– ಯಶಸ್ವಿಯಾಯ್ತು #KasaragoduKannadaUlisiಅಭಿಯಾನ
ಕಾಸರಗೋಡು: ಕನ್ನಡ ಭಾಷಾ ಅಲ್ಪಸಂಖ್ಯಾತರ ಮೇಲೆ ಕೇರಳ ರಾಜ್ಯ ಸರ್ಕಾರ ಕಡ್ಡಾಯವಾಗಿ ಮಲೆಯಾಳ ಭಾಷೆ ಹೇರಿರುವುದನ್ನು ಪ್ರತಿಭಟಿಸಿ ಕಾಸರಗೋಡಿನ ಕನ್ನಡಿಗರು ಇಂದು ಬೆಳಿಗ್ಗೆ ಕಲೆಕ್ಟರೇಟ್‍ಗೆ ನಡೆಸಿದ ದಿಗ್ಬಂಧನ ಯಶಸ್ವಿಯಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಕನ್ನಡಿಗರು ಆಗಮಿಸಿ ಕಾಸರಗೋಡು ಜಿಲ್ಲಾ ಕಲೆಕ್ಟರೇಟ್ ದಿಗ್ಬಂಧನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Advertisement
ಕನ್ನಡ ಹೋರಾಟಗಾರರು ಜಿಲ್ಲಾ ಕೇಂದ್ರದ ಆಡಳಿತ ಕಚೇರಿ ಇರುವ ವಿದ್ಯಾನಗರ ಸಿವಿಲ್ ಸ್ಟೇಷನ್‍ನ ಎಲ್ಲಾ ದ್ವಾರಗಳ ಮುಂದೆ ಕುಳಿತು `ಕನ್ನಡ ಉಳಿಸಿ, ಕನ್ನಡ ರಕ್ಷಿಸಿ’ ಘೋಷಣೆಗಳನ್ನು ಕೂಗಿ ಕಚೇರಿ ಒಳಗೆ ಹೋಗಲು ಆಗಮಿಸಿದ್ದ ಸರ್ಕಾರಿ ನೌಕರರನ್ನು ತಡೆದರು. ಇದರಿಂದಾಗಿ ಸಿಬ್ಬಂದಿಗೆ ಸಿವಿಲ್ ಸ್ಟೇಷನ್‍ಗೆ ಪ್ರವೇಶಿಸಲು ಸಾಧ್ಯವಾಗದೇ ಸಿವಿಲ್ ಸ್ಟೇಷನ್‍ನ ಎಲ್ಲಾ ಕಾರ್ಯಚಟುವಟಿಕೆಗಳು ಸ್ತಬ್ಧಗೊಂಡಿತ್ತು. ಜಿಲ್ಲಾಧಿಕಾರಿ, ಎಡಿಎಂ ಸಹಿತ ಯಾರಿಗೂ ಕಲೆಕ್ಟರೇಟ್‍ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಬೆಳಗ್ಗೆ 5 ಗಂಟೆಯಿಂದಲೇ ಕನ್ನಡಾಭಿಮಾನಿಗಳು ಕಾಸರಗೋಡಿನತ್ತ ಆಗಮಿಸಿದ ಹಿನ್ನೆಲೆಯಲ್ಲಿ ಯಾವುದೇ ಅಧಿಕಾರಿಗಳಿಗೂ ಕಚೇರಿಗೆ ತೆರಳಲು ಸಾಧ್ಯವಾಗಲಿಲ್ಲ.
Advertisement
ಸಿವಿಲ್ ಸ್ಟೇಶನ್ ಮಹಾದ್ವಾರದಲ್ಲಿ ನಡೆದ ಚಳವಳಿಯನ್ನು ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ, ಬೇಳ ಶೋಕಮಾತಾ ಇಗರ್ಜಿಯ ಧರ್ಮಗುರು ವಿನ್ಸೆಂಟ್ ಡಿ’ಸೋಜಾ, ಧಾರ್ಮಿಕ ನೇತಾರ ಮೌಲಾನ ಅಬ್ದುಲ್ ಅಸೀಸ್ ಎಂಬಿವರು ಸಂಯುಕ್ತವಾಗಿ ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು. ಕರ್ನಾಟಕ ಸಮಿತಿ ಅಧ್ಯಕ್ಷ ಕೆ. ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಇದು ಕನ್ನಡ ವಿರೋಧಿ ಮಸೂದೆಯ ವಿರುದ್ಧ ಮಾತ್ರ ನಡೆಸುವ ದಿಗ್ಬಂಧನ ಚಳವಳಿಯಲ್ಲ, ಬದಲಾಗಿ ಕನ್ನಡ ವಿರೋಧಿಗಳ ಅಂತರಾಳದ ವಿರುದ್ಧ ನಡೆಸುತ್ತಿರುವ ಚಳವಳಿ ಎಂದು ಯೋಗಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
Advertisement
Advertisement
ಕನ್ನಡ ಭಾಷೆ ಅಳಿದರೆ ಕನ್ನಡ ಸಂಸ್ಕೃತಿಯೂ ಅಳಿಯಲಿದೆ. ಅಂತಹ ಯತ್ನವನ್ನು ನಾವು ಯಾವ ಬೆಲೆ ತೆತ್ತಾದರೂ ಹಿಮ್ಮೆಟ್ಟಿಸುತ್ತೇವೆ. ಕನ್ನಡದ ಮೇಲಿನ ದಬ್ಬಾಳಿಕೆಯನ್ನು ಕೊನೆಗೊಳಿಸಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಯತ್ನಿಸಬೇಕಾಗಿದೆ ಎಂದು ಮೌಲಾನ ಅಬ್ದುಲ್ ಅಸೀಸ್ ಅಭಿಪ್ರಾಯಪಟ್ಟರು.
ಸರ್ಕಾರ ಹೊರಡಿಸಿದ ಮಸೂದೆಯ ಹೊರಗೆ ಸಿಹಿ ಲೇಪಿಸಿದ್ದು ಒಳಗೆ ವಿಷ ಗುಳಿಗೆಯನ್ನು ತುಂಬಲಾಗಿದೆ. ಅದರ ವಿರುದ್ಧ ನಾವಿಂದು ಬೆವರು ಸುರಿಸಿ ಹೋರಾಟ ನಡೆಸುತ್ತಿದ್ದೇವೆ. ಅಗತ್ಯ ಬಂದಲ್ಲಿ ರಕ್ತ ಸುರಿಸಿ ಹೋರಾಟ ನಡೆಸಲೂ ನಾವು ಸಿದ್ಧ. ಕಾಸರಗೋಡಿನ 20 ಸಾವಿರದಷ್ಟು ಕೊಂಕಣಿ ಕ್ರೈಸ್ತರೂ ಈ ಹೋರಾಟದ ಜತೆಗಿದ್ದಾರೆಂದು ವಿನ್ಸೆಂಟ್ ಡಿ’ಸೋಜಾ ಅಭಿಪ್ರಾಯಪಟ್ಟರು.
ಜಿಲ್ಲಾ ಪಂ. ಅಧ್ಯಕ್ಷ ಎ.ಜಿಸಿ ಬಶೀರ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹಕೀಂ ಕುನ್ನಿಲ್, ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್, ನ್ಯಾಯವಾದಿ ಸುಬ್ಬಯ್ಯ ರೈ, ರವೀಶ ತಂತ್ರಿ ಕುಂಟಾರು, ಬಿ.ವಿ. ಕಕ್ಕಿಲಾಯ, ಹರ್ಷಾದ್ ವರ್ಕಾಡಿ, ಆಯಿಷಾ ಪೆರ್ಲ, ಕನ್ನಡ ಹಿರಿಯ ಹೋರಾಟಗಾರ ನ್ಯಾಯವಾದಿ ಅಡೂರು ಉಮೇಶ್ ನಾಯ್ಕ್, ಪುರುಷೋತ್ತಮ ಮಾಸ್ತರ್, ಉಮೇಶ್ ಸಾಲಿಯಾನ್, ಕಾಸರಗೋಡು ಚಿನ್ನಾ, ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಡಾ. ಸಿ. ಕೃಷ್ಣ ಭಟ್, ಕೇಶವ ಪ್ರಸಾದ್ ನಾಣಿತ್ತಿಲು, ಪ್ರಮೀಳಾ ಸಿ. ನಾಯಕ್, ವಾಮನ ರಾವ್ ಬೇಕಲ್, ಸೋಮಶೇಖರ ಜೆ.ಎಸ್, ಗಣಪತಿ ಕೋಟೆಕಣಿ, ಡಾ. ಮೋಹನ್ ಕುಮಾರ್ ಕುಂಟಾರು, ಪಿ.ಆರ್. ಸುನಿಲ್, ಕೃಷ್ಣ ಅಮೆಕ್ಕಳ, ಗೋಪಾಲ ಶೆಟ್ಟಿ ಅರಿಬೈಲು, ಹರಿಶ್ಚಂದ್ರ ಮಂಜೇಶ್ವರ, ಡಾ. ಜಯಪ್ರಕಾಶ್, ಟಿ.ಡಿ. ಸದಾಶಿವ ರಾವ್, ವೆಂಕಟ್ರಮಣ ಹೊಳ್ಳ, ಝೆಡ್. ಎ. ಕಯ್ಯಾರ್, ಹರೀಶ್ ಮಾಡ, ಅಶ್ರಫ್ ಮರ್ತ್ಯ, ಎ.ಕೆ.ಎಂ. ಅಶ್ರಫ್, ಕೋಳಾರು ಸತೀಶ್ಚಂದ್ರ ಭಂಡಾರಿ, ಸವಿತಾ, ಎಸ್.ವಿ. ಭಟ್, ಶೇಂತಾರು ನಾರಾಯಣ ಭಟ್, ಸುಧಾಮಗೋಸಾಡ, ಶೈಲಜಾ ಭಟ್, ಜೋಗೇಂದ್ರ, ಪುಂಡರೀಕಾಕ್ಷ ಕೆ.ಎಲ್., ಬಾಲಕೃಷ್ಣ ಅಗ್ಗಿತ್ತಾಯ, ಜಯರಾಮ ಮಂಜತ್ತಾಯ, ಶಿವರಾಮ ಕಾಸರಗೋಡು, ಮಹಾಲಿಂಗೇಶ್ವರ ಭಟ್, ಡಾ. ಶ್ರೀಪಡ್ರೆ, ಬಾಲಕೃಷ್ಣ ವೊರ್ಕೂಡ್ಲು ಸೇರಿದಂತೆ ಹಲವರು ಕಲೆಕ್ಟರೇಟ್ ದಿಗ್ಬಂಧನದ ಮುಂಚೂಣಿಯಲ್ಲಿದ್ದರು.
ಇದನ್ನೂ ಓದಿ: ಕೇರಳ ಸರ್ಕಾರದ ವಿರುದ್ಧ ಕನ್ನಡಿಗರು ಪ್ರತಿಭಟನೆ ನಡೆಸಿದ್ದು ಯಾಕೆ?