ಭೂಗತದ ಗಿರ್ ಗಿಟ್ಲೆಯಲ್ಲಿ ಬದುಕಿನ ದರ್ಶನವಿದೆ!

Public TV
2 Min Read
Gir gitle a Copy

ಬೆಂಗಳೂರು: ಇದು ಯಾವ ಬಗೆಯ ಚಿತ್ರ ಎಂಬ ಗೊಂದಲವನ್ನೇ ಕುತೂಹಲವನ್ನಾಗಿ ಪರಿವರ್ತಿಸಿಕೊಂಡು ಬಹು ನಿರೀಕ್ಷಿತ ಚಿತ್ರವಾಗಿ ಹೊರಹೊಮ್ಮಿದ್ದ ಚಿತ್ರ ಗಿರ್ ಗಿಟ್ಲೆ. ರವಿಕಿರಣ್ ನಿರ್ದೇಶನದ ಈ ಚಿತ್ರವೀಗ ಬಿಡುಗಡೆಗೊಂಡಿದೆ. ಪಕ್ಕಾ ಕಮರ್ಶಿಯಲ್ ಸಿನಿಮಾವಾದರೂ ಆ ಸೂತ್ರದಾಚೆಗೂ ಹಬ್ಬಿಕೊಂಡಿರೋ ಮೂವರು ಹುಡುಗರತ ಸುತ್ತಾ ಘಟಿಸೋ ಈ ಕಥನ ಪ್ರೇಕ್ಷಕರನ್ನು ತನ್ನದೇ ಆದ ರೀತಿಯಲ್ಲಿ ಸೆಳೆದುಕೊಂಡಿದೆ.

ರೌಡಿಸಂ ಹುದುಲಿಗೆ ಕಾಲಿಡೋ ಹುಡುಗರು, ಭೂಗತ ಜಗತ್ತು, ಪ್ರೀತಿ ಮುಂತಾದವುಗಳೆಲ್ಲ ಸಾಕಷ್ಟು ಸಂಖ್ಯೆಯಲ್ಲಿ ಸಿನಿಮಾ ವಸ್ತುಗಳಾಗಿವೆ. ಆದರೆ ಭಿನ್ನ ಒಳನೋಟ ಮತ್ತು ಸೂಕ್ಷ್ಮತೆ ಇದ್ದರೆ ಖಂಡಿತಾ ಇಂಥಾ ಕಥೆಯೇ ಬೇರೆ ರೀತಿಯಲ್ಲಿ ಕಾಡಬಲ್ಲದೆಂಬುದಕ್ಕೆ ಗಿರ್ ಗಿಟ್ಲೆ ಚಿತ್ರ ತಾಜಾ ಉದಾಹರಣೆಯಂತಿರೋ ಚಿತ್ರ. ಈ ಮೂಲಕ ಬಿಡುಗಡೆಯ ಪೂರ್ವದಲ್ಲಿ ಹುಟ್ಟಿಕೊಂಡಿದ್ದ ಕ್ಯೂರಿಯಾಸಿಟಿಗಳೆಲ್ಲವನ್ನು ನಿರ್ದೇಶಕ ರವಿಕಿರಣ್ ತಣಿಸಿದ್ದಾರೆ.

girgitle

ಇದು ದಿಕ್ಕುದೆಸೆಗಳಿಲ್ಲದ ಮೂವರು ಅನಾಥ ಹುಡುಗರ ಸುತ್ತಾ ಸುತ್ತವ ಕಥೆ. ಅನಾಥರಾಗಿ ಹುಟ್ಟಿ ಬೆಳೆದ, ವಿದ್ಯೆಯನ್ನೂ ಮೈಗೂಡಿಸಿಕೊಂಡ ಈ ಯುವಕರು ಅದು ಹೇಗೋ ಹಾದಿ ಬಿಟ್ಟು ಭೂಗತದತ್ತ ಆಕರ್ಷಿತರಾಗುತ್ತಾರೆ. ನಗರ ಪ್ರದೇಶದ ಡಾನುಗಳನ್ನು ಕೊಂದು ಕೆಡವಿದರೆ ನೇಮು ಫೇಮು ಬರುತ್ತದೆಂಬ ಪಿತ್ಥವೂ ನೆತ್ತಿಗೇರಿಕೊಳ್ಳುತ್ತೆ. ಇದರಿಂದಲೇ ಕೈ ತುಂಬಾ ಕಾಸು ಗಿಟ್ಟಿಸುವ ತಂತ್ರವನ್ನೂ ಮೈಗೂಡಿಸಿಕೊಳ್ಳುತ್ತಾರೆ. ಒಬ್ಬ ಡಾನ್ ನನ್ನು ಮುಗಿಸಲು ಮತ್ತೊಬ್ಬರಿಂದ ಸುಪಾರಿ ಪಡೆದು ಇದನ್ನೇ ಪುನರಾವರ್ತಿಸುತ್ತಾರೆ.

