ಈಗ ಎಲ್ಲೆಡೆಯೂ ಅವನೇ ಶ್ರೀಮನ್ನಾರಾಯಣ ಚಿತ್ರದ ಹವಾ ಹಬ್ಬಿಕೊಂಡಿದೆ. ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ನಂತರದಲ್ಲಿ ನಟಿಸಿರುವ ಏಕೈಕ ಸಿನಿಮಾವಿದು. ಅಖಂಡ ಎರಡು ವರ್ಷಗಳ ಪರಿಶ್ರಮ, ಒಂದಿಡೀ ತಂಡದ ಅಹೋಕಾಲದ ಸಮರ್ಪಣಾ ಮನೋಭಾವದಿಂದಲೇ ರೂಪುಗೊಂಡಿರೋ ಈ ಸಿನಿಮಾ ಇದೇ ತಿಂಗಳ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದೀಗ ಈ ಚಿತ್ರದ ಆನ್‍ಲೈನ್ ಬುಕ್ಕಿಂಗ್ ಭರಾಟೆ ತೀವ್ರಗೊಂಡಿದೆ. ಹತ್ತು ದಿನ ಮೊದಲೇ ಆರಂಭವಾಗಿರೋ ಆನ್‍ಲೈನ್ ಟಿಕೆಟ್ ಬುಕ್ಕಿಂಗ್ ನಡೆಯುತ್ತಿರೋ ತೀವ್ರತೆಯೇ ಶ್ರೀಮನ್ನಾರಾಯಣನ ಗೆಲುವನ್ನೂ ಪ್ರತಿಫಲಿಸುವಂತಿರೋದು ಸುಳ್ಳಲ್ಲ.
ಬೆಂಗಳೂರಿನ ಪ್ರಸಿದ್ಧ ಚಿತ್ರಮಂದಿರಗಳಲ್ಲೊಂದಾಗಿರುವ ಊರ್ವಶಿ ಮುಂತಾದ ಥಿಯೇಟರ್ ಗಳಲ್ಲಿ ಈ ಚಿತ್ರದ ಆನ್‍ಲೈನ್ ಬುಕ್ಕಿಂಗ್‍ಗೆ ಚಾಲನೆ ಸಿಕ್ಕಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾದ ಟಿಕೆಟುಗಳನ್ನು ಕಾಯ್ದಿರಿಸೋ ಅವಕಾಶವನ್ನು ಈ ಮೂಲಕ ಕಲ್ಪಿಸಲಾಗಿದೆ. ಹೀಗೆ ಈ ಟಿಕೆಟ್ ಗಳನ್ನು ಮುಂಗಡವಾಗಿ ಪಡೆದುಕೊಳ್ಳಲು ನೂಕು ನುಗ್ಗಲು ಶುರುವಾಗಿ ಬಿಟ್ಟಿದೆ. ಬರೋಬ್ಬರಿ ಹತ್ತು ದಿನಗಳಷ್ಟು ಮುಂಚಿತವಾಗಿಯೇ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದರೂ ಸಹ ಪ್ರೇಕ್ಷಕರು ಮುಗಿ ಬೀಳಲಾರಂಭಿಸಿದ್ದಾರೆ. ಈಗಾಗಲೇ ಹೆಚ್ಚಿನ ಸೀಟುಗಳು ಕಾಯ್ದಿರಿಸಲ್ಪಟ್ಟಿವೆ.
- Advertisement -
- Advertisement -
ಈ ವರ್ಷ ಬಿಡುಗಡೆಯಾಗಿದ್ದ ಅಷ್ಟೂ ಚಿತ್ರಗಳಿಗೆ ಹೋಲಿಕೆ ಮಾಡಿದರೆ ಅವನೇ ಶ್ರೀಮನ್ನಾರಾಯಣನಿಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್‍ನಲ್ಲಿ ಸಿಗುತ್ತಿರುವ ಪ್ರತಿಕ್ರಿಯೆ ತೀರಾ ಭಿನ್ನವಾಗಿದೆ. ಅದರ ಭರಾಟೆಯೂ ಜೋರಾಗಿದೆ. ಇದಕ್ಕೆ ಕಾರಣವಾಗಿರೋದು ಈ ಸಿನಿಮಾ ಸುತ್ತ ಹಬ್ಬಿಕೊಂಡಿರುವ ಪಾಸಿಟಿವ್ ಟಾಕ್ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರೇಲರ್ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ಶ್ರೀಮನ್ನಾರಾಯಣನ ಕ್ರೇಜ್ ಮೂಡಿಕೊಳ್ಳುವಂತೆ ಮಾಡಿ ಬಿಟ್ಟಿದೆ. ಅಲ್ಲಿ ಕಾಣಿಸಿರೋ ದೃಶ್ಯಾವಳಿಗಳು ಮತ್ತು ಭಿನ್ನ ಕಥೆಯ ಸುಳಿವುಗಳೇ ಪ್ರೇಕ್ಷಕರೆಲ್ಲ ಈ ಸಿನಿಮಾದತ್ತ ಆಕರ್ಷಿತರಾಗುವಂತೆ ಮಾಡಿ ಬಿಟ್ಟಿದೆ.
