ಬೆಂಗಳೂರು: ಕನ್ನಡ ಕವಯತ್ರಿ, ಬರಹಗಾರ್ತಿ ಸರಿತಾ ಜ್ಞಾನಾನಂದ (82) ಶುಕ್ರವಾರ(ಡಿ.26) ಆರ್‌ಆರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಲೇಖಕಿ, ಅನುವಾದಕಿಯಾಗಿದ್ದ ಸರಿತಾ ಅವರು ವಿವಿಧ ಭಾಷೆಗಳ ಪ್ರಸಿದ್ಧರ ಕಥೆ, ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು.
ಸರಿತಾ ಜ್ಞಾನಾನಂದ(Saritha Gnanananda)) ಅವರು ಮೂಲತಃ ಬೆಂಗಳೂರಿನವರು. ತಂದೆ ಎನ್. ಆರ್. ನಂಜುಂಡಸ್ವಾಮಿ, ತಾಯಿ ಸುಬ್ಬಮ್ಮ. ಜನವರಿ 21, 1943ರಲ್ಲಿ ಜನಿಸಿದ ಅವರು ಮ್ಯೆಸೂರು ವಿಶ್ವವಿದ್ಯಾಲಯದಿಂದ ಬಿ. ಎ. ಮತ್ತು ಬಿ.ಎಡ್ ಹಾಗೂ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಎಂ. ಎಡ್. ಪದವಿಗಳನ್ನು ಪಡೆದಿದ್ದರು.
ಹಿಂದಿಯಲ್ಲಿ ರಾಷ್ಟ್ರಭಾಷಾ ಪ್ರವೀಣರಾಗಿರುವುದಲ್ಲದೆ ಕನ್ನಡ, ಇಂಗ್ಲಿಷ್, ತೆಲುಗು, ತಮಿಳು, ಮರಾಠಿ, ಮಲಯಾಳಂ ಮತ್ತು ಸಂಸ್ಕೃತ ಭಾಷೆಗಳಲ್ಲಿಯೂ ಅವರು ಪ್ರಾವೀಣ್ಯತೆ ಸಾಧಿಸಿದ್ದರು. ಸರಿತಾ ಅವರು ಬೆಂಗಳೂರು ಮತ್ತು ಕೆಜಿಎಫ್‍ಗಳಲ್ಲಿ ಶಾಲಾ ಶಿಕ್ಷಕರಾಗಿ ಕಾರ‍್ಯನಿರ್ವಹಿಸಿ ನಿವೃತ್ತಿ ಹೊಂದಿದ್ದರು.
ಸುಮಾರು ಮುನ್ನೂರಕ್ಕೂ ಹೆಚ್ಚು ಸಣ್ಣ ಕಥೆಗಳನ್ನು ಸರಿತಾ ರಚಿಸಿದ್ದು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲೆಲ್ಲಾ ಪ್ರಕಟಗೊಂಡಿರುವುದಲ್ಲದೆ ತೆಲುಗು, ತಮಿಳು, ಹಿಂದಿ ಭಾಷೆಗಳಿಗೂ ಅನುವಾದಗೊಂಡಿದ್ದವು. ‘ಬೃಂದಾವನ’, ಹಾಗೂ ‘ತುಳಸೀ ಕಟ್ಟೆ’ ಎಂಬ ಎರಡು ಕಥಾಸಂಕಲನಗಳೂ ಪ್ರಕಟಗೊಂಡಿವೆ. ಇವರ ಹಲವಾರು ಕತೆಗಳು ದೂರದರ್ಶನದಲ್ಲೂ ಪ್ರಸಾರವಾಗಿವೆ. ಇದನ್ನೂ ಓದಿ: 16 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿ – ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಸಲಹೆ
ಯಂಡಮೂರಿ ವೀರೇಂದ್ರನಾಥ್, ಸೂರ‍್ಯದೇವರ ರಾಮಮೋಹನರಾವ್, ಡಾ. ಕೊಂಡೂರು ವೀರರಾಘವಾಚಾರ್ಯಲು, ಬಲಿವಾಡ ಕಾಂತರಾವ್, ಮಲ್ಲಾದಿ ವೆಂಕಟ ಕೃಷ್ಣಮೂರ್ತಿ, ಡಾ. ಸಮರಂ ಮುಂತಾದ ತೆಲುಗು ಲೇಖಕರು, ತಮಿಳಿನ ಶಿವ ಶಂಕರಿ, ನಾರಾಯಣದತ್ತ ಶ್ರೀಮಾಲಿಯವರ ಹಿಂದಿ, ರಾಮ ಮೊಹಮದ್ ಡಿಸೌಜರವರ ಉರ್ದು ಮತ್ತು ಮರಾಠಿ ಭಾಷೆಗಳಿಂದ ಸುಮಾರು 50ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಸಂಗೀತದಲ್ಲಿ ಕೂಡ ಸಾಧನೆ ಮಾಡಿರುವ ಸರಿತಾ ಜ್ಞಾನಾನಂದರು ‘ನೀಗಿಕೊಂಡ ಸಂಸ’, ‘ಜುಂನಾಳ ‘ಧೂಳ್ಯನ ಪ್ರಸಂಗ’, ‘ಸಂಗ್ಯಾ ಬಾಳ್ಯ’, ‘ಜೋಕುಮಾರ ಸ್ವಾಮಿ’ ‘ಸಖೀಗೀತ’, ಬೆನಕನ ಕೆರೆ’ ಮುಂತಾದ ಅನೇಕ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ಮತ್ತು ನೃತ್ಯಗಳಲ್ಲಿ ತರಬೇತಿ ನೀಡಿದ್ದಾರೆ. ತಮ್ಮ ಸಂಗೀತದಲ್ಲಿ ಅನೇಕ ಧ್ವನಿಸುರುಳಿಗಳನ್ನೂ ಬಿಡುಗಡೆ ಮಾಡಿದ್ದಾರೆ.
ಸರಿತಾ ಜ್ಞಾನಾನಂದರು ಕೆಜಿಎಫ್‌ನಲ್ಲಿ ಕನ್ನಡೇತರರಿಗೆ ಕನ್ನಡ ತರಗತಿಗಳನ್ನು ನಡೆಸಿ ಅನೇಕ ಇತರ ಭಾಷಿಗರಿಗೆ ಕನ್ನಡ ಭಾಷೆಯನ್ನು ಕಲಿಸಿದ್ದಾರೆ.



