ಆರ್.ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವ ಕಬ್ಜ (Kabzaa) ಸಿನಿಮಾ ಏಪ್ರಿಲ್ 14 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಕನ್ನಡವೂ ಸೇರಿದಂತೆ ಹಿಂದಿ, ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ಈ ಚಿತ್ರ ರಿಲೀಸ್ ಆಗಿದ್ದು, ಬಿಡುಗಡೆಯಾದ ಒಂದೇ ದಿನಕ್ಕೆ ಭಾರತದ ಟ್ರೆಂಡಿಂಗ್ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಬಾಲಿವುಡ್ ಸೇರಿದಂತೆ ಇತರ ಭಾಷೆಗಳ ಚಿತ್ರಗಳನ್ನು ಹಿಂದಿಕ್ಕಿ ದಾಖಲೆ ಬರೆದಿದೆ.
ಸುದೀಪ್, ಉಪೇಂದ್ರ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ನ ‘ಕಬ್ಜ’ ಟ್ರೆಂಡಿಂಗ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದರೆ, ವಿಕ್ರಮಾದಿತ್ಯ ಮೊಟ್ಟಾನೆ ಅವರ ವೆಬ್ ಸರಣಿ ಜುಬಿಲಿ ಎರಡನೇ ಸ್ಥಾನದಲ್ಲಿದೆ. ಸಾವಿರಾರು ಕೋಟಿ ಬಾಚಿರುವ ಶಾರುಖ್ ಖಾನ್ ನಟನೆಯ ‘ಪಠಾಣ್’ ಮೂರನೇ ಸ್ಥಾನದಲ್ಲಿದ್ದರೆ, ತೆಲುಗಿನ ರಂಗಮಾರ್ತಾಂಡ ಸಿನಿಮಾ ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಆರನೇ ಸ್ಥಾನದಲ್ಲಿ ಅಮೆರಿಕಾದ ಸಿಟ್ ಕಾಮ್ ಯಂಗ್ ಶೆಲ್ಡನ್ ಸರಣಿ ಇದ್ದರೆ, ಏಳನೇ ಸ್ಥಾನದಲ್ಲಿ ವೇಣು ಟಿಲ್ಲು ನಿರ್ದೇಶನದ ಬಲಗಂ, ಎಂಟನೇ ಸ್ಥಾನದಲ್ಲಿ ಹ್ಯಾಪಿ ಫ್ಯಾಮಿಲಿ ಕಂಡೀಷನ್ಸ್ ಅಪ್ಲೈ ಹಿಂದಿ ವೆಬ್ ಸರಣಿ, ಒಂಬತ್ತನೇ ಸ್ಥಾನದಲ್ಲಿ ಅಮೆರಿಕನ್ ಸೂಪರ್ ಹೀರ್ ಚಿತ್ರ ಬ್ಲಾಕ್ ಆಡಂ, ಹತ್ತನೇ ಸ್ಥಾನದಲ್ಲಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ವಾರಿಸು’ ಪಡೆದುಕೊಂಡಿದೆ.
ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುವುದಾಗಿ ಮೊನ್ನೆಯಷ್ಟೇ ನಿರ್ದೇಶಕ ಆರ್.ಚಂದ್ರು (R. Chandru) ತಿಳಿಸಿದ್ದರು. ಕಬ್ಜ ಸಿನಿಮಾ 25 ದಿನಗಳ ಪ್ರದರ್ಶನ ಕಂಡಿರುವ ಹಿನ್ನೆಲೆಯಲ್ಲಿ ಮತ್ತೊಂದು ಹೊಸ ಸುದ್ದಿಯನ್ನು ಹೇಳುವುದಾಗಿ ಮಾತನಾಡಿದ್ದರು. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಚಂದ್ರು. ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದು, ಇಂದಿನಿಂದ ‘ಕಬ್ಜ 2’ (Kabzaa 2 ) ಸಿನಿಮಾದ ಕೆಲಸದಲ್ಲಿ ತೊಡಗುವುದಾಗಿ ತಿಳಿಸಿದ್ದಾರೆ.
ಕಬ್ಜಗಿಂತಲೂ ಕಬ್ಜ 2 ಬಜೆಟ್ ದೊಡ್ಡದಾಗಿಯೇ ಇರುತ್ತದೆಯಂತೆ. ಭಾರೀ ಬಜೆಟ್ ನಲ್ಲಿ ಕಬ್ಜ 2 ಮೂಡಿ ಬರಲಿದ್ದು, ಭಾರತೀಯ ಸಿನಿಮಾ ರಂಗದ ಖ್ಯಾತ ಕಲಾವಿದರು ತಾರಾಗಣದಲ್ಲಿ ಇರಲಿದ್ದಾರಂತೆ. ಸದ್ಯ ಕಥೆ ಬರೆಯುವುದರಲ್ಲಿ ತೊಡಗಿರುವ ಚಂದ್ರು, ಮುಂದಿನ ದಿನಗಳಲ್ಲಿ ತಾರಾಬಳಗದ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದರು.
‘ಕಥೆ, ಮೇಕಿಂಗ್, ತಾರಾಗಣ, ಬಜೆಟ್ ಯಾವುದರ ಬಗ್ಗೆಯೂ ಕಡಿಮೆ ಮಾಡುವುದಿಲ್ಲ. ಇನ್ನೂ ಅದ್ಧೂರಿಯಾಗಿ ಸಿನಿಮಾ ಮಾಡುವಂತಹ ಶಕ್ತಿಯನ್ನು ಕಬ್ಜ ನೀಡಿದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚು ಮಾಡಿದೆ’ ಎಂದಿದ್ದಾರೆ ಚಂದ್ರು. ಸಿನಿಮಾ ಗೆಲ್ಲಿಸಿದ ಪ್ರತಿಯೊಬ್ಬರಿಗೂ ಅವರು ಧನ್ಯವಾದ ಹೇಳಿದರು.
ಕಬ್ಜ ಸಿನಿಮಾ ರಿಲೀಸ್ ಆಗಿ ಎರಡನೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿತ್ತು. ನಾನಾ ಕಾರಣಗಳಿಂದಾಗಿ ಈ ಸಿನಿಮಾ ವಿಶೇಷತೆಯನ್ನೂ ಒಳಗೊಂಡಿತ್ತು, ರಿಯಲ್ ಸ್ಟಾರ್ ಉಪೇಂದ್ರ (Upendra), ಕಿಚ್ಚ ಸುದೀಪ್ (Sudeep) ಮತ್ತು ಶಿವರಾಜ್ ಕುಮಾರ್ (Shivaraj Kumar) ಇದೇ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ನಟಿಸಿ, ಅಭಿಮಾನಿಗಳಿಗೆ ತ್ರಿಬಲ್ ಮನರಂಜನೆಯನ್ನು ನೀಡಿದ್ದರು.