ಸುದೀಪ್‌ ಹೆಸರು ಹೇಳಿ ಯುವ ನಟನಿಗೆ ನಂದಕಿಶೋರ್‌ 22 ಲಕ್ಷ ವಂಚನೆ!

Public TV
2 Min Read
Shabarish Shetty Nandakishore

– ನಂದಕಿಶೋರ್‌ ವಿರುದ್ಧ ಶಬರೀಶ್‌ ಶೆಟ್ಟಿ ಆರೋಪ

ಬೆಂಗಳೂರು: ಸುದೀಪ್‌ (Sudeep) ಹೆಸರು ಹೇಳಿ ಖ್ಯಾತ ನಿರ್ದೇಶಕ ನಂದಕಿಶೋರ್ (Nandakishore) ವಿರುದ್ಧ 22 ಲಕ್ಷ ರೂ. ವಂಚನೆ ಆರೋಪ ಕೇಳಿ ಬಂದಿದೆ.

9 ವರ್ಷಗಳ ಹಿಂದೆ ನಂದ ಕಿಶೋರ್‌ ನನ್ನಿಂದ 22 ಲಕ್ಷ ರೂ. ಪಡೆದು ಈಗ ಹಣ ನೀಡದೇ ವಂಚಿಸಿದ್ದಾರೆ ಎಂದು ಯುವನಟ ಶಬರೀಶ್ ಶೆಟ್ಟಿ (Shabarish Shetty) ಆರೋಪಿಸಿದ್ದಾರೆ.

ಶಬರೀಶ್‌ ಶೆಟ್ಟಿ ಆರೋಪ ಏನು?
9 ವರ್ಷಗಳ ಹಿಂದೆ ನಂದಕಿಶೋರ್‌ 22 ಲಕ್ಷ ರೂ. ಪಡೆದಿದ್ದರು. ದುಡ್ಡು ಕೊಡುವಂತೆ ಕೇಳಿದಾಗ ಚಿತ್ರಗಳಲ್ಲಿ ನಟಿಸುವ ಆಫರ್‌ ನೀಡಿದ್ದರು. ಆದರೆ ನನಗೆ ಯಾವುದೇ ಆಫರ್‌ ನೀಡಿರಲಿಲ್ಲ.

ಈ ವಿಚಾರವನ್ನು ನಾನು ನಟ ಸುದೀಪ್‌ ಅವರ ಗಮನಕ್ಕೆ ತರಲು ಮುಂದಾಗಿದ್ದೆ. ಈ ವೇಳೆ ಸುದೀಪ್‌ ಬಳಿ ಹೇಳದಂತೆ ತಡೆಯುತ್ತಿದ್ದರು. ನಾನು ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ (CCL) ಆಡುವ ಕನಸ್ಸು ಕಟ್ಟಿಕೊಂಡಿದ್ದೆ. ಕನ್ನಡ ಚಲನಚಿತ್ರ ಕಪ್ (ಕೆಸಿಸಿ)ಟೂರ್ನಿಯಲ್ಲಿ ನಾನು ಎರಡು ಸೀಸನ್ ಆಡಿದ್ದೇನೆ. ಹಣ ಕೇಳಿದರೆ ನಿನ್ನನ್ನು ಕೆಸಿಸಿಯಿಂದ ಹೊರ ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದರು. ನಾನು ಸುದೀಪ್ ಸರ್ ಜೊತೆ ಕ್ರಿಕೆಟ್ ಆಡುವ ಆಸೆಯಿಂದ ಸುಮ್ಮನಾಗುತ್ತಿದ್ದೆ. ಇದನ್ನೂ ಓದಿ: ಯುವ ಗಾಯಕಿ ಅಖಿಲಾ ಪಜಿಮಣ್ಣು ಬಾಳಲ್ಲಿ ಬಿರುಗಾಳಿ – ವಿವಾಹ ವಿಚ್ಛೇದನಕ್ಕೆ ಅರ್ಜಿ

 

ಈಗ ನನ್ನ ರಾಮಧೂತ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ. ಸಿನಿಮಾ ರಿಲೀಸ್ ಮಾಡಲು ನನ್ನ ಬಳಿ ಹಣ ಇಲ್ಲ. ನನ್ನ ಹಣ ವಾಪಸ್ ಕೊಡಿ ಎಂದು ಕೇಳಿದರೆ ಏನ್ ಮಾಡಿಕೊಳ್ಳುತ್ತೀಯೋ ಮಾಡು ಎನ್ನುತ್ತಿದ್ದಾರೆ.

ನಮ್ಮಂತ ಪುಟ್ಟ ಕಲಾವಿದರು ಹೇಗೆ ಬದುಕಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ನನ್ನ ಹಣ ನನಗೆ ಕೊಡದಿದ್ದರೆ ನಂದ ಕಿಶೋರ್ ವಿರುದ್ದ ಕಾನೂನು ಮೊರೆ ಹೋಗುತ್ತೇನೆ. ಫಿಲ್ಮ್ ಚೇಂಬರ್‌ಗೆ ದೂರು ಕೊಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ರುಕ್ಮಿಣಿ ಸೆಲ್ಫಿ `ಟೈಗರ್’ ಪ್ರಿಂಟ್ ಶರ್ಟ್ ಸೀಕ್ರೆಟ್ ರಿವೀಲ್! ಜೂ.ಎನ್‌ಟಿಆರ್‌ಗೆ ನಾಯಕಿ?

ಶಬರೀಶ್‌ ಆರೋಪಕ್ಕೆ ಪಬ್ಲಿಕ್‌ ಟಿವಿ ನಂದಕಿಶೋರ್‌ ಅವರನ್ನು ಸಂಪರ್ಕಿಸಿದೆ. ಸದ್ಯಕ್ಕೆ ನಾನು ಈ ಕುರಿತು ಏನೂ ಮಾತಾಡಲಾರೆ. ಕೆಲಸದ ಸಂಬಂಧ ನಾನು ಮುಂಬೈನಲ್ಲಿದ್ದೇನೆ. ಶಬರೀಶ್ ಶೆಟ್ಟಿ ಬಾಯಿಗೆ ಬಂದಂತೆ ಆರೋಪ ಮಾಡುತ್ತಿದ್ದಾರೆ. ಬೇರೆ ಬೇರೆಯವರ ಹೆಸರು ಎಳೆತಂದಿದ್ದಾರೆ. ನನ್ನ ವಿರುದ್ಧ ಮಾಡಿದ ಆರೋಪಕ್ಕೆ ಕಾನೂನು ರೀತಿಯಲ್ಲೇ ಉತ್ತರ ಕೊಡುವೆ. ವಕೀಲರ ಜೊತೆ ಮಾತಾಡಿ, ಈ ಕುರಿತು ಪ್ರತಿಕ್ರಿಯೆ ಕೊಡುವೆ. ನಾನೂ ಕೂಡ ಆತನ ವಿರುದ್ಧ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.

 

Share This Article