ಕಲಬುರಗಿ: ಹೆಡ್‍ಕಾನ್ಸ್ಟೇಬಲ್ (Head Constable) ಮೇಲೆ ಟ್ರ್ಯಾಕ್ಟರ್ (Tractor) ಹರಿಸಿ ಕೊಲೆ ಮಾಡಿದ್ದ ಮರಳು ದಂಧೆಕೋರನನ್ನು (Sand Mafia) ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಆತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರೋಪಿಯನ್ನು ಸಾಯಿಬಣ್ಣ ಎಂದು ಗುರುತಿಸಲಾಗಿದೆ. ಟ್ರ್ಯಾಕ್ಟರ್ ಚಾಲಕ ಸಿದ್ದಣ್ಣ ಮತ್ತು ಸಾಯಿಬಣ್ಣ ಇಬ್ಬರು ಸಹೋದರರು. ಆರೋಪಿ ಸಿದ್ದಣ್ಣನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪಾತ್ರೆ ತೊಳೆದ ನೀರು ಪಕ್ಕದ ಮನೆಯತ್ತ ಹರಿದಿದ್ದಕ್ಕೆ ಜಗಳ- ಯುವಕನ ಕೊಲೆ
Advertisement
ಸಾಯಿಬಣ್ಣ ವಿಜಯಪುರ (Vijayapur) ಜಿಲ್ಲೆಯ ಆಲಮೇಲ ಪಟ್ಟಣದ ಹೊರವಲಯದ ಜಮೀನಿನಲ್ಲಿ ಅಡಗಿ ಕುಳಿತ್ತಿದ್ದ. ಆತನನ್ನು ಬಂಧಿಸಿ ಕಲಬುರಗಿಗೆ ಕರೆತರುವಾಗ, ಜೇರಟಗಿ ಗ್ರಾಮದ ಮಧ್ಯೆ ಮೂತ್ರ ವಿಸರ್ಜನೆಗೆ ಎಂದು ವಾಹನ ನಿಲ್ಲಿಸಲು ಮನವಿ ಮಾಡಿದ್ದಾನೆ. ಈ ವೇಳೆ ಲುಂಗಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಬಟನ್ ಚಾಕುವಿನಿಂದ ಯಡ್ರಾಮಿ ಠಾಣೆ ಪಿಎಸ್‍ಐ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪಿಎಸ್‍ಐ ಬಸವರಾಜ್ ಆತ್ಮರಕ್ಷಣೆಗಾಗಿ ಆರೋಪಿ ಸಾಯಿಬಣ್ಣ ಕಾಲಿಗೆ ಎರಡು ಸುತ್ತು ಫೈರಿಂಗ್ ಮಾಡಿ ಬಂಧಿಸಿ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
Advertisement
ಜೂನ್ 15 ರಂದು ಕಲಬುರಗಿ (Kalaburagi) ಜಿಲ್ಲೆ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಳಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್‌ನ್ನು ತಡೆಯಲು ನೇಲೋಗಿ ಠಾಣೆ ಹೆಡ್‍ಕಾನ್ಸ್ಟೆಬಲ್ ಮೈಸೂರು ಅಲಿಯಾಸ್ ಮಯೂರ್ ಚೌವ್ಹಾಣ್ ಪ್ರಯತ್ನಿಸಿದ್ದರು. ಆದರೆ ಆರೋಪಿಗಳು ವಾಹನ ನಿಲ್ಲಿಸದೆ ಮಯೂರ್ ಮೇಲೆ ವಾಹನ ಹರಿಸಿದ್ದರು. ಬಳಿಕ ಪ್ರಮುಖ ಆರೋಪಿ ಸಾಯಿಬಣ್ಣ ತಲೆಮರೆಸಿಕೊಂಡಿದ್ದ.
Advertisement
ಆರೋಪಿ ಸಾಯಿಬಣ್ಣ ಕುಖ್ಯಾತ ರೌಡಿಶೀಟರ್ ಆಗಿದ್ದು, ಆತನ ಮೇಲೆ ನೇಲೋಗಿ ಪೊಲೀಸ್ ಠಾಣೆಯಲ್ಲಿ 2016 ರಲ್ಲೇ ರೌಡಿಶೀಟರ್ ಓಪನ್ ಮಾಡಲಾಗಿತ್ತು. ಅಲ್ಲದೇ ಸಾಯಿಬಣ್ಣನ ಮೇಲೆ ಕೊಲೆ ಯತ್ನ, ಡಕಾಯಿತಿ ಸೇರಿದಂತೆ ಎರಡು ಪ್ರಕರಣಗಳು ದಾಖಲಾಗಿದ್ದವು. ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದ ಭೀಮಾ ನದಿ ತಟದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುವುದನ್ನೆ ಕಸುಬು ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ ಆರೋಪದ ಮೇಲೆ ಜೇವರ್ಗಿ (Jevargi) ಠಾಣೆ ಸಿಪಿಐ ಭೀಮನಗೌಡ್ ಬಿರಾದರ್, ನೆಲೋಗಿ ಠಾಣೆಯ ಪಿಎಸ್‍ಐ ಗೌತಮ್ ಮತ್ತು ಕಾನ್ಸ್ಟೇಬಲ್ ರಾಜಶೇಖರ ಇವರನ್ನು ಎಸ್ಪಿ ಇಶಾ ಪಂತ್ ಅಮಾನತ್ತು ಮಾಡಿದ್ದಾರೆ. ಇದನ್ನೂ ಓದಿ: PublicTV Explainer: ಗೃಹಜ್ಯೋತಿ ಗ್ಯಾರಂಟಿ- ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