- Advertisement -
- Advertisement -
ರಕ್ಷಿತ್ ಶೆಟ್ಟಿ ಪಾಲಿಗೆ ಇದು ಅತ್ಯಂತ ಮಹತ್ವದ ಸಿನಿಮಾ. ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡಾ ಭಾರೀ ಬಜೆಟ್ಟಿನಲ್ಲಿ ಅವನೇ ಶ್ರೀಮನ್ನಾರಾಯಣನನ್ನು ರೂಪಿಸಿದ್ದಾರೆ. ರಕ್ಷಿತ್ ಇಲ್ಲಿ ಪೊಲೀಸ್ ಅಧಿಕಾರಿಯಾಗಿ ಇದೇ ಮೊದಲ ಬಾರಿ ಕಾಣಿಸಿಕೊಂಡಿದ್ದಾರೆ. ಶಾನ್ವಿ ಶ್ರೀವಾತ್ಸವ್ ಕೂಡಾ ಅಷ್ಟೇ ಭಿನ್ನವಾದ ಪಾತ್ರದಲ್ಲಿ ನಾಯಕಿಯಾಗಿ ರಕ್ಷಿತ್‍ಗೆ ಸಾಥ್ ಕೊಟ್ಟಿದ್ದಾರೆ. ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್, ಅಚ್ಯುತ್ ಕುಮಾರ್ ಮೊದಲಾದವರ ತಾರಾಗಣ ಈ ಚಿತ್ರದಲ್ಲಿದೆ. ಅವನೇ ಶ್ರೀಮನ್ನಾರಾಯಣ ಇದೇ ತಿಂಗಳ 27ರಂದು ಅದ್ದೂರಿಯಾಗಿ ತೆರೆಗಾಣಲಿದ್ದಾನೆ.
ಇದೀಗ ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರಮೋಷನ್ ಭರಾಟೆ ಕೂಡಾ ಜೋರಾಗಿಯೇ ನಡೆಯುತ್ತಿದೆ. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಇದನ್ನೂ ಕೂಡಾ ಭಿನ್ನವಾಗಿರುವಂತೆಯೇ ನೋಡಿಕೊಂಡಿದ್ದಾರೆ. ಈ ಚಿತ್ರ ಪ್ರಮೋಷನ್ ವೈಖರಿ ಕೂಡಾ ಭಿನ್ನವಾಗಿದೆ. ಅದರಲ್ಲಿ ಇತ್ತೀಚೆಇಗೆ ಕಾಣಿಸಿಕೊಳ್ಳುತ್ತಿರೋ ಪ್ರಮೋಷನ್ ಐಡಿಯಾಗಳಿಗೆ ಜನ ಸಾಮಾನ್ಯರೂ ಫಿದಾ ಆಗುತ್ತಿದ್ದಾರೆ. ಲಿಫ್ಟುಗಳ ಬಾಗಿಲು ಓಪನ್ ಆದೇಟಿಗೆ ಅಚಾನಕ್ಕಾಗಿ ಶ್ರೀಮನ್ನಾರಾಯಣ ಪೋಸ್ಟರ್ ಮೂಲಕವೂ ಇದೀಗ ದರ್ಶನ ನೀಡಲಾರಂಭಿಸಿದ್ದಾನೆ. ಇದೂ ಸೇರಿದಂತೆ ಪ್ರಚಾರದ ವಿಚಾರದಲ್ಲಿ ಭಿನ್ನವಾದ ಪ್ರಯತ್ನಗಳನ್ನು ಚಿತ್ರ ತಂಡ ಮಾಡುತ್ತಿದೆ. ಎಲ್ಲೆಂದರಲ್ಲಿ ಈ ಮೂಲಕ ಶ್ರೀಮನ್ನಾರಾಯಣ ಕಾಣಿಸಿಕೊಂಡು ಪ್ರೇಕ್ಷಕರ ಮನಸಲ್ಲಿ ಸರಿಯಾಗಿಯೇ ರಿಜಿಸ್ಟರ್ ಆಗಲಾರಂಭಿಸಿದ್ದಾನೆ.