ಬೆಂಗಳೂರು: ಹಿರಿಯ ಕನ್ನಡ ಚಿತ್ರನಟ, ಕಲಾ ತಪಸ್ವಿ ರಾಜೇಶ್ ಅವರ ನಿಧನಕ್ಕೆ ಅಬಕಾರಿ ಸಚಿವ ಕೆ ಗೋಪಾಲಯ್ಯ ಕಂಬನಿ ಮಿಡಿದಿದ್ದಾರೆ.
ವರನಟ ಡಾ. ರಾಜ್ ಕುಮಾರ್ ಸಮಕಾಲೀನರಾದ ರಾಜೇಶ್ ಕನ್ನಡ ಚಿತ್ರಗಳಲ್ಲಿ ನಾಯಕನಟರಾಗಿ, ಪೋಷಕನಟರಾಗಿ ಕನ್ನಡಿಗರ ಮನದಲ್ಲಿ ನೆಲೆಸಿದ್ದರು. ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ನಷ್ಟವನ್ನುಂಟು ಮಾಡಿದೆ ಎಂದು ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕಲಾ ತಪಸ್ವಿ ರಾಜೇಶ್ ವಿಧಿವಶ
ಕಲಾತಪಸ್ವಿ ರಾಜೇಶ್ ಎಂಬುದು ಅವರ ಆತ್ಮಚರಿತ್ರೆಯ ಹೆಸರು. ತಮಿಳು ಚಿತ್ರರಂಗದಿಂದ ಅಂದಿನ ದಿನಗಳಲ್ಲಿ ಅವಕಾಶ ಬಂದಿದ್ದರೂ ಕನ್ನಡದ ನೆಲದಲ್ಲೇ ಏನನ್ನಾದರೂ ಸಾಧಿಸಬೇಕೆಂಬ ಪ್ರಬಲ ಕನಸು ಹೊಂದಿದ್ದ ರಾಜೇಶ್ ಅಂತಹ ಅವಕಾಶಗಳನ್ನು ನಯವಾಗಿ ನಿರಾಕರಿಸುವ ಮೂಲಕ ಕನ್ನಡದ ಮೇಲಿರುವ ತಮ್ಮ ಅಭಿಮಾನವನ್ನು ತೋರಿಸಿದ್ದರು.
ಸೊಸೆ ತಂದ ಸೌಭಾಗ್ಯ, ನಮ್ಮ ಊರು, ಗಂಗೆ ಗೌರಿ, ಬೆಳುವಲದ ಮಡಿಲಲ್ಲಿ, ಕಪ್ಪು ಬಿಳುಪು, ಬೃಂದಾವನ, ಬೋರೆ ಗೌಡ ಬೆಂಗಳೂರಿಗೆ ಬಂದ, ಮರೆಯದ ದೀಪಾವಳಿ, ಪ್ರತಿಧ್ವನಿ, ಕಾವೇರಿ, ದೇವರ ಗುಡಿ, ಬದುಕು ಬಂಗಾರವಾಯ್ತು, ಮುಗಿಯದ ಕಥೆ, ಬಿಡುಗಡೆ, ದೇವರದುಡ್ಡು, ಕಲಿಯುಗ, ಪಿತಾಮಹ ಸೇರಿದಂತೆ 150 ಕ್ಕೂ ಅಧಿಕ ಚಿತ್ರಗಳಲ್ಲಿ ರಾಜೇಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರ ಪ್ರೇಮಿಗಳ ಮನ ಗೆದ್ದಿದ್ದರು. ಇದನ್ನೂ ಓದಿ: ರಂಗಭೂಮಿಯಲ್ಲಿ ‘ವಿದ್ಯಾಸಾಗರ್’ ಎಂದು ಗುರುತಿಸಿಕೊಂಡಿದ್ದರು ನಟ ರಾಜೇಶ್
ಅವರ ನಿಧನದಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ನಾಡಿನ ಸಮಸ್ತರಿಗೆ ದೇವರು ಕರುಣಿಸಲಿ ಎಂದು ಸಚಿವರು ತಮ್ಮ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.