ಅಂದುಕೊಂಡಂತೆ ಆಗಿದ್ದರೆ ಇಂದು ಸ್ಯಾಂಡಲ್ ವುಡ್ (Sandalwood) ಶಟ್ ಡೌನ್ (shut down) ಆಗಬೇಕಿತ್ತು. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೊರಾಂಗಣ ಚಿತ್ರೀಕರಣ (shooting) ಕಾರ್ಮಿಕರ ಸಂಘವು ಬಂದ್ ಗೆ ಕರೆ ನೀಡಿತ್ತು. ಇಂದಿನಿಂದ ಚಿತ್ರೀಕರಣದಲ್ಲಿ ಕಾರ್ಮಿಕರು ಭಾಗಿಯಾಗದಂತೆ ತಿಳಿಸಿತ್ತು. ಆದರೆ, ಈ ಬಂದ್ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಜೂನ್ 5ರಿಂದ ಚಿತ್ರೀಕರಣಕ್ಕೆ ಬ್ರೇಕ್ ಹಾಕುವುದಾಗಿ ಸಂಘದ ಅಧ್ಯಕ್ಷ ಎ.ಹೆಚ್. ಭಟ್ ಮಾಧ್ಯಮಗಳ ಜೊತೆ ಮಾತನಾಡಿ ತಿಳಿಸಿದ್ದರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು (film chamber) ನಿರ್ಮಾಪಕರ ಸಂಘದ ಅಧ್ಯಕ್ಷರನ್ನು ಮತ್ತು ಕಾರ್ಮಿಕ ಸಂಘದ ಅಧ್ಯಕ್ಷರನ್ನು ಕೂರಿಸಿಕೊಂಡು ಮಾತುಕತೆ ನಡೆಸಿದ್ದಾರೆ. 15 ದಿನಗಳ ಗಡುವು ಪಡೆದುಕೊಂಡು ಹೋರಾಟವನ್ನು ಸದ್ಯ ಕೈ ಬಿಡಲಾಗಿದೆ. ಇದನ್ನೂ ಓದಿ:ಆ ಸಂಬಂಧ ಅರ್ಧಕ್ಕೆ ನಿಂತು ಹೋಯಿತು, ಆದ್ರೆ ನನಗೆ ಮದುವೆ ಬಗ್ಗೆ ನಂಬಿಕೆಯಿದೆ- ನಟಿ ವೈಷ್ಣವಿ
ಸಂಬಳ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಸಂಘವು ಚಿತ್ರೋದ್ಯಮದ ಮುಂದೆ ಇಟ್ಟಿದೆ. ಆ ಬೇಡಿಕೆ ಈಡೇರುವವರೆಗೂ ಚಿತ್ರೀಕರಣದಲ್ಲಿ ಭಾಗಿಯಾಗದಂತೆ ನಿರ್ಧರಿಸಲಾಗಿತ್ತು. ಕಳೆದ ಮೂರು ವರ್ಷಗಳಿಂದಲೂ ಈ ಬೇಡಿಕೆಗಳನ್ನು ಇಡುತ್ತಾ ಬಂದಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಬಂದ್ ಮಾಡುವಂತಹ ನಿರ್ಧಾರವನ್ನು ಸಂಘ ತಗೆದುಕೊಂಡಿದೆ ಎಂದು ಹೇಳಲಾಗಿತ್ತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘ ಆಗ್ರಹಿಸಿದೆ. ಒಂದು ವೇಳೆ ತಮ್ಮ ಬೇಡಿಕೆಯನ್ನು ಈಡೇರಿಸದೇ ಹೋದರೆ ಜೂನ್ 5 ರಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳದಂತೆ ತನ್ನ ಸದಸ್ಯರಿಗೆ ಸಂಘ ಸೂಚಿಸಿತ್ತು.