ಕಲಬುರಗಿ: ಮಗಳ ಸೀಮಂತಕ್ಕೆ ಬರುವುದಕ್ಕಾಗಿ ರಜೆ ಪಡೆದು, ಇಂದು ಸಂಜೆ ಪ್ರಯಾಣ ಬೆಳೆಸಬೇಕಿದ್ದ ಜಿಲ್ಲೆಯ ಯೋಧರೊಬ್ಬರು ನಕ್ಸಲರು ಅಟ್ಟಹಾಸಕ್ಕೆ ಹುತಾತ್ಮರಾಗಿದ್ದಾರೆ.
ಸಿಆರ್‌ಪಿಎಫ್‌ನ ಮಹಾದೇವ ಪೊಲೀಸ್ ಪಾಟೀಲ್ (50) ಹುತಾತ್ಮ ಯೋಧ. ಮಹದೇವ ಅವರು ಕಲಬುರಗಿ ತಾಲೂಕಿನ ಮರಗುತ್ತಿ ಗ್ರಾಮದ ನಿವಾಸಿ. ಶುಕ್ರವಾರ ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯ ಕೇಶ್ಕುತಲ್ ಬಳಿ ಮಹಾದೇವ ಸೇರಿದಂತೆ, ಮೂರು ಯೋಧರು ಬೈಕ್‍ನಲ್ಲಿ ಹೊರಟಿದ್ದರು. ಈ ವೇಳೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಮೂವರು ಯೋಧರು ಹುತಾತ್ಮರಾಗಿದ್ದಾರೆ.
Advertisement
Advertisement
ಮಹಾದೇವ ಅವರು ಕಳೆದ 29 ವರ್ಷಗಳಿಂದ ಸಿಆರ್‌ಪಿಎಫ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಎಸ್‍ಐ ಆಗಿ ಸೇವೆ ಸಲ್ಲಿಸುತ್ತಿದ್ದರು. ಹೈದ್ರಾಬಾದ್ ಸಿಆರ್‌ಪಿಎಫ್ ಕೇಂದ್ರದಲ್ಲಿ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಮೂರು ತಿಂಗಳ ಹಿಂದೆಯಷ್ಟೇ ಛತ್ತೀಸ್‍ಗಢಕ್ಕೆ ವರ್ಗಾವಣೆ ಮಾಡಲಾಗಿತ್ತು.
Advertisement
ಮಹಾದೇವ ಅವರಿಗೆ ಒಟ್ಟು ಮೂರು ಜನ ಮಕ್ಕಳಿದ್ದು, ಓರ್ವ ಪುತ್ರಿಯ ವಿವಾಹವಾಗಿದೆ. ಉಳಿದ ಇಬ್ಬರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದುರಂತವೆಂದರೆ ಜುಲೈ 1 ರಂದು ಮಗಳಿಗೆ ಸೀಮಂತ ಕಾರ್ಯ ಮಾಡಲು ಸಿದ್ಧತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮಹಾದೇವ ಅವರು ಇಂದು ಸಂಜೆ ಛತ್ತೀಸ್‍ಗಢದಿಂದ ಕಲಬುರಗಿಗೆ ಬರುವುದಕ್ಕೆ ರಜೆ ಸಹ ಪಡೆದಿದ್ದರು. ಆದರೆ ವಿಧಿಯಾಟವೇ ಬೇರೆಯಾದ ಹಿನ್ನಲೆ ಮಗಳ ಸೀಮಂತ ಕಾರ್ಯಕ್ಕೆ ಬರಬೇಕಾದ ಅವರು ಹುತಾತ್ಮರಾಗಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ.
Advertisement
ಯೋಧ ಮಹಾದೇವ ಅವರ ಪತ್ನಿ ಮಲ್ಲಮ್ಮ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆಯಲ್ಲಿ ರಾತ್ರಿಯವರೆಗೆ, ಪತಿಯ ಸಾವಿನ ಸುದ್ದಿಯನ್ನು ತಿಳಿಸದೇ ಗೌಪ್ಯವಾಗಿ ಇಡಲಾಗಿತ್ತು. ಮಹಾದೇವ ಅವರು ಹುತಾತ್ಮರಾದ ಸುದ್ದಿ ತಿಳಿಯುತ್ತಿದ್ದಂತೆ ಮರಗುತ್ತಿ ಗ್ರಾಮದಲ್ಲಿ ಸಂಪೂರ್ಣ ಶೋಕದ ವಾತಾವರಣ ನಿರ್ಮಾಣವಾಗಿದೆ.