ಹಾಯ್ ಸಿಂಚನ
ಇನ್ನೇನು ಸ್ವಲ್ಪ ದಿನ ನನ್ನ ಬರ್ತಡೇ ಬಂದೇ ಬಿಡ್ತು. ನಮ್ಮಿಬ್ಬರ ಪ್ರೀತಿಯ ಪ್ರಪಂಚ ಸೃಷ್ಟಿಯಾದ ಮೇಲೆ ಇದು ನನ್ನ ಮೊದಲನೇ ಬರ್ತಡೇ. ಆ ದಿನ ನನಗೆ ಏನು ಗಿಫ್ಟ್ ಕೊಡ್ತಿಯಾ? ನನ್ನ ಪಾಲಿಗೆ ನೀನೇ ಅದ್ಭುತವಾದ ಗಿಫ್ಟ್, ಆದ್ರೂ ಈ ರೀತಿ ಒಂದು ಆಸೆ ಇರತ್ತಲ್ಲ ಅದ್ಕೆ ಕೇಳ್ತಿದಿನಿ. ಏನೇ ಕೊಟ್ರೂ, ಅದು ಸ್ಪೆಷಲ್ ಆಗೇ ಇರ್ಬೇಕು. ಅದು ಕೇವಲ ವಸ್ತು ಮಾತ್ರ ಆಗಿರಬಾರದು!
ನೀನೇ ಗಿಫ್ಟ್ ಅಂತ ಹೇಳಿದ ಮೇಲೂ ಮತ್ತೆ ಗಿಫ್ಟ್ ಕೇಳ್ತಿದಿನಿ.. ಇವನೆಂಥ ಮೆಂಟ್ಲು ಅಂತ ಅನ್ನಿಸ್ತಿದಿಯಾ? ಹಾಗೆಲ್ಲ ಏನೂ ಅಂದ್ಕೋ ಬೇಡ. ನೀನು ಒಂತರಾ ನನ್ನ ಲೈಫ್‌ಲ್ಲಿ ಸ್ಪೆಷಲ್. ನಿನ್ನ ಗಿಫ್ಟ್ ಅದೆಷ್ಟು ಸ್ಪೆಷಲ್ ಆಗಿರತ್ತೆ ಅನ್ನೋ ಕುತೂಹಲ ನನಗೆ.
ನೀನು ನನ್ನ ಜೀವನಕ್ಕೆ ಕಾಲಿಟ್ಟಿದ್ದು, ನಾನ್ ಕತ್ತಲಲ್ಲಿ ಇದ್ದಾಗ. ಎಲ್ಲಾ ಮುಗಿದೇ ಹೋಯ್ತು ಅಂತ ಕೈ ಚೆಲ್ಲಿ ಕೂತಾಗ. ಆಗ ಹೆಗಲ ಮೇಲೆ ಕೈ ಇಟ್ಟು ಹೃದಯಕ್ಕೆ ಸಾಂತ್ವನವಾಗಿ ಇಳಿದವಳು ನೀನು.

ಆ ದಿನಗಳಲ್ಲಿ ಪ್ರೀತಿಯ ಮೇಲೆ ನಂಬಿಕೆಯನ್ನೇ ನಾನು ಕಳೆದುಕೊಂಡಿದ್ದೆ. ಅವಳು ಅಷ್ಟು ಚೆನ್ನಾಗಿ ನಂಬಿಸಿ, ಮೋಸ ಮಾಡಿ ಹೋಗಿದ್ಲು. ಆ ದಿನದಿಂದ ಪ್ರೀತಿ ಅಂದ್ರೆ ಇದೇನಾ? ಇಷ್ಟೆಲ್ಲಾ ನಟನೆ ಮಾಡಿ ವಂಚಿಸೋದಾ ಅಂತಾನೇ ನನಗೆ ಅನ್ಸಿತ್ತು. ಇನ್ನೇನೂ ಪ್ರೀತಿಗೆ ಈ ಬದುಕಲ್ಲಿ ಜಾಗವೇ ಇಲ್ಲ. ಅವಳ ಆ ಕಹಿ ನೆನಪಿಂದ ಹೊರಗೆ ಬರೋಕೆ ಸಾಧ್ಯನೇ ಇಲ್ವೇನೋ ಅಂತ ನನಗೆ ನಾನೇ ಕೋಟೆ ಕಟ್ಟಿ ಕುಳಿತಿದ್ದೆ. ಆಗ ನನ್ನೆಲ್ಲ ನೋವುಗಳ ವಿರುದ್ಧ ದಂಡೆತ್ತಿ ಬಂದವಳು ನೀನು. ಹಾಗೆ ಪ್ರೀತಿಯ ದಂಡೆತ್ತಿ ಬಂದವಳು ನನ್ನನ್ನ ವಶಪಡಿಸಿಕೊಂಡು ಆಳೋ ರಾಣಿನೇ ಆಗ್ಬಿಟ್ಟೆ.
ಪ್ರೀತಿಯ ನಟನೆಯಲ್ಲಿ ಕೊಂದು ಹೋದವಳ ನೆನಪು ಸಹ ಕಾಡದಂತೆ ಮಾಡಿದ ಮಮತೆ ನಿನ್ನದು. ಅಷ್ಟೇ ಅಲ್ಲ, ಬದುಕೇ ಸಾಕು ಎನಿಸಿದಾಗ, ಒಡೆದ ಹೃದಯಕ್ಕೆ ಮುತ್ತಿನ ಹೊಲಿಗೆ ಹಾಕಿ ಹೊಸ ಬದುಕಿಗೆ ಉಸಿರಿಟ್ಟವಳು ನೀನು. ನಿನ್ನ ತೋಳುಗಳಲ್ಲಿ ಅಪ್ಪಿದಾಗ ಬರುವ ನಿನ್ನ ಬೆವರಿನ ಅಮಲಿನ ಕಂಪು, ನನ್ನೆಲ್ಲಾ ನೋವುಗಳಿಗೆ ದಿವ್ಯೌಷಧ! ಅದಕ್ಕೆ ಬೇರೆ ಯಾವ ಹೋಲಿಕೆಯೂ ಇಲ್ಲ..!
ನಿನ್ನಂತ ವಿಶೇಷವಾದ ಗಿಫ್ಟ್‌ಗಾಗಿನೇ ಇರ್ಬೇಕು ನನ್ನನ್ನ ಒಂದು ಆಪ್ಷ್ಯನ್ ಆಗಿಟ್ಕೊಂಡವಳನ್ನ ದೇವ್ರು ನನ್ನಿಂದ ದೂರ ಮಾಡಿದ್ದು ಅನ್ಸುತ್ತೆ ಒಮ್ಮೊಮ್ಮೆ.
ಹೋಗ್ಲಿ ಬಿಡು, ನನಗೇನು ಗಿಫ್ಟ್ ಕೊಡ್ತಿಯಾ? ಕಾಯ್ತಾ ಇರ್ತಿನಿ. ನಿನ್ನ ಗಿಫ್ಟ್‌ಗಾಗಿ ಅಲ್ಲ ನಿನಗಾಗಿ, ನೀನು ಏನ್ ಕೊಟ್ರೂ ಅದು ಸ್ಪಷಲ್ಲೇ..! ಒಂದು ತುಂಟ ಮುತ್ತಾದ್ರೂ!
ನಿನ್ನ ಪ್ರೇಮಲೋಕದ ದೊರೆ
