ದಾವಣಗೆರೆ: ಶಾಸಕ ವಿಶ್ವನಾಥ್ ತಮ್ಮ ತಲೆ ಮೇಲೆ ಮಣ್ಣು ಹಾಕಿಕೊಂಡು ಸಮಾಜದ ಹಾಗೂ ಮಠದ ಮೇಲೆ ಹಾಕುತ್ತಿರುವುದು ಸೂಕ್ತವಲ್ಲ ಎಂದು ಹರಿಹರ ತಾಲೂಕಿನ ಬೆಳ್ಳೋಡಿಯ ಕಾಗಿನೆಲೆ ಸ್ವಾಮೀಜಿ ಕಿಡಿಕಾರಿದ್ದಾರೆ.
ಶಾಸಕ ವಿಶ್ವನಾಥ್ ಹೇಳಿಕೆ ಖಂಡಿಸಿ, ಮಾಧ್ಯಮಗಳ ಜೊತೆಗೆ ಮಾತನಾಡಿದ ಶ್ರೀಗಳು, ನಮ್ಮ ಸಮಾಜದ ನಾಯಕರಾಗಿರುವ ವಿಶ್ವನಾಥ್ ಅವರು ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಈ ರೀತಿ ಹೇಳಿಕೆ ಮಾಡಿದ್ದಾರೆ. ಆದರೆ ನಾನು ಕುರುಬ ಸಮಾಜದ ಪರ ಇದ್ದೇನೆ. ಯಾರೇ ಬಂದರೂ ನಮಗಾಗುವ ಶೋಷಣೆ ವಿರುದ್ಧ ಧ್ವನಿ ಎತ್ತುವುದನ್ನು ನಿಲ್ಲಿಸುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು. ಇದನ್ನು ಓದಿ: ನನಗೆ ಅನ್ಯಾಯವಾದಾಗ ಎಲ್ಲಿ ಹೋಗಿದ್ರಿ – ಕಾಗಿನೆಲೆ ಶ್ರೀಗಳ ವಿರುದ್ಧ ವಿಶ್ವನಾಥ್ ಗರಂ
ರಾಜಕೀಯದಲ್ಲಿ ನಾನು ಮೂಗು ತೂರಿಸಿಲ್ಲ. ಆದರೆ ವಿಶ್ವನಾಥ್ ಅವರು ಈ ಹಿಂದೆ ಜೆಡಿಎಸ್ ವರಿಷ್ಠ ದೇವೇಗೌಡ ಅವರನ್ನು ಘಟ ಸರ್ಪ ಹಾಗೂ ಸಿದ್ದರಾಮಯ್ಯ ಅವನ್ನು ಕಪ್ಪೆ ಎಂದು ವ್ಯಂಗ್ಯವಾಡಿದ್ದರು. ಈಗ ಅವರಿಂದ ಅಧಿಕಾರ ಪಡೆಯಲು ಮುಂದಾಗುತ್ತಿದ್ದಾರೆ ಎಂದು ಕಾಲೆಳೆದರು.
ರಾಜಕೀಯ ವಲಯದಲ್ಲಿ ವಿಶ್ವನಾಥ್ ಅವರ ಕೆಲವು ನಡವಳಿಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೇಸರ ತಂದಿದೆ. ಆದರೂ ನಾವು ಸಿದ್ದರಾಮಯ್ಯ ಅವರನ್ನು ಒಪ್ಪಿಸಲು ಮುಂದಾಗಿದ್ದೇವು, ಪ್ರಯತ್ನ ವಿಫಲವಾಯಿತು. ಅನೇಕ ಬಾರಿ ವಿಶ್ವನಾಥ್ ಅವರು ನನ್ನ ಬಳಿ ತಮ್ಮ ನೋವು ಹಂಚಿಕೊಂಡಿದ್ದಾರೆ. ಈಗ ಅದನ್ನು ಮರೆತು ನನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಕುರುಬ ಸಮುದಾಯ ಹಾಗೂ ನನ್ನ ವಿರುದ್ಧ ಮಾತನಾಡಿದರೆ ಅವರಿಗೆ ಒಳ್ಳೆಯದು ಆಗುತ್ತದೆ ಎನ್ನುವುದಾದರೆ ನನ್ನ ಅಡ್ಡಿ ಇಲ್ಲ ಎಂದು ಟಾಂಗ್ ನೀಡಿದರು.