ಪೊಗದಸ್ತಾದ ಟಗರು!

Public TV
2 Min Read
Tagaru 06

ಬೆಂಗಳೂರು: ಟಗರು ಥಿಯೇಟರಿಗೆ ಬಂದಿದೆ. ಸೂರಿ ನಿರ್ದೇಶನ, ಶಿವರಾಜ್ ಕುಮಾರ್ ಹೀರೋ. ಇಬ್ಬರಿಬ್ಬರ ಕಾಂಬಿನೇಷನ್ನಿನಲ್ಲಿ ಬಂದ ಎರಡನೇ ಸಿನಿಮಾ. ಹೀಗೆ ಹತ್ತು ಹಲವರು ಕಾರಣಗಳಿಗಾಗಿ ಟಗರು ಸಿನಿಮಾದ ಬಗ್ಗೆ ಪ್ರೇಕ್ಷಕರು ಮಾತ್ರವಲ್ಲದೆ, ಚಿತ್ರರಂಗದವರ ಪಾಲಿಗೂ ವಿಪರೀತ ಕುತೂಹಲವಿತ್ತು. ಈಗ ಆ ಎಲ್ಲ ನಿರೀಕ್ಷೆಗಳಿಗೂ ಉತ್ತರ ಸಿಕ್ಕಿದೆ.

Tagaru 01

ಇರೋ ಬುದ್ಧಿಯನ್ನೇ ಬಂಡವಾಳ ಮಾಡಿಕೊಂಡು ಕ್ರೂರ ಕೆಲಸಗಳನ್ನು ಮಾಡಿಸುವ ಇಂಟಲಿಜೆಂಟ್ ಕ್ರಿಮಿನಲ್ಲುಗಳು. ರಾಜಕಾರಣಿಗಳು ಮತ್ತವರ ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡು ಹನಿ ಟ್ರ್ಯಾಪ್ ಮಾಡುವ ದುಷ್ಟರು. ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಕೊಲೆಗಡುಕರನ್ನು ಮಟ್ಟಹಾಕಲು ನಿಲ್ಲುವ ಪೊಲೀಸ್ ಅಧಿಕಾರಿಗಳು. ಪ್ರೀತಿಸಿದವರಿಗೆ ಸಹಾಯ ಮಾಡಲು ಹೋಗಿ ಫೀಲ್ಡಿಗಿಳಿದು ಡಾನ್ ಆದವನು. ಸಹವಾಸ ದೋಷದಿಂದ ಬೇಡದ್ದನ್ನೆಲ್ಲಾ ಕಲಿತ ಹುಡುಗಿ. ಹೀಗೆ ಸಾಕಷ್ಟು ಎಲಿಮೆಂಟುಗಳನ್ನು ಒಂದಕ್ಕೊಂದು ಪೋಣಿಸಿ ತಯಾರಿಸಿರುವ ಗುಚ್ಛವೇ ಟಗರು.

Tagaru 03

ಸೂರಿ ಕಥೆ ಕಟ್ಟುವ ರೀತಿಯೇ ವಿಶಿಷ್ಟ. ನೇರವಾಗಿ ಹೇಳಿಬಿಡಬಹುದಾದ ಎಳೆಯನ್ನು ಬೇರೆಯದ್ದೇ ಹಾದಿಯಲ್ಲಿ ಕೊಂಡೊಯ್ದು ನೋಡುಗರ ಎದೆ ಮುಟ್ಟಿಸುವ ಅವರ ಕಸುಬುದಾರಿಕೆ ಟಗರು ಚಿತ್ರದಲ್ಲೂ ಗೆಲುವು ಕಂಡಿದೆ. ಇಂಥ ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ಬಹಳ ಮುಖ್ಯ. ಇದೇ ಸಿನಿಮಾ ಬೇರೊಬ್ಬರ ಕೈಗೆ ಸಿಕ್ಕಿದ್ದರೆ ಅಬ್ಬರದಿಂದ ಗೊಬ್ಬರವಾಗುತ್ತಿತ್ತೋ ಏನೋ? ಆದರೆ ಸಂಗೀತ ನಿರ್ದೇಶಕ ಚರಣ್ ರಾಜ್ ಸಮಚಿತ್ತದಿಂದ ಕೂತು ಹಿನ್ನೆಲೆ ಶಬ್ದಗಳನ್ನು ಸೃಷ್ಟಿಸಿದ್ದಾರೆ. ಕ್ಯಾಮೆರಾ ಕೆಲಸ ಮಾಡಿರುವ ಮಹೇನ್ ಸಿಂಹ ಅಂತೂ ಇದು ಸಿನಿಮಾ ಅನ್ನೋದನ್ನೇ ಮರೆತು ಕಣ್ಣೆದುರೇ ನಡೆಯುತ್ತಿರುವ ದೃಶ್ಯಗಳಂತೆ ಕಲಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ.

Tagaru 04

ಸಿನಿಮಾದಲ್ಲಿನ ಒಂದೊಂದು ಪಾತ್ರಗಳೂ ಖಡಕ್ಕಾಗಿ ಮೂಡಿಬಂದಿವೆ. ಇಂಟಲಿಜೆಂಟ್ ಡಾನ್ ಪಾತ್ರದಲ್ಲಿ ನಟಿಸಿರೋ ರಂಗಭೂಮಿ ಕಲಾವಿದ ಸಚ್ಚು ಮುಖಪರಿಚಯ ಮಾಮೂಲಿ ಪ್ರೇಕ್ಷಕರಿಗೆ ಗೊತ್ತಿಲ್ಲದಿದ್ದರೂ ಯಾವತ್ತಿಗೂ ನೆನಪಿನಲ್ಲುಳಿಯುವಂತೆ ನಟಿಸಿದ್ದಾರೆ. ಇನ್ನು ಮುಂದೆ ಹೀರೋ ಆಗಿಯೇ ಮುಂದುವರೆಯಬೇಕೆನ್ನುವ ಆಸೆಯನ್ನು ಪಕ್ಕಕ್ಕಿಟ್ಟು ಇಂಥಾ ಖಡಕ್ಕು ರೋಲುಗಳಲ್ಲಿ ಕಾಣಿಸಿಕೊಂಡರೆ ಧನಂಜಯ, ವಸಿಷ್ಠರಂತ ನಟರು ದೊಡ್ಡ ಎತ್ತರಕ್ಕೇರುವುದರಲ್ಲಿ ಡೌಟಿಲ್ಲ.

Tagaru 02

ಇನ್ನು ಟಗರು ಟೈಟಲ್ ಸಾಂಗ್‍ಗೆ ಚರಣ್ ರಾಜ್ ಕೊಟ್ಟಿರೋ ಟ್ಯೂನು, ಅಂಥೋಣಿ ದಾಸನ್ ಧ್ವನಿಗೆ ನಿಜಕ್ಕೂ ಬೆಲೆ ತಂದುಕೊಟ್ಟಿರೋದು ನೃತ್ಯ ನಿರ್ದೇಶಕ. ಲಾರಿ ಎಪಿಸೋಡುಗಳ ಫೈಟ್ ಕಂಪೋಸ್ ಮಾಡಿರುವ ಜಾಲಿ ಬಾಸ್ಟಿನ್ ಕೆಲಸ ರೋಚಕ. ಸಂಭಾಷಣೆ ಬರೆದಿರುವ ಮಾಸ್ತಿ ಸಾಮಾನ್ಯವಾಗಿ ರೌಡಿಗಳ ಬಾಯಿಂದ ಹೊರಡುವ ಮಾತನ್ನೇ ಯಥಾವತ್ತು ಅಕ್ಷರಕ್ಕಿಳಿಸಿದ್ದಾರೆ.

ಒಟ್ಟಾರೆಯಾಗಿ ನೋಡಿದರೆ ಟಗರು ಕಮರ್ಷಿಯಲ್ ಸಿನಿಮಾಗಳನ್ನು ಇಷ್ಟಪಡುವವರು ಮತ್ತು ಫ್ಯಾಮಿಲಿ ಆಡಿಯನ್ಸು ಕೂಡಾ ನೋಡಬಹುದಾದ ಸಿನಿಮಾ.

Share This Article
Leave a Comment

Leave a Reply

Your email address will not be published. Required fields are marked *