ಬೇಸಿಗೆ ಅಂದರೆ ಮಾವಿನಕಾಯಿ ಸೀಜನ್. ಹೆಚ್ಚಾಗಿ ಮಾವಿನಕಾಯಿ ಸಿಕ್ಕಾಗ ಅದರಿಂದ ಉಪ್ಪಿನಕಾಯಿ ತಯಾರಿಸಿ ವರ್ಷವಿಡೀ ಬಳಸಬಹುದು. ಆದರೆ ಎಲ್ಲರ ಮನೆಯ ಉಪ್ಪಿನಕಾಯಿ ಒಂದೇ ರುಚಿ ಇರುವುದಿಲ್ಲ. ಯಾಕಂದ್ರೆ ಮಾಡೋ ವಿಧಾನದ ಮೇಲೆ ಉಪ್ಪಿನಕಾಯಿಯ ರುಚಿಯೂ ಭಿನ್ನವಾಗಿರುತ್ತದೆ. ಮಾವಿನ ಕಾಯಿ ಉಪ್ಪಿನಕಾಯಿ ಮಾಡೋಕೆ ಇಲ್ಲಿವೆ 3 ರೀತಿಯ ವಿಧಾನಗಳು
ಬೇಕಾಗುವ ಸಾಮಗ್ರಿಗಳು
1. ಹುಳಿ ಮಾವಿನಕಾಯಿ – 5 ರಿಂದ 6(ಮಧ್ಯಮ ಗಾತ್ರದ್ದು)
2. ಉಪ್ಪು- 1/2 ಕಪ್
3. ಬ್ಯಾಡಗಿ ಮೆಣಸಿನಕಾಯಿ – 25
4. ಮೆಂತ್ಯೆ – 3 ಚಮಚ
5. ಸಾಸುವೆ – 10 ಚಮಚ
6. ಎಣ್ಣೆ- 1 ಕಪ್
7. ಇಂಗು – 1/4 ಚಮಚ
8. ಜೀರಿಗೆ- 1 ಚಮಚ
9. ಅರಿಶಿನ- 1 ಚಮಚ
Advertisement
Advertisement
ವಿಧಾನ- 1
* ಮೊದಲಿಗೆ ಮಾವಿನಕಾಯಿಗಳನ್ನು ತೊಳೆದು ಶುದ್ಧವಾದ ಬಟ್ಟೆಯಿಂದ ಒರೆಸಿಕೊಳ್ಳಿ( ನೀರಿನ ಅಂಶ ಉಳಿದರೆ ಉಪ್ಪಿನಕಾಯಿ ಬೇಗ ಹಾಳಾಗುತ್ತದೆ)
* ಒರೆಸಿದ ನಂತರ ಮಾವಿನಕಾಯಿಗಳನ್ನು ಬೇಕಾದ ಗಾತ್ರಕ್ಕೆ ಕಟ್ ಮಾಡಿಕೊಳ್ಳಿ.
* ಉಪ್ಪಿನಕಾಯಿ ಶೇಖರಿಸಿಡುವ ಜಾಡಿಯಲ್ಲಿ ತೇವಾಂಶವಿಲ್ಲದಂತೆ ಒರೆಸಿಕೊಳ್ಳಿ.
* ಜಾಡಿಗೆ ಮಾವಿನಕಾಯಿ ಹೋಳುಗಳನ್ನು ಹಾಕಿ ಅದರ ಮೇಲೆ ಒಂದು ಲೇಯರ್ ಉಪ್ಪು ಹಾಕಿ. ಹೀಗೆ ಒಂದರ ಮೇಲೊಂದರಂತೆ ಮಾವಿನಕಾಯಿ ಮತ್ತು ಉಪ್ಪನ್ನು ಹಾಕಿ ಗಟ್ಟಿಯಾಗಿ ಮುಚ್ಚಳವನ್ನು ಮುಚ್ಚಿ ಎರಡರಿಂದ ಮೂರು ದಿನಗಳವರೆಗೆ ಇಡಬೇಕು.
* ಮೂರನೇ ದಿನಕ್ಕೆ ಮಾವಿನಕಾಯಿ ಉಪ್ಪಿನೊಂದಿಗೆ ಚೆನ್ನಾಗಿ ಬೆರೆತು ನೀರಿನಂಶ ಕೆಳಗೆ ಶೇಖರಣೆಯಾಗಿರುತ್ತದೆ.
