ಕಲಬುರಗಿಯಲ್ಲಿ ಮತ್ತೋರ್ವನಿಗೆ ಕೊರೊನಾ ವೈರಸ್- ದೃಢಪಡಿಸಿದ ಶ್ರೀರಾಮುಲು

Public TV
1 Min Read
B. Sriramalu Coronavirus

ಬೆಂಗಳೂರು: ಕಲಬುರಗಿಯಲ್ಲಿ ಸಾವನ್ನಪ್ಪಿದ ವೃದ್ಧನ ಕುಟುಂಬದಲ್ಲಿ ಒಬ್ಬರಿಗೆ ಕೊರೊನಾ ವೈರಸ್ ತಗುಲಿರೋದು ವರದಿಯಲ್ಲಿ ದೃಢವಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರು, ಕಲಬುರಗಿಯ 4 ಕೊರೊನಾ ಶಂಕಿತರಲ್ಲಿ 3 ವ್ಯಕ್ತಿಗಳ ವರದಿ ಈ ಮೊದಲೇ ಬಂದಿದ್ದು, ಇದೀಗ ನಾಲ್ಕನೇ ವ್ಯಕ್ತಿಯ ಕೊರಾನಾ ಪರೀಕ್ಷೆಯ ವರದಿ ಪಾಸಿಟಿವ್ ಎಂದು ಬಂದಿದೆ. ಇವರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ನಿಗಾವಹಿಸಿರುವುದರಿಂದ, ಸೋಂಕಿತರು ಆದಷ್ಟು ಬೇಗ ಗುಣಮುಖರಾಗುತ್ತಾರೆ ಎಂಬ ವಿಶ್ವಾಸವಿದೆ. ನಾಗರಿಕರು ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

ಮುಂಜಾಗ್ರತ ಕ್ರಮವಾಗಿ ಈಶಾನ್ಯ ಸಾರಿಗೆಯ 90 ಬಸ್‍ಗಳ ಸೇವೆಯನ್ನು ನಿನ್ನೆಯಿಂದಲ್ಲೆ ನಿಲ್ಲಿಸಲಾಗಿತ್ತು. ಇದಾದ ಬಳಿಕ ಇಂದು ಸಹ 100ಕ್ಕು ಹೆಚ್ಚು ಬಸ್‍ಗಳ ಸೌಲಭ್ಯವನ್ನು ಕಡಿತ ಮಾಡಲಾಗಿದೆ. ಹೀಗಾಗಿ, ಕಲಬುರಗಿಯ ಬಸ್ ನಿಲ್ದಾಣ ಬಹುತೇಕ ಸಬ್ಧವಾಗಿತ್ತು. ಪ್ರಯಾಣಿಕರಿಲ್ಲದೆ ಇಡೀ ಕಲಬುರಗಿಯ ರೈಲ್ವೇ ನಿಲ್ದಾಣವೇ ಖಾಲಿ ಖಾಲಿಯಾಗಿತ್ತು. ಬೇರೆ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಗೇ ಹೋಗುವವರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇಟ್ಟಿದೆ. ಪ್ರತಿ ಒಬ್ಬರ ಆರೋಗ್ಯ ತಪಾಸಣೆ ಮಾಡಿ, ಏನೂ ಸಮಸ್ಯೆ ಇಲ್ಲ ಅಂದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗ್ತಿದೆ. ಜೊತೆಗೆ ಇಡೀ ರೈಲು ನಿಲ್ದಾಣವನ್ನು ಫಿನಾಯಿಲ್ ನಿಂದ ಸ್ವಚ್ಛ ಮಾಡಲಾಗಿದೆ.

ಕಲಬುರಗಿ ನಗರದಲ್ಲಿ ನಿನ್ನೆಯಿಂದ ವಾಸ್ತವ್ಯ ಹೂಡಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅವರು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಸಿದರು. ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ಪಡೆದು, ಜೀಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಐಸೋಲೆಟೆಡ್ ವಾರ್ಡ್‍ಗಳನ್ನು ಪರಿಶೀಲಿಸಿದರು. ತದನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸರ್ಕಾರ ಎಲ್ಲ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಂಡಿದ್ದು, ಜನರು ಭಯಪಡಬೇಕಾಗುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *