ಬೆಂಗಳೂರು: ಜೆಡಿಎಸ್ ನಿಂದ ಬಂಡಾಯ ಎದ್ದು ಕಾಂಗ್ರೆಸ್ ಕದ ತಟ್ಟಿರುವ ಶಾಸಕ ಜಮೀರ್ ಅಹಮದ್ ಕನ್ನಡ ಮರೆತಿದ್ದಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.
ಕನ್ನಡದ ನೆಲದೊಳಗೆ ಶಾಸಕರಾಗಿ ಗುರುತಿಸಿಕೊಂಡು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗುತ್ತಿರುವ ಜಮೀರ್ ಅಹಮದ್ ಶುಕ್ರವಾರ ನಗರದ ಟೌನ್ ಹಾಲ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.
35 ವಿಕಲಾಂಗ ಬಡ ಕುಟುಂಬಕ್ಕೆ ಆಟೋ ರಿಕ್ಷಾ ಕೊಡುವ ಮೂಲಕ ಸಾಮಾಜಿಕ ಬದ್ಧತೆ ಪ್ರದರ್ಶಿಸಿದ್ದ ಜಮೀರ್ ಅವರ ಕಾರ್ಯಕ್ರಮದಲ್ಲಿ ಹೊರಗಡೆ ಅಳವಡಿಸಿದ್ದ ಎಲ್ಲ ಫ್ಲೆಕ್ಸ್ ಗಳಲ್ಲಿ ಕನ್ನಡ ಮಾಯವಾಗಿತ್ತು. ಉರ್ದು ಮತ್ತು ಇಂಗ್ಲಿಷ್ ಭಾಷೆಯಲ್ಲಿದ್ದ ಫ್ಲೆಕ್ಸ್ ಗಳನ್ನು ದ್ವಾರದಲ್ಲಿ ಹಾಕಲಾಗಿತ್ತು.
ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆದಿರುವ ವಿಚಾರ ತಿಳಿದಿದ್ದರೂ ಫ್ಲೆಕ್ಸ್ ನಲ್ಲಿ ಕನ್ನಡವನ್ನು ಕೈ ಬಿಟ್ಟಿದ್ದು ಯಾಕೆ ಎನ್ನುವ ಪ್ರಶ್ನೆಗೆ ಜಮೀರ್ ಅಹಮದ್ ಉತ್ತರಿಸಬೇಕಿದೆ.