* ನಂತರ ಮಾವಿನಕಾಯಿ ಹೋಳುಗಳನ್ನು ಜಾಡಿಯಿಂದ ತೆಗೆದು ಒಂದು ತಟ್ಟೆಯಲ್ಲಿ ಹಾಕಿ. ಜಾಡಿಯಲ್ಲಿರುವ ಉಪ್ಪಿನ ನೀರನ್ನು ತೆಗೆದು ಅದಕ್ಕೆ ಮತ್ತೊಂದು ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಿ. ನೀರು ಅರ್ಧದಷ್ಟು ಇಂಗಿದ ನಂತರ ಆರಲು ಬಿಡಿ.
* ಒಂದು ಬಾಣಲೆಯಲ್ಲಿ ಸಾಸುವೆ, ಮೆಂತ್ಯೆ ಮತ್ತು ಜೀರಿಗೆಯನ್ನು ಒಂದರ ನಂತರ ಒಂದರಂತೆ ಕೆಂಪಾಗುವ ತನಕ ಹುರಿದು ತೆಗೆಯಿರಿ.
* ನಂತರ 4 ಚಮಚ ಎಣ್ಣೆ ಹಾಕಿ ಬ್ಯಾಡಗಿ ಮೆಣಸಿನಕಾಯಿಯನ್ನು ಹುರಿದುಕೊಳ್ಳಿ. ಕೊನೆಯಲ್ಲಿ ಸ್ವಲ್ಪ ಇಂಗು ಹಾಕಿ ಬಿಸಿ ಮಾಡಿ ತೆಗೆದು ಎಲ್ಲಾ ಮಸಾಲೆ ಪದಾರ್ಥಗಳು ತಣ್ಣಗಾಗಲು ಬಿಡಿ.
* ನಂತರ ಮಿಕ್ಸಿ ಜಾರ್‍ಗೆ ಹುರಿದಿಟ್ಟುಕೊಂಡ ಪದಾರ್ಥಗಳನ್ನು ಹಾಕಿ ಪುಡಿ ಮಾಡಿಕೊಳ್ಳಿ.
* ಬಾಣಲೆಗೆ ಎಣ್ಣೆ ಹಾಕಿ, ಸ್ವಲ್ಪ ಸಾಸುವೆ ಮತ್ತು ಪುಡಿ ಮಾಡಿದ ಮಿಶ್ರಣ ಹಾಕಿ ಚೆನ್ನಾಗಿ ಕಲಸಿ. ನಂತರ ಮಾವಿನಕಾಯಿ ಹೋಳು ಮತ್ತು ಕುದಿಸಿದ ನೀರನ್ನು ಹಾಕಿ ತಿರುವಿ.
* ನೀರು ಇಂಗಿದ ನಂತರ ಒಲೆಯಿಂದ ಇಳಿಸಿ ತಣ್ಣಗಾದ ನಂತರ ಒಂದು ಡಬ್ಬದಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಳವನ್ನು ಮುಚ್ಚಿ ಎರಡು ದಿನಗಳ ನಂತರ ಬಳಸಿ.
Advertisement
Advertisement
ವಿಧಾನ – 2: ಡ್ರೈ ಉಪ್ಪಿನಕಾಯಿ
* ಮಾವಿನಕಾಯಿಗಳನ್ನ ಮಧ್ಯಮ ಗಾತ್ರದಲ್ಲಿ ಕಟ್ ಮಾಡಿಕೊಂಡು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ.(ಮಾವಿನ ಕಾಯಿಯಲ್ಲಿ ನೀರಿನಂಶ ಹೋಗಿ ಎರಡೂ ಕಡೆ ತಿಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಒಣಗಿಸಬೇಕು)
* ಒಂದು ಪಾತ್ರೆಯಲ್ಲಿ ಎರಡು ಕಪ್ ನೀರು ಹಾಗೂ ಕಾಲು ಕಪ್ ಉಪ್ಪು ಹಾಕಿ ಕುದಿಸಿಕೊಳ್ಳಿ.
* ನಂತರ ಒಂದು ಪಾತ್ರೆಗೆ ಒಣಗಿದ ಮಾವಿನಕಾಯಿ ಹೋಳುಗಳನ್ನ ಹಾಕಿ ಅದಕ್ಕೆ ಕುದಿಸಿಕೊಂಡ ನೀರನ್ನು ಹಾಕಿ.
