ಮನರಂಜನೆಯ ಮಹಾರಾಜ ಅಂತಾನೇ ಮನೆಮಾತಾಗಿರುವ ಉದಯ ಟಿವಿ ಸಮಾಜಮುಖಿ ಧಾರಾವಾಹಿಗಳಿಂದ ವೀಕ್ಷಕರನ್ನ ಮನರಂಜಿಸುತ್ತಲೇ ಬಂದಿದೆ. ಸೀರಿಯಲ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸೂಪರ್ ಹಿಟ್ ಧಾರಾವಾಹಿ (Serial) ಉದಯ ವಾಹಿನಿಯ ‘ಕನ್ಯಾದಾನ’ (Kanyadaan). ತನ್ನ ಐದು ಜನ ಹೆಣ್ಣುಮಕ್ಕಳ ಜೀವನ ನೆಮ್ಮದಿದಾಯಕವಾಗಿರಬೇಕು ಅಂತ ಪರಿತಪಿಸೋ ತಂದೆಯ ಭಾವನಾತ್ಮಕ ಹೋರಾಟದ ಕಥೆ ಈಗಾಗಲೇ ಕನ್ನಡಿಗರ ಮನ ಗೆದ್ದಿದೆ.
Advertisement
ಎಂಟುನೂರು ಸಂಚಿಕೆಗಳನ್ನ ಪೂರೈಸುವ ಹಂತದಲ್ಲಿರುವ, ಕನ್ನಡಿಗರ ಮನೆಮಾತಾಗಿರುವ ಕನ್ಯಾದಾನ ಮಹಿಳೆಯರ ದೈನಂದಿನ ಜೀವನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ವಿಭಿನ್ನ ಪ್ರಯೋಗಗಳ ಮೂಲಕ ಸಂಚಿಕೆಗಳಲ್ಲಿ ಹೊಸತನ ತರುವ ಪ್ರಯತ್ನದಲ್ಲಿ ಕನ್ಯಾದಾನ ಧಾರಾವಾಹಿಯು ಕಿರುತೆರೆ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿದೆ. ಮುಖ್ಯ ಭೂಮಿಕೆಯ ಕಲಾವಿದರಷ್ಟೇ ಅಲ್ಲದೇ ಬೆಳ್ಳಿತೆರೆಯ ಜನಪ್ರಿಯ ಕಲಾವಿದರೂ ಸಹ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಮನರಂಜನೆ ನೀಡಿದ ನಿದರ್ಶನಗಳು ಹಲವಾರು. ಈ ಹಿಂದೆ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಸುಧಾರಾಣಿಯವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಧಾರಾವಾಹಿಗೆ ಮೆರುಗು ನೀಡಿದ್ದರು. ಅದೇ ರೀತಿ ಇತ್ತೀಚಿನ ಸಂಚಿಕೆಗಳಲ್ಲಿ “ಗಾಳಿಪಟ” ಹಾರಿಸಿ ಮಿಂಚಿದ್ದ ನಟಿ ನೀತು ಸಹ ಬಹುಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಈಗ ಶ್ರೀರಾಮನವಮಿಯ ಪ್ರಯುಕ್ತ ವಿಶೇಷ ಸಂಚಿಕೆಗಳು ಬಹು ಸೊಗಸಾಗಿ ಪ್ರಸಾರವಾಗಲಿದ್ದು ವೀಕ್ಷಕರು ಇದೇ ಏಪ್ರಿಲ್ 15ರಿಂದ ಈ ಅಪರೂಪದ ಸಂಚಿಕೆಗಳನ್ನ ವೀಕ್ಷಿಸಬಹುದು.
Advertisement
Advertisement
ಕನ್ನಡ ಧಾರಾವಾಹಿ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಐತಿಹಾಸಿಕ ಅಯೋಧ್ಯೆಯಲ್ಲಿ (Ayodhya) ವಿಶೇಷ ಸಂಚಿಕೆಗಳನ್ನ ಚಿತ್ರೀಕರಣ ಮಾಡಿರುವ ಹೆಗ್ಗಳಿಕೆ ಉದಯ ಟಿವಿಯ ʼಕನ್ಯಾದಾನʼ ತಂಡಕ್ಕೆ ಸಂದಿದೆ. ಇತ್ತೀಚೆಗಷ್ಟೇ ವಿಶ್ವಪ್ರಸಿದ್ಧ ಅಯೋಧ್ಯೆಯ ರಾಮಮಂದಿರಕ್ಕೆ ತೆರಳಿದ ʼಕನ್ಯಾದಾನʼ ತಂಡವು ತನ್ನ ಪ್ರೇಕ್ಷಕರಿಗೆ ಮೈನವೀರೇಳಿಸುವಂತಹ ವಿಶೇಷ ಸಂಚಿಕೆಗಳನ್ನ ಹೊತ್ತು ತಂದಿದೆ. ಶ್ರೀರಾಮಚಂದ್ರನ ಸನ್ನಿಧಿಯಲ್ಲಿ ಧಾರಾವಾಹಿಯ ಪ್ರಮುಖ ಪಾತ್ರಗಳು ಪ್ರೇಮವೆಂಬ ಜೀವನ್ಮುಖಿಯತ್ತ ತಮ್ಮನ್ನು ತಾವು ಹೇಗೆ ಕಂಡುಕೊಳ್ಳುತ್ತವೆ ಎಂಬುದು ವಿಶೇಷ! ʼಕನ್ಯಾದಾನʼದ ಕುಟುಂಬಗಳಲ್ಲಿ ಅಶ್ವತ್ಥನ ಹೆಣ್ಣುಮಕ್ಕಳ ಸಂಸಾರಗಳು ಶ್ರೀರಾಮನವಮಿಯ ವಿಶೇಷ ಸಂದರ್ಭದಲ್ಲಿ ಎದುರಾಗುವ ಅಗ್ನಿಪರೀಕ್ಷೆಗಳನ್ನ ಶ್ರೀರಾಮನ ಕೃಪೆಯಿಂದ ಹೇಗೆ ಮೆಟ್ಟಿ ನಿಲ್ಲುತ್ತವೆ ಎಂಬುದು ವಿಶೇಷ ಸಂಚಿಕೆಗಳ ತಿರುಳಾಗಿದೆ. ಹಾಗೆಯೇ ಅಯೋಧ್ಯೆಯ ಬಾಲರಾಮನ ದರ್ಶನದಿಂದ ಕಾರ್ತಿಕ್‌ನ ದಾಂಪತ್ಯದಲ್ಲಿ ಉಂಟಾಗುವ ಸಕಾರಾತ್ಮಕ ಬದಲಾವಣೆಗಳು ಹಾಗೂ ಆತನ ತಂಗಿಯ ಬಾಳಲ್ಲಿರುವ ಗೊಂದಲಗಳಿಗೆ ಅಂತಿಮವಾಗಿ ತೆರೆ ಬೀಳುವ ಸನ್ನಿವೇಶಗಳು ಎದುರಾಗುತ್ತವೆ.
Advertisement
ಕನ್ಯಾದಾನ ಧಾರಾವಾಹಿಯಲ್ಲಿನ ಪಾತ್ರಗಳು ಮದುವೆಯ ನಂತರ ಪ್ರತಿ ಹೆಣ್ಣುಮಗಳಿಗೆ ಬದುಕಿನ ಪರೀಕ್ಷೆಗಳನ್ನು ಎದುರಿಸಲು ಮನೋಸ್ಥೈರ್ಯ ತುಂಬುತ್ತವೆ. ಈ ಧಾರಾವಾಹಿಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ನಿಜಜೀವನದಲ್ಲಿ ನೋಡುಗರಿಗೆ ತುಂಬಾ ಹತ್ತಿರವಾಗಿರುವುದರಿಂದ ಮನರಂಜನೆಯ ಜೊತೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನೂ ನೀಡುತ್ತದೆ.
ಕನ್ಯಾದಾನ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ಸಂಜೆ 6 ಗಂಟೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.