– ಕಿಡಿಗೇಡಿಗೆ ಧರ್ಮದೇಟು
ಕಲಬುರಗಿ: ಐದು ವರ್ಷದ ಬಾಲಕಿಯನ್ನು ಪಕ್ಕದ ಕಾಂಪ್ಲೆಕ್ಸ್ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಯುವಕನೊಬ್ಬನಿಗೆ ಜನರು ಧರ್ಮದೇಟು ನೀಡಿದ ಘಟನೆ ಕಲಬುರಗಿಯ ಗೋವಾ ಹೋಟೆಲ್ ಬಳಿ ನಡೆದಿದೆ.
ಇಂದು ಬೆಳಗ್ಗೆ ಬಾಲಕಿಯನ್ನು ಕರೆದೊಯ್ದ ಯುವಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಚೀರಾಡಿದ್ದಾಳೆ. ಇದರಿಂದ ಎಚ್ಚೆತ್ತುಕೊಂಡ ಸ್ಥಳೀಯರು ತಕ್ಷಣ ಕಟ್ಟಡದೊಳಗೆ ಓಡಿ ಹೋಗಿ ಬಾಲಕಿಯನ್ನು ರಕ್ಷಿಸಿದ್ದಲ್ಲದೆ ಕಿಡಿಗೇಡಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಮನಸೋ ಇಚ್ಛೆ ಥಳಿಸಿದ್ದಾರೆ.
ನಂತರ ಬ್ರಹ್ಮಪುರ ಪೊಲೀಸ್ ಠಾಣೆಗೆ ಕರೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕಾಮುಕ ಕಲಬುರಗಿಯ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಬಂದ ಭಕ್ತರ ಮಗಳನ್ನು ಕಿಡ್ನಾಪ್ ಮಾಡಿ ಅತ್ಯಾಚಾರಕ್ಕೆ ಯತ್ನಿಸಿರುವುದಾಗಿ ಪೊಲೀಸ್ ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ.
ಅಪ್ರಾಪ್ತ ಬಾಲಕಿಯನ್ನು ಹುಡುಕಿಕೊಂಡು ಬಂದ ಪೋಷಕರು ತಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದು, ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ನೀಡಿಲ್ಲ.