ಬೆಂಗಳೂರು: ಶ್ರೀಮುರಳಿಯವರ ಯಶಸ್ಸಿನ ಓಟ ನಾಗಾಲೋಟ ಪಡೆಯಲು ಕಾರಣವಾಗಿದ್ದ ಚಿತ್ರ ರಥಾವರ. ಈ ಚಿತ್ರದ ಮೂಲಕ ಭಿನ್ನವಾದ ಕಥೆಯೊಂದನ್ನು ಆರಿಸಿಕೊಂಡಿದ್ದವರು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ಪ್ರೇಕ್ಷಕರನ್ನು ಅಚ್ಚರಿಗೀಡುಮಾಡಿದ್ದ ಕಂಟೆಂಟಿನಿಂದಲೇ ಗಮನ ಸೆಳೆದಿದ್ದ ಬಂಡಿಯಪ್ಪ ನಿರ್ದೇಶನ ಮಾಡಿರೋ ತಾರಕಾಸುರ ಚಿತ್ರದ ಬಗ್ಗೆ ಕುತೂಹಲದ ಕಣ್ಣು ನೆಡದಿರುತ್ತಾ?
ತನ್ನ ರಗಡ್ ಪೋಸ್ಟರ್, ಹಾಲಿವುಡ್‍ನ ದೈತ್ಯ ನಟ ಡ್ಯಾನಿ ಸಫಾನಿಯ ಖಳನ ಪಾತ್ರ ಮತ್ತು ಹಾಡುಗಳ ಮೂಲಕ ಅಲೆಯೆಬ್ಬಿಸಿರೋ ಚಿತ್ರ ತಾರಕಾಸುರ. ಇದೀಗ ಆ ಕುತೂಹಲವನ್ನು ಇಮ್ಮಡಿಗೊಳಿಸಲೆಂದೇ ಟ್ರೈಲರ್ ಒಂದನ್ನು ರಿಲೀಸ್ ಮಾಡಲು ಚಿತ್ರ ತಂಡ ತೀರ್ಮಾನಿಸಿದೆ. ನಾಳೆ ಮಧ್ಯಾಹ್ನ 3.45ಕ್ಕೆ ಒರಾಯನ್ ಮಾಲ್‍ನಲ್ಲಿ ಈ ಟ್ರೈಲರ್ ಬಿಡುಗಡೆಯಾಗಲಿದೆ.
ಈ ಟ್ರೈಲರ್ ಅನ್ನು ಈಗಾಗಲೇ ನಿರ್ದೇಶಕ ದುನಿಯಾ ಸೂರಿ ನೋಡಿದ್ದಾರೆ. ನಿರ್ದೇಶಕ ಚಂದರ್ರಶೇಖರ್ ಬಂಡಿಯಪ್ಪ ಅವರ ವಿಭಿನ್ನ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿಯೇ ಮೂರು ಶೇಡುಗಳಲ್ಲಿ, ಸವಾಲಿನ ಪಾತ್ರದಲ್ಲಿ ನಟಿಸಿರೋ ವೈಭವ್ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಎಂ ನರಸಿಂಹಲು ನಿರ್ಮಾಣದ ಈ ಚಿತ್ರದಲ್ಲಿ ಅವರ ಪುತ್ರ ವೈಭವ್ ನಾಯಕನಾಗಿ ನಟಿಸಿದ್ದಾರೆ. ರಥಾವರ ಚಿತ್ರದಲ್ಲಿ ಚಂದ್ರಶೇಖರ್ ಬಂಡಿಯಪ್ಪ ಮಂಗಳಮುಖಿಯರ ನಿಗೂಢ ಲೋಕವೊಂದನ್ನು ಅನಾವರಣಗೊಳಿಸಿದ್ದರು. ಆ ಮೂಲಕ ಪ್ರೇಕ್ಷಕರು ಬೆರಗಾಗುವಂತೆಯೂ ಮಾಡಿದ್ದರು. ಇದೀಗ ಅಂಥಾದ್ದೇ ಮತ್ತೊಂದು ಬೆರಗಾಗಿಸೋ ಕಥೆಯೊಂದಿಗೇ ಅವರು ತಾರಕಾಸುರನನ್ನು ಅಣಿಗೊಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv