ಬೆಂಗಳೂರು: ಒಂದು ಸಿನಿಮಾ ಬಗ್ಗೆ ಕುತೂಹಲ ಹುಟ್ಟಿಸಿ, ಅದನ್ನು ನೋಡಲೇ ಬೇಕೆಂಬ ತುಡಿತ ಮೂಡಿಸುವಲ್ಲಿ ಟ್ರೇಲರ್ ಪಾತ್ರ ಮಹತ್ವದ್ದು. ಆದರೆ ಒಂದಿಡೀ ಸಿನಿಮಾ ಸಾರವನ್ನು ಸೆಕೆಂಡು, ನಿಮಿಷಗಳ ಬೊಗಸೆಯಲ್ಲಿ ಹಿಡಿದಿಡುವುದು ಬಲು ಕಷ್ಟದ ಕೆಲಸ. ಅದರಲ್ಲಿ ಗೆದ್ದವರು ಸಿನಿಮಾ ಮೂಲಕ ಗೆಲ್ಲುವುದೂ ನಿಶ್ಚಿತ ಎಂಬಂಥಾ ನಂಬಿಕೆ ಇದೆ. ಈ ಆಧಾರದಲ್ಲಿ ಹೇಳೋದಾದರೆ ಕಡಲ ತಡಿಯ ಭಾರ್ಗವ ಎಂಬ ಸಿನಿಮಾ ಗೆಲುವಿನ ಹಾದಿಯಲ್ಲಿದೆ. ಯಾಕೆಂದರೆ ಇದೀಗ ಲಾಂಚ್ ಆಗಿರೋ ಈ ಸಿನಿಮಾ ಟ್ರೇಲರ್ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬಂದಿದೆ.
Advertisement
ಅಷ್ಟಕ್ಕೂ ಕಡಲ ತೀರದ ಭಾರ್ಗವ ಅಂದಾಕ್ಷಣವೇ ಕನ್ನಡಿಗರೆಲ್ಲರ ಮನಸಲ್ಲಿ ಮೇರು ಸಾಹಿತಿ ಶಿವರಾಮ ಕಾರಂತರ ಚಿತ್ರ ಮೂಡಿಕೊಳ್ಳುತ್ತದೆ. ಈ ಸಿನಿಮಾ ಆರಂಭಿಕವಾಗಿ ಗಮನ ಸೆಳೆದದ್ದರ ಹಿಂದೆಯೂ ಶಿವರಾಮ ಕಾರಂತರೆಂಬ ಮಾಯೆಯಿದ್ದದ್ದು ಸುಳ್ಳಲ್ಲ. ಪ್ರತಿಭೆಯ ವಿರಾಟ್ ರೂಪದಂತಿದ್ದ ವರ್ಣರಂಜಿತ ವ್ಯಕ್ತಿತ್ವದ ಕಾರಂತರಿಗೂ ಈ ಸಿನಿಮಾಗೂ ಸಂಬಂಧವಿದೆಯಾ ಎಂಬ ಪ್ರಶ್ನೆಗೆ ಚಿತ್ರತಂಡ ಇಲ್ಲ ಎಂಬ ನಿಖರ ಉತ್ತರವನ್ನೇ ರವಾನಿಸಿತ್ತು. ಇದೀಗ ಟ್ರೇಲರ್ ಮೂಲಕ ಬೇರೆಯದ್ದೇ ಕಥೆಯ ದಿಕ್ಕು ತೋರಿಸೋ ಮೂಲಕ ಚಿತ್ರತಂಡ ಕಾರಂತರ ವಿಚಾರವಾಗಿ ಹುಟ್ಟಿಕೊಂಡಿದ್ದ ಕೌತುಕಕ್ಕೆ ನಿಖರವಾದ ಉತ್ತರವನ್ನೇ ಕೊಟ್ಟಿದೆ.
Advertisement
https://www.youtube.com/watch?v=2freW2IGokw
Advertisement
ಈ ಟ್ರೇಲರ್ ನೋಡಿದವರ್ಯಾರೂ ಕಡಲ ತೀರದ ಭಾರ್ಗವ ಚಿತ್ರದತ್ತ ಆಕರ್ಷಿತರಾಗದಿರಲು ಸಾಧ್ಯವೇ ಇಲ್ಲ. ಪ್ರೀತಿ ಪ್ರೇಮ, ನಶೆ, ದ್ವೇಷ ಸೇರಿದಂತೆ ಬೇರೆಯದ್ದೇ ಛಾಯೆಗಳಿಂದ ಈ ಟ್ರೇಲರ್ ಹೊರ ಬಂದಿದೆ. ಅದುವೇ ಈ ಸಿನಿಮಾದ ದೃಶ್ಯ ವೈಭವಕ್ಕೆ, ಭಿನ್ನ ಬಗೆಯ ಕಥಾನಕಕ್ಕೆ ಕನ್ನಡಿ ಹಿಡಿದಂತಿದೆ. ಇದು ಪನ್ನಗ ಸೋಮಶೇಖರ್ ನಿರ್ದೇಶನ ಮಾಡಿರೋ ಚಿತ್ರ. ಈಗಾಗಲೇ ಹಲವಾರು ಕಿರುಚಿತ್ರಗಳನ್ನು ನಿರ್ದೇಶನ ಮಾಡಿರೋ ಪನ್ನಗ ಕಿರುತೆರೆ ಕ್ಷೇತ್ರದಲ್ಲಿಯೂ ಒಂದಷ್ಟು ಅನುಭವ ಹೊಂದಿದ್ದಾರೆ. ಭರತ್ ಗೌಡ ಮತ್ತು ವರುಣ್ ರಾಜ್ ಜೋಡಿಯಾಗಿ ನಟಿಸಿರೋ ಈ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ನಾಯಕಿಯಾಗಿ ನಟಿಸಿದ್ದಾರೆ. ಇಷ್ಟರಲ್ಲಿಯೇ ಈ ಸಿನಿಮಾದ ಬಿಡುಗಡೆ ದಿನಾಂಕ ಹೊರಬೀಳಲಿದೆ.