* ಒಂದು ಬಾಣಲೆಯಲ್ಲಿ ಸಾಸುವೆ, ಮೆಂತ್ಯೆ, ಜೀರಿಗೆ ಮತ್ತು ಒಣಮೆಣಸಿನ ಕಾಯಿಯನ್ನ ಒಂದರ ನಂತರ ಒಂದರಂತೆ ಹುರಿದು ಪುಡಿ ಮಾಡಿಕೊಳ್ಳಿ.
* ಮತ್ತೆ ಅದೇ ಬಾಣಲೆಗೆ ಅರ್ಧ ಕಪ್ ಎಣ್ಣೆ ಹಾಕಿ ಇದಕ್ಕೆ ಸ್ವಲ್ಪ ಸಾಸುವೆ, ಕರಿಬೇವಿನಸೊಪ್ಪು, ಇಂಗು, ಅರಿಶಿಣ, ಜಜ್ಜಿದ ಬೆಳ್ಳುಳ್ಳಿ(ಒಂದು ಹಿಡಿಯಷ್ಟು) ಹಾಕಿ ಹುರಿಯಿರಿ. ನಂತರ ಇದಕ್ಕೆ ಪುಡಿ ಮಾಡಿಟ್ಟುಕೊಂಡ ಮಿಶ್ರಣ ಹಾಕಿ ಚೆನ್ನಾಗಿ ಕಲಸಿ.
* ನಂತರ ಇದಕ್ಕೆ ಒಣಗಿದ ಮಾವಿನಕಾಯಿ ಹೋಳುಗಳನ್ನ ಹಾಕಿ ಬೆರೆಸಿ.
* ನೀರು ಸಂಪೂರ್ಣವಾಗಿ ಇಂಗಿ, ಬಾಣಲೆಯಲ್ಲಿ ಎಣ್ಣೆ ಬಿಟ್ಟುಕೊಳ್ಳುವಂತಾದಾಗ ಒಲೆಯಿಂದ ಕೆಳಗಿಳಿಸಿ.
* ಈ ಉಪ್ಪಿನಕಾಯಿ ತುಂಬಾ ಡ್ರೈ ಆಗಿರುತ್ತದೆ.
ವಿಧಾನ-3: ದಿಢೀರ್ ಉಪ್ಪಿನಕಾಯಿ
* ಮಾವಿನಕಾಯಿಗಳನ್ನ ಚೌಕಾಕಾರದಲ್ಲಿ ನಿಮಗೆ ಬೇಕಾದ ಗಾತ್ರಕ್ಕೆ ಕಟ್ ಮಾಡಿಕೊಂಡು ಒಂದು ಪಾತ್ರೆಯಲ್ಲಿ ಹಾಕಿ.
* ಮತ್ತೊಂದು ಪಾತ್ರೆಯಲ್ಲಿ 2 ಕಪ್ ನೀರು, ಅದಕ್ಕೆ ಕಾಲು ಕಪ್ ಉಪ್ಪು ಹಾಕಿ ಕುದಿಸಿಕೊಂಡು ಮಾವಿನಕಾಯಿಯ ಪಾತ್ರೆಗೆ ಹಾಕಿ.
* ಒಂದು ಬಾಣಲೆಯಲ್ಲಿ ಮೆಂತ್ಯೆ, ಜೀರಿಗೆ, ಸಾಸುವೆಯನ್ನ ಒಂದರ ನಂತರ ಒಂದರಂತೆ ಹುರಿದುಕೊಂಡು, ಇದಕ್ಕೆ ಇಂಗು ಮತ್ತು ಅರಿಶಿಣ ಬೆರೆಸಿ ಪುಡಿ ಮಾಡಿಕೊಳ್ಳಿ
* ಈ ಪುಡಿಯನ್ನ ಬಿಸಿನೀರಿನಲ್ಲಿ ನೆನೆಸಿಟ್ಟ ಮಾವಿನ ಕಾಯಿಗೆ ಹಾಕಿ ಮಿಕ್ಸ್ ಮಾಡಿ.
* ಒಂದು ಚಿಕ್ಕ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಸಾಸುವೆ, ಇಂಗು, ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿ ಮಾವಿನಕಾಯಿ ಮಿಶ್ರಣಕ್ಕೆ ಹಾಕಿ.
* ಇದನ್ನ 2 ಗಂಟೆಗಳ ನಂತರ ಬಳಸಬಹುದು.