ಸುಪಾರಿಯ ನೆಪದಲ್ಲಿ ತೆರೆದ ಪುಟ ಬಲು ರೋಚಕ!

Public TV
2 Min Read
PUTA 109 DAYAL PADMANABHAN

ಬೆಂಗಳೂರು: ಆ ಕರಾಳ ರಾತ್ರಿ ಚಿತ್ರದ ಮೂಲಕ ಭಿನ್ನ ಪ್ರಯೋಗದ ಮೂಲಕವೇ ಗೆದ್ದಿದ್ದವರು ದಯಾಳ್ ಪದ್ಮನಾಭನ್. ಅವರ ಮತ್ತೊಂದು ಚಿತ್ರ ಪುಟ 109 ಇದೀಗ ಬಿಡುಗಡೆಯಾಗಿದೆ. ಒಂದು ಕೊಲೆ ಸುಪಾರಿ, ಅದರ ಬಗೆಗಿನ ರೋಚಕ ತನಿಖೆ ಮತ್ತು ಅದರ ಸುತ್ತ ಹರಡಿಕೊಂಡಿರೋ ಮನುಷ್ಯ ಸಂಬಂಧಗಳ ತಾಕಲಾಟ… ಇವಿಷ್ಟು ಅಂಶಗಳೊಂದಿಗೆ ಕಡೇ ತನಕ ಪ್ರೇಕ್ಷಕರು ಕೌತುಕದಿಂದ ಕುದಿಯುವಂತೆ ಮಾಡೋ ಮೂಲಕ ಈ ಚಿತ್ರವೂ ನೋಡುಗರ ಮನಗೆದ್ದಿದೆ.

ದೃಶ್ಯಗಳ ಜೊತೆಗೆ ನೋಡುಗರ ಮನಸನ್ನೂ ಒಂದು ಕೇಂದ್ರದಲ್ಲಿ ಕಟ್ಟಿ ನಿಲ್ಲಿಸುವ ಕಲೆ ದಯಾಳ್ ಗೆ ಸಿದ್ಧಿಸಿದೆ. ಅದು ಪುಟ 109ರ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಗೃಹಿಣಿಯೊಬ್ಬಳ ಕೊಲೆಗೆ ಕೊಡಲಾಗೋ ಸುಪಾರಿ, ಈ ಬಗ್ಗೆ ತನಿಖೆಗೆ ಪ್ರವೇಶಿಸುವ ಪೊಲೀಸ್ ಅಧಿಕಾರಿ ಮತ್ತು ಆ ಗೃಹಿಣಿಯ ಗಂಡ ಮತ್ತು ಪೊಲೀಸ್ ಅಧಿಕಾರಿಯ ನಡುವಿನ ತನಿಖೆಯ ಹಾದಿಯ ಮಾತಿನ ಜುಗಲ್ಬಂದಿ… ಬರೀ ಮಾತೇ ಆಗಿದ್ದರೆ ದಯಾಳ್ ತೆರೆದ ಪುಟ ಇಷ್ಟೊಂದು ರೋಚಕವಾಗಿರುತ್ತಿರಲಿಲ್ಲ. ಅಲ್ಲಿ ಮಾತಿನ ನಡುವೆ ಮೌನವೂ ಮಾತಾಗುತ್ತೆ. ಸಂಬಂಧಗಳ ಸಂಕೀರ್ಣ ಪದರಗಳು ಬಿಚ್ಚಿಕೊಳ್ಳುತ್ತಾ ಸಾಗುತ್ತವೆ.

safe image

ಹೊರ ಜಗತ್ತಿನ ಪಾಲಿಗೆ ಅದೊಂದು ಸುಂದರ ಸಂಸಾರ. ಬರಹಗಾರ ಗಂಡ ಮತ್ತು ಸೌಂದರ್ಯವತಿ ಹೆಂಡತಿ. ಇಂಥಾ ಗೃಹಿಣಿಯ ಕೊಲೆಗೆ ಅದ್ಯಾರೋ ಸುಪಾರಿ ಕೊಡೋ ಮೂಲಕ ಪೊಲೀಸ್ ಅಧಿಕಾರಿಯ ಪ್ರವೇಶವಾಗುತ್ತೆ. ಈ ಗಂಡ ಹೆಂಡತಿ ಪಾತ್ರಗಳಲ್ಲಿ ವೈಷ್ಣವಿ ಮೆನನ್ ಮತ್ತು ನವೀನ್ ಕೃಷ್ಣ ಅಭಿನಯಿಸಿದ್ದರೆ, ಜೆಕೆ ಪೊಲೀಸ್ ಅಧಿಕಾರಿಯಾಗಿ ತಣ್ಣಗೆ ಅಬ್ಬರಿಸಿದ್ದಾರೆ. ಅಲ್ಲಿಂದಾಚೆಗೆ ನವೀನ್ ಕೃಷ್ಣ ಮತ್ತು ಜೆಕೆ ಪಾತ್ರಗಳ ಮಾತಿನ ವರಸೆ ಶುರುವಾಗುತ್ತೆ. ಮೊದಲಾರ್ಧ ಇದರಲ್ಲಿ ಸಾಗಿ ಬಂದು ದ್ವಿತೀಯಾರ್ಧದಲ್ಲಿ ಸಾಂಸಾರಿಕ ವಾತಾವರಣ ತೇಲಿ ಬಂದು ಮತ್ತೆ ತನಿಖೆಯ ಹಾದಿಗೆ ಮರಳುತ್ತೆ. ಆದರೆ ಒಟ್ಟಾರೆ ಕಥೆಯ ಹಿಡಿತ ಎಲ್ಲಿಯೂ ಲಯ ಕಳೆದುಕೊಳ್ಳೋದಿಲ್ಲ. ಕುತೂಹಲವೂ ಬಿಗಿ ಕಳೆದುಕೊಳ್ಳೋದಿಲ್ಲ.

ಇದು ಸರಳವಾಗಿ ಕಂಡರೂ ಇಡೀ ಚಿತ್ರವನ್ನು ಪ್ರತೀ ಕ್ಷಣವೂ ಕುತೂಹಲದಿಂದ ನೋಡುವಂತೆ ದಯಾಳ್ ಕಟ್ಟಿ ಕೊಟ್ಟಿದ್ದಾರೆ. ಜೆಕೆ, ನವೀನ್ ಕೃಷ್ಣ ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ವೈಷ್ಣವಿ ಕೂಡಾ ಇದಕ್ಕೆ ಸಾಥ್ ನೀಡಿದ್ದಾರೆ. ಇಡೀ ಚಿತ್ರವನ್ನು ಇಷ್ಟು ರೋಚಕಗೊಳಿಸುವಲ್ಲಿ ಪಿಕೆಎಚ್ ದಾಸ್ ಅವರ ಮಾಂತ್ರಿಕ ಕ್ಯಾಮೆರಾ ಕುಸುರಿ ಪ್ರಧಾನ ಪಾತ್ರ ವಹಿಸಿದೆ. ಅವರ ಕ್ಯಾಮೆರಾ ಕೈಚಳಕ ಒಂದೇ ರೂಮಿನಲ್ಲಿ ನಡೆಯೋ ಕಥೆಗೂ ಹೊಸಾ ಬಣ್ಣ ನೀಡಿದೆ. ಇದಕ್ಕೆ ಹಿನ್ನೆಲೆ ಸಂಗೀತ, ಸಂಕಲನ ಸೇರಿದಂತೆ ಎಲ್ಲ ವಿಭಾಗಗಳ ಕೆಲಸವೂ ಪೂರಕವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *