ಕಾರವಾರ: ಚಾಮರಾಜನಗರ ಅರಣ್ಯದಲ್ಲಿ ನಡೆದ ಹುಲಿ ಹತ್ಯೆ ಪ್ರಕರಣದ ಬೆನ್ನಲ್ಲೇ ರಾಜ್ಯಾದ್ಯಂತ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಹುಲಿಗಳ ರಕ್ಷಣೆ ಹಾಗೂ ಅರಣ್ಯ ಅಪರಾಧಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಶ್ವಾನದಳವನ್ನು ಉನ್ನತೀಕರಿಸಲಾಗಿದೆ.
ಈಗಾಗಲೇ ಕಾಳಿ ಹುಲಿ ರಕ್ಷಿತಾರಣ್ಯದ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ವಾನ ‘ಕ್ವೀಪರ್’ ಜೊತೆಗೆ, ಹೊಸದಾಗಿ ಬೆಲ್ಜಿಯಂ ಷಫರ್ಡ್ ತಳಿಯ ಅವನಿ ಮತ್ತು ತಾರ ಎಂಬ ಎರಡು ಶ್ವಾನಗಳು ಶ್ವಾನದಳಕ್ಕೆ ಸೇರ್ಪಡೆಯಾಗಿದ್ದು, ಈ ಮೂಲಕ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಮೂರು ಶ್ವಾನಗಳ ಕಣ್ಗಾವಲು ವ್ಯವಸ್ಥೆ ಕಾರ್ಯನಿರ್ವಹಿಸಲಿದೆ.
ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ 2016ರಿಂದ ಕಾರ್ಯನಿರ್ವಹಿಸುತ್ತಿರುವ ಶ್ವಾನದಳ ಕೇವಲ ಒಂದೇ ಶ್ವಾನದೊಂದಿಗೆ ಆರಂಭವಾಗಿದ್ದ ಕಾಳಿ ಹುಲಿ ರಕ್ಷಿತಾರಣ್ಯದ ಶ್ವಾನದಳ, ಇದುವರೆಗೂ ಅರಣ್ಯ ಅಪರಾಧ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಶ್ವಾನ ಕ್ವೀಪರ್ ಈವರೆಗೆ 120ಕ್ಕೂ ಹೆಚ್ಚು ಅರಣ್ಯ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಿದ ಕೀರ್ತಿ ಹೊಂದಿದೆ. ಇದೀಗ 11 ವರ್ಷ ಪ್ರಾಯದ ಕ್ವೀಪರ್ ನಿವೃತ್ತಿಯ ಹಂತಕ್ಕೆ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲೇ ಹೊಸ ಶ್ವಾನಗಳ ಸೇರ್ಪಡೆ ಮೂಲಕ ಶ್ವಾನದಳಕ್ಕೆ ಮತ್ತಷ್ಟು ಬಲ ನೀಡಲಾಗಿದೆ.
14 ವಿಧದ ಅರಣ್ಯ ಅಪರಾಧ ಪತ್ತೆ ಕಾರ್ಯ ಮಾಡುವ ಶ್ವಾನಗಳು
ಕಾಳಿ ಹುಲಿ ರಕ್ಷಿತಾರಣ್ಯ (KTR)ಗೆ ಸೇರ್ಪಡೆಗೊಂಡ ಅವನಿ ಮತ್ತು ತಾರ ಶ್ವಾನಗಳು ಬಂಡೀಪುರದಲ್ಲಿರುವ ಅರಣ್ಯ ಇಲಾಖೆಯ ಡಾಗ್ ಸ್ಕ್ವಾಡ್‌ನಲ್ಲಿನ ತರಬೇತಿ ಕೇಂದ್ರದಲ್ಲಿ 2024ರ ಡಿಸೆಂಬರ್ ತಿಂಗಳಿಂದ ವಿಶೇಷ ತರಬೇತಿ ಪಡೆದಿವೆ.
‘ಐದು ಹುಲಿ ಇರುವ ಪ್ರದೇಶಕ್ಕೆ ಒಂದು ಶ್ವಾನ’ ಎಂಬ ಗುರಿಯೊಂದಿಗೆ ಅರಣ್ಯ ಇಲಾಖೆಯದ ಶ್ವಾನಗಳಿಗೆ ತರಬೇತಿ ನೀಡಲಾಗಿದೆ. ಈ ಹಿಂದೆ ಶ್ವಾನತರಬೇತಿಗೆ ಅರಣ್ಯ ಇಲಾಖೆ ಹೊರಗಿನ ತರಬೇತಿ ಕೇಂದ್ರವನ್ನು ಅವಲಂಭಿಸಬೇಕಾಗಿದ್ದು, ಇದೀಗ ಬಂಡಿಪುರದಲ್ಲಿ ಅರಣ್ಯ ಇಲಾಖೆಯ ಶ್ವಾನ ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಬಂಡೀಪುರದಲ್ಲಿ ಅರಣ್ಯ ಇಲಾಖೆಯೇ ತರಬೇತಿ ನೀಡಿದ ಮೊದಲ ಬ್ಯಾಚ್‌ನ ಶ್ವಾನಗಳು ಇದಾಗಿದ್ದು, ಒಂದೂವರರೆ ವರ್ಷದ ವಯಸ್ಸಿನದ್ದಾಗಿದೆ.
ಈ ಶ್ವಾನಗಳು, ಕಳ್ಳಬೇಟೆ, ಮರ ಕಳ್ಳ ಸಾಗಣೆ, ಶಸ್ತ್ರಾಸ್ತ್ರ ಪತ್ತೆ, ಮಾದಕ ಪದಾರ್ಥ ಪತ್ತೆಕಾರ್ಯ ಸೇರಿದಂತೆ ಒಟ್ಟು 14 ವಿವಿಧ ಅರಣ್ಯ ಅಪರಾಧ ಕೃತ್ಯಗಳನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿವೆ. ಹೊಸದಾಗಿ ಸೇರ್ಪಡೆಗೊಂಡ ಅವನಿ ಮತ್ತು ತಾರ ಶ್ವಾನಗಳನ್ನು ದಾಂಡೇಲಿ ಅರಣ್ಯ ವಲಯದ ಎಸಿಎಫ್ ಎಂ.ಎಸ್.ಕರಳೀಮಠ್ ಮಾರ್ಗದರ್ಶನದಲ್ಲಿ ಡಿಆರ್‌ಎಫ್‌ಓ ವೆಂಕಟೇಶ್ ಅಮೀಲ್ ಸಾಬ್ ಹಾಗೂ ಅರಣ್ಯ ಸಿಬ್ಬಂದಿ ದೊಂಡು ಮತ್ತು ಬೊಮ್ಮ ಕೇರ್‌ಟೇಕರ್‌ಗಳಾಗಿ ನೋಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅರಣ್ಯ ಇಲಾಖೆಯ ಕ್ಯಾಮೆರಾಗಳನ್ನು ಕದ್ದ ಪ್ರಕರಣದಲ್ಲೂ ಈ ಹೊಸ ಶ್ವಾನಗಳು ಪ್ರಮುಖ ಸುಳಿವು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿವೆ.
ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಹೆಚ್ಚುತ್ತಿರುವ ಅರಣ್ಯ ಅಪರಾಧಗಳು ಹಾಗೂ ಮಾನವ–ವನ್ಯಜೀವಿ ಸಂಘರ್ಷದ ನಡುವೆಯೂ, ಶ್ವಾನದಳದ ಬಲವರ್ಧನೆ ಅರಣ್ಯ ಇಲಾಖೆಗೆ ಹೊಸ ಶಕ್ತಿಯಾಗಿ ಪರಿಣಮಿಸಿದೆ. ಅವನಿ ಮತ್ತು ತಾರ ಶ್ವಾನಗಳ ಸೇರ್ಪಡೆ, ಅರಣ್ಯ ಅಪರಾಧಿಗಳ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ.


