ಬೆಂಗಳೂರು: ಕಾಡು ಮತ್ತು ಅದರೊಳಗಿನ ನಿಗೂಢಗಳ ಕಥೆ ಈ ವರೆಗೂ ಅನೇಕ ಸಿನಿಮಾ ರೂಪದಲ್ಲಿ ಪ್ರೇಕ್ಷಕರನ್ನು ಎದುರುಗೊಂಡಿವೆ. ಕಾಡೊಳಗೆ ಸಂಚರಿಸುವ ಕಥೆಯನ್ನೊಳಗೊಂಡಿರೋ ಸಿನಿಮಾಗಳ ಬಗ್ಗೆ ಕನ್ನಡದ ಪ್ರೇಕ್ಷಕರಲ್ಲಿ ಎಂದೂ ಬತ್ತದ ಬೆರಗುಗಳಿವೆ. ಈ ಕಾರಣದಿಂದಲೇ ಆಗಾಗ ಅಂಥಾ ಸಿನಿಮಾಗಳು ಅಣಿಗೊಂಡರೆ ಎಲ್ಲರೂ ಅದರತ್ತ ಆಕರ್ಷಿತರಾಗುತ್ತಾರೆ. ಇಂಥಾ ಕಾಡಿನ ರಹಸ್ಯಗಳ ಜೊತೆಗೆ ಮನುಷ್ಯನ ಮಾನಸಿಕ ತಲ್ಲಣಗಳೂ ಸೇರಿದ ಕಥೆಯೊಂದಿಗೆ ತೆರೆಗಾಣಲು ರೆಡಿಯಾಗಿರೋ ಚಿತ್ರ ಮನರೂಪ. ಕಿರಣ್ ಹೆಗ್ಡೆ ನಿರ್ದೇಶನದ ಈ ಸಿನಿಮಾ ಇದೇ ತಿಂಗಳ 22ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ.
Advertisement
ಪತ್ರಿಕೋದ್ಯಮ ಮತ್ತು ಸಾಹಿತ್ಯದತ್ತ ಅಪಾರ ಆಸಕ್ತಿ ಹೊಂದಿರುವ, ಆ ಮೂಲಕವೇ ಸೂಕ್ಷ್ಮವಾದ ಮನಸ್ಥಿತಿಯನ್ನು ತಮ್ಮದಾಗಿಸಿಕೊಂಡಿರುವವರು ನಿರ್ದೇಶಕ ಕಿರಣ್ ಹೆಗ್ಡೆ. ಸಾಹಿತ್ಯಾಸಕ್ತಿ ಮತ್ತು ತಾವು ಹುಟ್ಟಿ ಬೆಳೆದ ಶಿರಸಿ ಭಾಗದ ವಾತಾವರಣದಿಂದಲೇ ಅವರಿಗೆ ಸೂಕ್ಷ್ಮವಂತಿಕೆಯ ಮನಸ್ಥಿತಿ ಸಿದ್ಧಿಸಿದೆ. ಬಹುಶಃ ಸಾಹಿತ್ಯದ ಸಂಗವಿರದೆ ಮನರೂಪದಂಥಾ ಕಥೆಗಳು ರೂಪುಗೊಳ್ಳಲು ಸಾಧ್ಯವೇ ಇಲ್ಲವೇನೋ… ಈ ಸಿನಿಮಾ ಹೊಸತನ ದ ಕಥೆಯನ್ನೊಳಗೊಂಡಿದೆ ಅನ್ನೋ ಸುಳಿವು ಈ ಹಿಂದೆ ಪೋಸ್ಟರ್ ಗಳ ಮೂಲಕವೇ ಸಿಕ್ಕಿ ಹೋಗಿತ್ತು. ಇದೀಗ ಮನರೂಪ ಬಿಡುಗಡೆಯ ಹೊಸ್ತಿಲಲ್ಲಿರುವ ಘಳಿಗೆಯಲ್ಲಿ ನಿರ್ದೇಶಕರು ಮತ್ತೂ ಇಂಟರೆಸ್ಟಿಂಗ್ ಆದ ಒಂದಷ್ಟು ವಿವರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದುವೇ ಈ ಸಿನಿಮಾದತ್ತ ಪ್ರೇಕ್ಷಕರಲ್ಲಿರೋ ಕುತೂಹಲವನ್ನು ಮತ್ತಷ್ಟು ತೀವ್ರಗೊಳಿಸುವಂತಿವೆ.
Advertisement
Advertisement
ಇಲ್ಲಿನ ಇಡೀ ಕಥೆ ಕಾಡಿನ ಬ್ಯಾಕ್‍ಡ್ರಾಪ್‍ನಲ್ಲಿ ಕಳೆಗಟ್ಟಿಕೊಳ್ಳುವಂತೆ ಕಿರಣ್ ಹೆಗ್ಡೆ ನೋಡಿಕೊಂಡಿದ್ದಾರೆ. ಕಾಡೊಳಗಿನ ನಿಶ್ಯಬ್ಧ ಮೋಹಕವೂ ಹೌದು, ಭಯಾನಕವೂ ಹೌದು. ಅಂಥಾ ವಾತಾವರಣಕ್ಕೆ ಎಂಭತ್ತರ ದಶಕದಿಂದ ಎರಡು ಸಾವಿರನೇ ಇಸವಿಯ ವರೆಗಿನ ಜನರೇಷನ್ನಿನ ಮನೋಲೋಕವನ್ನು ಸಮ್ಮಿಳಿತಗೊಳಿಸಿ ಕಿರಣ್ ಹೆಗ್ಡೆ ಈ ಕಥೆಯನ್ನು ರೂಪಿಸಿದ್ದಾರಂತೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್‍ನಲ್ಲಿ ಇಡೀ ಸಿನಿಮಾ ಅದೆಷ್ಟು ಕುತೂಹಲಕರವಾಗಿ ಮೂಡಿ ಬಂದಿದೆ ಎಂಬುದು ಸ್ಪಷ್ಟವಾಗಿಯೇ ಗೊತ್ತಾಗಿದೆ. ಸದರಿ ಟ್ರೇಲರ್ ನಲ್ಲಿನ ತೀವ್ರತೆಯೇ ಸಿನಿಮಾದುದ್ದಕ್ಕೂ ಪ್ರೇಕ್ಷಕರನ್ನು ಥ್ರಿಲ್ ಆಗಿಸಲಿದೆಯಂತೆ.
Advertisement
ಹತ್ತು ವರ್ಷಗಳ ನಂತರ ಮುಖಾಮುಖಿಯಾಗಿ ಖುಷಿಗೊಳ್ಳುವ ಸ್ನೇಹಿತರ ದಂಡೊಂದು ಕರಡಿ ಗುಹೆಯೆಂಬ ಪ್ರದೇಶಕ್ಕೆ ಚಾರಣ ಹೊರಡುತ್ತೆ. ಆ ಹಾದಿಯಲ್ಲಿ ಎದುರಾಗುವ ವಿಕ್ಷಿಪ್ತ ಮತ್ತು ಭಯಾನಕ ಸನ್ನಿವೇಶಿಗಳಿಗೆ ಅವರೆಲ್ಲ ಹೇಗೆ ಸ್ಪಂದಿಸುತ್ತಾರೆ, ಅವರ ಮಾನಸಿಕ ಸ್ಥಿತಿಗತಿಗಳು ಹೇಗೆಲ್ಲ ರೂಪಾಂತರಗೊಳ್ಳುತ್ತವೆ ಎಂಬುದರ ಸುತ್ತ ಕಥೆ ಚಲಿಸುತ್ತೆ. ಹಾಗಂತ ಇದನ್ನು ಬೇರೆ ಜಾಡಿನ ಸಿನಿಮಾ ಅಂದುಕೊಳ್ಳಬೇಕಿಲ್ಲ. ಅದೆಷ್ಟೋ ವರ್ಷಗಳಿಂದ ಸಿನಿಮಾ ವ್ಯಾಮೋಹ ಹೊಂದಿರುವ ಕಿರಣ್ ಹೆಗ್ಡೆ ಕಮರ್ಶಿಯಲ್ ಹಾದಿಯಲ್ಲಿಯೇ ಈ ದೃಷ್ಯಗಳನ್ನು ಕಟ್ಟಿ ಕೊಟ್ಟಿದ್ದಾರಂತೆ. ಅಂತೂ ಕಾಡುತ್ತಲಾ ಬೆಚ್ಚಿ ಬೀಳಿಸಲಿರೋ ಮನರೂಪ ಇದೇ 22ರಂದು ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ.