ಮೈಸೂರು: ಕಪಿಲ ನದಿಯಲ್ಲಿ ನೀರು ಹೆಚ್ಚಾದ ಪರಿಣಾಮ ಮತ್ತೊಮ್ಮೆ ದಕ್ಷಿಣ ಕಾಶಿ ನಂಜನಗೂಡಿನ ಜನವಸತಿ ಪ್ರದೇಶಕ್ಕೆ ಪ್ರವಾಹದ ನೀರು ನುಗ್ಗಿದೆ.
ಪ್ರವಾಹದ ನೀರು ನಂಜುಂಡೇಶ್ವರ ಸ್ವಾಮಿಯ ದೇಗಲದತ್ತ ಹರಿದು ಬರುತ್ತಿದ್ದು, ದೇಗುಲ ಜಲ ದಿಗ್ಬಂಧನದ ಭೀತಿಯಲ್ಲಿದೆ. ಈಗಾಗಲೇ ನಂಜುಂಡೇಶ್ವರ ಸ್ವಾಮಿ ದೇಗುಲದ ಸಮೀಪದಲ್ಲಿರುವ ದಾಸೋಹ ಭವನ ಮತ್ತು ವಾಣಿಜ್ಯ ಮಳಿಗೆಗಳ ಕಟ್ಟಡಗಳು ಜಲಾವೃತಗೊಂಡಿವೆ. ಅಷ್ಟೇ ಅಲ್ಲದೇ ಕಪಿಲ ನದಿ ತೀರದಲ್ಲಿರುವ ಪರಶುರಾಮ, ಚಾಮುಂಡೇಶ್ವರಿ, ಅಯ್ಯಪ್ಪಸ್ವಾಮಿ, ಕಾಶಿ ವಿಶ್ವನಾಥ ಸ್ವಾಮಿ, ಸತ್ಯನಾರಾಯಣ ಸ್ವಾಮಿ ದೇಗುಲ ಸೇರಿದಂತೆ ನದಿ ತೀರದ ಎಲ್ಲಾ ದೇಗುಲಗಳು ಜಲಾವೃತವಾಗುವ ಸಾಧ್ಯತೆ ಇದೆ.
Advertisement
Advertisement
ಹದಿನಾರು ಕಾಲು ಮಂಟಪ ಶೇಕಡ 90% ಮುಳುಗಡೆಯಾಗಿದೆ. ಇತ್ತ ನಂಜನಗೂಡು ಮತ್ತು ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಗೂ ನೀರು ನುಗ್ಗಿದೆ. ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾದರೆ ನಂಜನಗೂಡು ಚಾಮರಾಜನಗರ, ಗುಂಡ್ಲುಪೇಟೆ, ಕೇರಳ, ತಮಿಳುನಾಡು ನಡುವಿನ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.
Advertisement
Advertisement
ನಂಜನಗೂಡು ನಂಜುಂಡೇಶ್ವರ ಸ್ವಾಮಿಯ ದೇವಾಲಯದ ಸುತ್ತಮುತ್ತಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು ಸಂಜೆ ವೇಳೆಗೆ ಕಬಿನಿಯಿಂದ ಮತ್ತಷ್ಟು ನೀರನ್ನು ನದಿಗೆ ಬಿಡುವ ಸಾಧ್ಯತೆ ಇದ್ದು, ಕಬಿನಿ ಹೊರ ಹರಿವು 90 ಸಾವಿರ ಕ್ಯೂಸೆಕ್ ಆಗುವ ಸಾಧ್ಯತೆ ಇದೆ. ಆದ್ದರಿಂದ ದೇವಾಲಯದ ಸುತ್ತಮುತ್ತಲ ಸುಮಾರು ಅರ್ಧ ಕಿಲೋಮೀಟರ್ ಸುತ್ತ ವಾಸವಿರುವ ನಿವಾಸಿಗಳು ಮತ್ತು ತಗ್ಗು ಪ್ರದೇಶದಲ್ಲಿರುವ ಸಾರ್ವಜನಿಕರಿಗೆ ಬೇರೆಡೆಗೆ ತೆರಳಲು ಜಿಲ್ಲಾಧಿಕಾರಿ ಮತ್ತು ತಾಲೂಕು ದಂಡಾಧಿಕಾರಿ ಸೂಚನೆ ನೀಡಿದ್ದಾರೆ. ಈಗಾಗಲೇ ದೇವಾಲಯದ ಸುತ್ತಮುತ್ತಲಿರುವ ಹಲವು ಮನೆಗಳು ಜಲಾವೃತವಾಗೊಂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv