ಹೈದರಾಬಾದ್: ಬಹುಭಾಷಾ ನಟಿ ಕಾಜಲ್ ಅಗರ್‌ವಾಲ್ ಶೀಘ್ರದಲ್ಲೇ ಉದ್ಯಮಿ ಜೊತೆ ಮದುವೆ ಆಗಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.
ಇತ್ತೀಚೆಗೆ ಕಾಜಲ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ನಿರೂಪಕಿ ಲಕ್ಷ್ಮಿ ಮಂಚು, ಕಾಜಲ್ ಅವರಿಗೆ ಮದುವೆಯಾವಾಗ ಎಂದು ಪ್ರಶ್ನಿಸಿದ್ದಾರೆ. ಆಗ ಕಾಜಲ್, ನಾನು ಶೀಘ್ರದಲ್ಲೇ ಮದುವೆಯಾಗಲು ನಿರ್ಧರಿಸಿದ್ದೇನೆ ಎಂದಿದ್ದಾರೆ. ಆದರೆ ಮದುವೆಯಾಗುವ ವ್ಯಕ್ತಿ ಯಾರೆಂಬುದನ್ನು ಕಾಜಲ್ ರಿವೀಲ್ ಮಾಡಲಿಲ್ಲ.
ಇದಾದ ಬಳಿಕ ಲಕ್ಷ್ಮಿ, ನಟಿ ಕಾಜಲ್ ಅವರಿಗೆ ತಮ್ಮ ಪತಿ ಹೇಗಿರಬೇಕೆಂದು ಪ್ರಶ್ನಿಸಿದ್ದಾರೆ. ಆಗ ಅವರು ಸಾಕಷ್ಟು ವಿಷಯಗಳಿದೆ. ಆದರೆ ಮುಖ್ಯವಾಗಿ ಅವರು ತುಂಬಾ ಕಾಳಜಿ ತೋರಿಸಬೇಕು ಹಾಗೂ ಆಧ್ಯಾತ್ಮಿಕನಾಗಿರಬೇಕು ಎಂದು ಕಾಜಲ್ ತಿಳಿಸಿದ್ದಾರೆ.
ಈ ಮೊದಲು ಬೇರೆ ಸಂದರ್ಶನದಲ್ಲಿ ಕಾಜಲ್, “ನಾನು ಚಿತ್ರರಂಗದವರನ್ನು ಮದುವೆಯಾಗುವುದಿಲ್ಲ. ಚಿತ್ರರಂಗದಲ್ಲಿ ಇರದ ವ್ಯಕ್ತಿ ಜೊತೆ ಡೇಟ್ ಮಾಡುತ್ತೇನೆ” ಎಂದು ಹೇಳಿದ್ದರು. ಸದ್ಯ ಈಗ ಕಾಜಲ್ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ವೆಬ್‌ಸೈಟ್‌ವೊಂದರ ಪ್ರಕಾರ, ಇದು ಅರೆಂಜ್ ಮ್ಯಾರೇಜ್ ಆಗಿದ್ದು, ಕಾಜಲ್ ಪೋಷಕರೇ ಹುಡುಗನನ್ನು ಹುಡುಕಿದ್ದಾರೆ ಎನ್ನಲಾಗಿದೆ. ಆದರೆ ಮದುವೆಗೆ ಸಂಬಂಧಿಸಿದಂತೆ ಕಾಜಲ್ ಅವರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಹೇಳಲಾಗುತ್ತಿದೆ.
ಸದ್ಯ ನಟ ಕಮಲ್ ಹಾಸನ್ ನಟಿಸುತ್ತಿರುವ ‘ಇಂಡಿಯನ್-2’ ಚಿತ್ರದಲ್ಲಿ ಕಾಜಲ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಶಂಕರ್ ನಿರ್ದೇಶಿಸುತ್ತಿದ್ದಾರೆ.