ನವದೆಹಲಿ: ನಿಮಗೆ ಹಣ ಬೇಕಾದ್ರೆ ಗಡಿಯಲ್ಲಿ ಪುಂಡಾಟ ನಿಲ್ಲಿಸಿ ಎಂದು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರು ಇಂಡೋ-ಪಾಕ್ ಕ್ರಿಕೆಟ್ ಬಗ್ಗೆ ನಿಲುವನ್ನು ಪುನರುಚ್ಚರಿಸಿದ್ದಾರೆ.
ಇಂಡೋ-ಪಾಕ್ ನಡುವಿನ ಕ್ರಿಕೆಟ್ ಪಂದ್ಯದ ವಿಚಾರವಾಗಿ ಭಾರೀ ಚರ್ಚೆ ನಡೆದಿದೆ. ಉಭಯ ದೇಶಗಳ ನಡುವಿನ ರಾಜಕೀಯ, ಗಡಿ ಸಂಬಂಧದಿಂದಾಗಿ ದ್ವಿಪಕ್ಷೀಯ ಕ್ರಿಕೆಟ್ ಆಡುವ ಯಾವುದೇ ಅವಕಾಶವಿಲ್ಲ. ಹಾಗಿದ್ದರೂ ಅಭಿಮಾನಿಗಳು ಐಸಿಸಿ ನಡೆಸುವ ಏಕದಿನ, ಟಿ20 ಎರಡೂ ಮಾದರಿಯ ವಿಶ್ವಕಪ್ ಹಾಗೂ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ-ಪಾಕ್ ನಡುವ ಪಂದ್ಯ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ.
Advertisement
Advertisement
ಕೋವಿಡ್-19 ಸಾಂಕ್ರಾಮಿಕವು ಆರ್ಥಿಕತೆಯ ಮೇಲೆ ಭಾರೀ ಹೊಡೆತ ಕೊಟ್ಟಿದೆ. ಹೀಗಾಗಿ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ಹಣವನ್ನು ಸಂಗ್ರಹಿಸಲು ಇಂಡೋ-ಪಾಕ್ ಸರಣಿಯನ್ನು ಪ್ರಸ್ತಾಪಿಸಿದ್ದರು. ಆದರೆ ಕಪಿಲ್ ದೇವ್ ಅವರು ನಮಗೆ ಹಣದ ಅವಶ್ಯಕತೆ ಇಲ್ಲ. ನಾವು ಏಕೆ ಕ್ರಿಕೆಟಿಗರ ಜೀವನವನ್ನು ಅಪಾಯಕ್ಕೆ ದೂಡಬೇಕು ಎಂದು ಈ ಹಿಂದೆ ತಿರುಗೇಟು ನೀಡಿದ್ದರು.
Advertisement
Advertisement
ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಕಪಿಲ್ ದೇವ್, ”ನೀವು ಭಾವನಾತ್ಮಕವಾಗಿರಬಹುದು. ಈ ನಿಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸರಣಿ ನಡೆಯಬೇಕೆಂದು ಹೇಳಬಹುದು. ಆದರೆ ಪಂದ್ಯವನ್ನು ಆಡುವುದು ಈ ಸಮಯದಲ್ಲಿ ಆದ್ಯತೆಯಾಗಿಲ್ಲ. ನಿಮಗೆ ಹಣದ ಅಗತ್ಯವಿದ್ದರೆ ನೀವು ಗಡಿಯಲ್ಲಿ ನಡೆಸುತ್ತಿರುವ ಚಟುವಟಿಕೆಗಳನ್ನು ನಿಲ್ಲಿಸಬೇಕು. ಈ ಮೂಲಕ ಅಲ್ಲಿ ಖರ್ಚು ಮಾಡುವ ಹಣವನ್ನು ಆಸ್ಪತ್ರೆ ಮತ್ತು ಶಾಲೆಗಳ ನಿರ್ಮಾಣಕ್ಕೆ ಬಳಸಬಹುದು” ಎಂದು ಕಪಿಲ್ ದೇವ್ ಅವರು ಶೋಯೆಬ್ ಅಖ್ತರ್ ಅವರನ್ನು ಕುಟುಕಿದ್ದಾರೆ.
”ನಾನು ದೊಡ್ಡ ಚಿತ್ರಣವನ್ನು ನೋಡುತ್ತಿದ್ದೇನೆ. ನಾವು ಮಾತನಾಡಬಹುದಾದ ಏಕೈಕ ವಿಷಯವೆಂದರೆ ಕ್ರಿಕೆಟ್ ಎಂದು ನೀವು ಭಾವಿಸುತ್ತೀರಾ? ಅದರಾಚೆಗೂ ಮಾತನಾಡುವುದಿದೆ. ಕೊರೊನಾ ಭೀತಿಯಿಂದಾಗಿ ಶಾಲೆ ಮತ್ತು ಕಾಲೇಜುಗಳಿಗೆ ಹೋಗಲು ಸಾಧ್ಯವಾಗದ ಮಕ್ಕಳ ಬಗ್ಗೆ ನಾನು ಹೆಚ್ಚು ಚಿಂತಿಸುತ್ತಿದ್ದೇನೆ. ಏಕೆಂದರೆ ಅವರು ನಮ್ಮ ಯುವ ಪೀಳಿಗೆ. ಆದ್ದರಿಂದ ಶಾಲೆಗಳು ಮೊದಲು ತೆರೆಯಬೇಕೆಂದು ನಾನು ಬಯಸುತ್ತೇನೆ. ಕ್ರಿಕೆಟ್, ಫುಟ್ಬಾಲ್ ತಡವಾಗಿ ಆರಂಭವಾದರೂ ಪರವಾಗಿಲ್ಲ” ಎಂದು ಹೇಳಿದರು.
ಜಾಗತಿಕವಾಗಿ ಕೊರೊನಾ ವೈರಸ್ ಪರಿಸ್ಥಿತಿಯ ಬಗ್ಗೆ ಅಖ್ತರ್ ನಿರಂತರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ರೋಗಿಗಳಿಗೆ 10,000 ವೆಂಟಿಲೇಟರ್ ತಯಾರಿಸಲು ಪಾಕಿಸ್ತಾನಕ್ಕೆ ಸಹಾಯ ಮಾಡುವಂತೆ ಅವರು ಈ ಹಿಂದೆ ಭಾರತವನ್ನು ಕೇಳಿದ್ದರು.