ಮಕ್ಕಳು ಗೊಂದಲ ಆಗೋದು ಬೇಡ. 6,7,8,9 ನೇ ತರಗತಿ ಪರೀಕ್ಷೆಗಳು ನಿಗದಿಯಂತೆ ನಡೆಯುತ್ತವೆ. ಮಕ್ಕಳು ಎಕ್ಸಾಂ ಬರೆಯಲಿ. ಈಗಾಗಲೇ ವೇಳಾಪಟ್ಟಿ ಸಿದ್ಧತೆ ಮಾಡಿ ಪ್ರಕಟ ಮಾಡಿದ್ದೇವೆ. ವೇಳಾಪಟ್ಟಿ ಬದಲಾವಣೆ ಆದ್ರೆ ಕಷ್ಟ ಆಗುತ್ತದೆ. ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ಮುಂದೂಡಿಕೆ ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.