ತಡೆಯಾಜ್ಞೆ ತೆರವು – ಕಾಂತಾರ ವರಾಹರೂಪಂ ಹಾಡು ಬಳಕೆಗೆ ಅನುಮತಿ

Public TV
2 Min Read
kantara 3

ತಿರುವನಂತಪುರಂ: ಕಾಂತಾರ(Kantara) ಚಿತ್ರದ ವರಾಹರೂಪಂ(Varaha Roopam) ಹಾಡಿನ ವಿವಾದದಲ್ಲಿ ಹೊಂಬಾಳೆ ಫಿಲ್ಮ್ಸ್‌ಗೆ ಮೊದಲ ಯಶಸ್ಸು ಸಿಕ್ಕಿದ್ದು, ಈ ಹಿಂದಿನಂತೆಯೇ ವರಾಹರೂಪಂ ಹಾಡು ಬಳಕೆಗೆ ಅನುಮತಿ ಸಿಕ್ಕಿದೆ.

ಕೃತಿಚೌರ್ಯದ ಆರೋಪ ಮಾಡಿದ್ದ ‘ಥೈಕ್ಕುಡಂ ಬ್ರಿಡ್ಜ್’(Thaikkudam Bridge) ಅರ್ಜಿಯನ್ನು ಕೇರಳದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ, ವಿಚಾರಣೆಗೆ ನ್ಯಾಯವ್ಯಾಪ್ತಿ ಅಡ್ಡಿ ಎಂದು ಹೇಳಿ ಅರ್ಜಿಯನ್ನೇ ವಜಾಗೊಳಿಸಿದೆ.

kantara varaha roopam controversy shashiraj kavoor FB Post

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ ವರಾಹರೂಪಂ ಹಾಡಿನ ಬರಹಗಾರ ಶಶಿರಾಜ್‌ ಕಾವೂರು, ಇಂದು ಕೆಳ ನ್ಯಾಯಾಲಯವು ಎರಡೂ ಕಡೆಯವರ ವಾದ ಆಲಿಸಿದ  ಬಳಿಕ ಥೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನು ವಜಾಗೊಳಿಸಿದೆ ಮತ್ತು ವರಾಹರೂಪಂ ಹಾಡಿಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ತೆರವು ಮಾಡಿದೆ. ನ್ಯಾಯ ಗೆದ್ದಿತು. ಜೈ ತುಳುನಾಡು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಿನಿಮಾಗಳ ಆಯ್ಕೆ, ದೇವರು ಬಗೆಗಿನ ಗ್ರಹಿಕೆ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ

ಕೋಝಿಕ್ಕೋಡ್ ನ್ಯಾಯಾಲಯದಲ್ಲಿ ಅರ್ಜಿ ವಜಾಗೊಂಡಿದ್ದರೂ ಪಾಲಕ್ಕಾಡ್‌ ನ್ಯಾಯಾಲಯದಲ್ಲಿ ಥೈಕ್ಕುಡಂ ಬ್ರಿಡ್ಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇನ್ನೂ ನಡೆಯುತ್ತಿದೆ. ಹೀಗಾಗಿ ಸದ್ಯಕ್ಕೆ ಮೂಲ ವರಾಹರೂಪಂ ಹಾಡನ್ನು ಬಳಸಲು ಸಾಧ್ಯವಿಲ್ಲ.

ಕೇರಳದ ಜನಪ್ರಿಯ ಸಂಗೀತ ಬ್ಯಾಂಡ್ ‘ಥೈಕ್ಕುಡಂ ಬ್ರಿಡ್ಜ್ ಕಾಂತಾರ ಸಿನಿಮದ ʼವರಾಹರೂಪಂʼ ಕೃತಿಚೌರ್ಯದ ಆರೋಪ ಮಾಡಿ ಕೇಸ್‌ ದಾಖಲಿಸಿತ್ತು. ಅರ್ಜಿಯನ್ನು ಮಾನ್ಯ ಮಾಡಿದ್ದ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ ಮತ್ತು ಕೋಝಿಕ್ಕೋಡ್ ಪ್ರಧಾನ ಜಿಲ್ಲಾ ನ್ಯಾಯಾಲಯ ಕಾಂತಾರ ನಿರ್ಮಾಪಕರಿಗೆ ವರಾಹರೂಪಂ ಹಾಡನ್ನು ಬಳಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಮುಂದಿನ ಆದೇಶದವರೆಗೆ ಸಿಂಕ್ರೊನೈಸ್ ಮಾಡಿದ ವರಾಹರೂಪಂ ಗೀತೆಯೊಂದಿಗೆ ಕಾಂತಾರ ಚಿತ್ರದ ಪ್ರದರ್ಶನ, ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ, ಸ್ಟ್ರೀಮಿಂಗ್ ಮಾಡದಂತೆ ಜಿಲ್ಲಾ ನ್ಯಾಯಾಲಯ ನಿರ್ಬಧ ವಿಧಿಸಿತ್ತು.

KANTARA 2 1

ವಜಾಗೊಳಿಸಿದ್ದ ಹೈಕೋರ್ಟ್‌
ಕಾಂತಾರ ಚಿತ್ರದ ʼವರಾಹರೂಪಂʼ ಹಾಡಿನ ಬಳಕೆಗೆ ನೀಡಲಾಗಿದ್ದ ಮಧ್ಯಂತರ ತಡೆಯನ್ನು ತೆರವುಗೊಳಿಸಬೇಕೆಂದು ಕೋರಿ ಹೊಂಬಾಳೆ ಫಿಲ್ಮ್ಸ್‌ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ ವಜಾಗೊಳಿಸಿತ್ತು. ನ್ಯಾಯಮೂರ್ತಿ ಸಿಎಸ್ ಡಯಾಸ್ ಅವರ ಏಕಸದಸ್ಯ ಪೀಠವು, ಅರ್ಜಿದಾರರು ಭಾರತದ ಸಂವಿಧಾನದ 227ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ಸಿವಿಲ್ ಪ್ರಕ್ರಿಯಾ ಸಂಹಿತೆಯಲ್ಲಿ ಸೂಚಿಸಲಾದ ಕಾರ್ಯವಿಧಾನವನ್ನು ಸಂಪೂರ್ಣವಾಗಿ ಬೈಪಾಸ್ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

ಕೆಳ ನ್ಯಾಯಾಲಯಗಳು ಹೊರಡಿಸಿದ ಪ್ರತಿಯೊಂದು ಮಧ್ಯಂತರ ಆದೇಶಗಳಿಗೆ ನಾವು ಆದೇಶವನ್ನು ನೀಡಲು ಸಾಧ್ಯವಿಲ್ಲ. ಒಂದು ವೇಳೆ ಆದೇಶ ನೀಡಿದರೆ ಮೂಲ ನ್ಯಾಯವ್ಯಾಪ್ತಿಯ ನ್ಯಾಯಾಲಯಗಳು ಮತ್ತು ಮೇಲ್ಮನವಿ ನ್ಯಾಯಾಲಯಗಳು ನಿಷ್ಕ್ರಿಯವಾಗುತ್ತವೆ. ಈ ನ್ಯಾಯಾಲಯವು ಇಂತಹ ಕೇಸ್‌ಗಳಿಂದ ತುಂಬಿ ತುಳುಕುತ್ತದೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿತ್ತು. ಈ ಅರ್ಜಿಯನ್ನು ಈಗ ವಿಚಾರಣೆಗೆ ಪರಿಗಣಿಸಲಾಗದು ಎಂದ ಕೋರ್ಟ್‌ ಕಾನೂನಿನಲ್ಲಿ ಲಭ್ಯವಿರುವ ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಹೊಂಬಾಳೆ ಫಿಲ್ಮ್ಸ್‌ನವರಿಗೆ ಸಲಹೆಯನ್ನು ನೀಡಿತ್ತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *