ಕನ್ನಡದ ಪ್ರತಿಭಾವಂತ ನಿರ್ದೇಶಕ ಆರ್.ಚಂದ್ರು (R. Chandru) ನಿರ್ದೇಶನದ ‘ಕಬ್ಜ’ (Kabzaa) ಸಿನಿಮಾ ಇನ್ನೂ ಹಲವಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ನಡುವೆಯೂ ಓಟಿಟಿಯಲ್ಲಿ (OTT) ಕಬ್ಜ ಲಭ್ಯವಾಗಲಿದೆ. ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದಂದು ಸಿನಿಮಾ ರಿಲೀಸ್ ಆಗಿತ್ತು. ಮೊನ್ನೆಗೆ ಕಬ್ಜ ರಿಲೀಸ್ ಆಗಿ 25 ದಿನಗಳನ್ನು ಪೂರೈಸಿದೆ. 50ನೇ ದಿನದತ್ತ ಮುನ್ನುಗ್ಗಿದೆ. ಈ ಮಧ್ಯೆಯೂ ಸಿನಿಮಾ ಏಪ್ರಿಲ್ 14 ರಂದು ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಲಭ್ಯವಾಗಲಿದೆ.
ಕಬ್ಜ 25 ದಿನಗಳನ್ನು ಪೂರೈಸಿರುವ ಬೆನ್ನಲ್ಲೇ ‘ಕಬ್ಜ 2’ ಚಿತ್ರದ ಬಗ್ಗೆ ನಿರ್ದೇಶಕ ಆರ್.ಚಂದ್ರು ಏನಾದರೂ ಅಪ್ ಡೇಟ್ ಕೊಡಲಿದ್ದಾರಾ ಎಂದು ಅವರ ಅಭಿಮಾನಿಗಳು ಕಾದಿದ್ದರು. ಆದರೆ, ಯಾವುದೇ ಮಾಹಿತಿಯನ್ನು ಚಂದ್ರು ಹಂಚಿಕೊಂಡಿಲ್ಲ. ಕಾರಣ ಮಹತ್ವದ ದಿನಕ್ಕಾಗಿ ಅವರು ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಆರ್.ಚಂದ್ರು ಅವರ ಆಪ್ತರ ಪ್ರಕಾರ ‘ಕಬ್ಜ 2’ ಸಿನಿಮಾ ಇನ್ನೂ ಅದ್ಧೂರಿಯಾಗಿ ಮತ್ತು ವಿಶೇಷ ಸಂಗತಿಗಳೊಂದಿಗೆ ರೆಡಿಯಾಗಲಿದೆಯಂತೆ. ಅಲ್ಲದೇ, ಬಾಲಿವುಡ್ ನಟರೊಬ್ಬರು ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರತೀಯ ಸಿನಿಮಾ ರಂಗದ ದಿಗ್ಗಜ ನಟರ ಸಮಾಗಮವೇ ಆಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಆ ಕಲಾವಿದರನ್ನು ಮನಸ್ಸಲ್ಲಿ ಇಟ್ಟುಕೊಂಡೇ ಪಾತ್ರಗಳಿಗೆ ಜೀವ ತುಂಬಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಕಾಂತಾರ ಚಿತ್ರದ ನಂತರ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿರುವ ಕಬ್ಜ ಚಿತ್ರ, ಈ ಮೂಲಕ ಆರ್.ಚಂದ್ರುಗೆ ಮತ್ತೊಂದು ಹಂತದ ಗೆಲುವನ್ನು ತಂದುಕೊಟ್ಟಿದೆ. ಭಾರತೀಯ ಸಿನಿಮಾ ರಂಗವೇ ಮಾತಾಡುವಂತಹ ನಿರ್ದೇಶಕರ ಪಟ್ಟಿಯಲ್ಲಿ ಚಂದ್ರು ಕಾಣಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿಯೇ ಕಬ್ಜ 2 ಬಗ್ಗೆ ಈಗಾಗಲೇ ಮಾತುಗಳು ಶುರುವಾಗಿವೆ. ಈ ಚಿತ್ರದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ.
ಕಬ್ಜ ಚಿತ್ರದಲ್ಲಿ ಉಪೇಂದ್ರ (Upendra), ಸುದೀಪ್ (Sudeep) ಮತ್ತು ಶಿವರಾಜ್ ಕುಮಾರ್ (Shivraj Kumar) ಕಾಂಬಿನೇಷನ್ ಅನ್ನು ಮೊದಲ ಬಾರಿಗೆ ತಂದಿದ್ದ ಚಂದ್ರು, ಕಬ್ಜ 2 ನಲ್ಲಿ ಯಾರೆಲ್ಲ ಕಲಾವಿದರನ್ನು ಕೂಡಿಸಲಿದ್ದಾರೆ ಮತ್ತು ಮುಂದಿನ ಕಥೆಯ ಕಟ್ಟುವಿಕೆ ಹೇಗಿರಲಿದೆ ಎನ್ನುವ ಚರ್ಚೆ ಈಗಿನಿಂದಲೇ ಗಾಂಧಿನಗರದಲ್ಲಿ ಶುರುವಾಗಿದೆ.