ಹೀಗೆ ಅನೇಕರ ಕೊಲೆಗೆ ಸುಪಾರಿ ಪಡೆಯುತ್ತಲೇ ಹೋಗೋ ಈ ಹುಡುಗರು ಒಪ್ಪಿಕೊಂಡ ಕೆಲಸ ಮುಗಿಸುತ್ತಾರಾ ಅಥವಾ ತಾವೇ ಮುಗಿದು ಹೋಗುತ್ತಾರಾ ಅನ್ನೋದು ಗಿರ್ ಗಿಟ್ಲೆಯ ನಿಜವಾದ ಕುತೂಹಲ. ಅದನ್ನು ಥೇಟರಿನಲ್ಲಿ ನೋಡಿ ತಣಿಸಿಕೊಂಡರೇನೇ ಉತ್ತಮ. ಕೇವಲ ಈ ಭೂಗತದ ಆಚೀಚೆಯ ಕಥೆ ಮಾತ್ರವಾಗಿದ್ದರೆ ಇದೊಂದು ಸಾಧಾರಣ ಚಿತ್ರವಾಗಿ ದಾಖಲಾಗಿತ್ತು. ಆದರೆ ನಿರ್ದೇಶಕ ರವಿಕಿರಣ್ ಇದರೊಂದಿಗೇ ಬದುಕಿನ ಕಗ್ಗಂಟುಗಳಿಗೆ ಉತ್ತರ ಹುಡುಕೋ ಪ್ರಯತ್ನ ಮಾಡಿದ್ದಾರೆ. ತಮ್ಮೊಳಗಿನ ಪ್ರಶ್ನೆಗಳನ್ನು ಪಾತ್ರಗಳ ಮೂಲಕ ಎಲ್ಲರಿಗೂ ಕಾಡುವಂತೆ ಮಾಡಿದ್ದಾರೆ.

maxresdefault

ರಗಡ್ ಡೈಲಾಗುಗಳು, ಮಾಸ್ ಸನ್ನಿವೇಶಗಳ ಮೂಲಕವೇ ಈ ಚಿತ್ರ ಎಲ್ಲರಿಗೂ ಆಪ್ತವಾಗುತ್ತೆ. ನಿರೀಕ್ಷೆಯಂತೆಯೇ ರಂಗಾಯಣ ರಘು ಪಕ್ಕಾ ಡಿಫರೆಂಟಾದ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂವರು ಹುಡುಗರು ರಘು ಜೊತೆ ಪಳಗಿದ ನಟರಂತೆಯೇ ನಟಿಸಿದ್ದಾರೆ. ಒಟ್ಟಾರೆಯಾಗಿ ರೌಡಿಸಂ ಹಿನ್ನೆಲೆಯೊಂದಿಗೆ ಭಿನ್ನವಾದ ಚಿತ್ರವೊಂದನ್ನು ರವಿಕಿರಣ್ ಕೊಟ್ಟಿದ್ದಾರೆ. ಈ ಮೂಲಕವೇ ಅವರು ಭಿನ್ನ ಪಥದ ನಿರ್ದೇಶಕರಾಗಿ ನೆಲೆ ನಿಲ್ಲೋ ಲಕ್ಷಣಗಳೂ ಕಾಣಿಸಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *