ಕಾಬೂಲ್ ಗುರುದ್ವಾರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಕಾಸರಗೋಡಿನ ಸೂಸೈಡ್ ಬಾಂಬರ್

Public TV
2 Min Read
terrorist

– ಕಾಸರಗೋಡಿನಲ್ಲಿ ಅಂಗಡಿ ಇಟ್ಟುಕೊಂಡಿದ್ದ ಉಗ್ರ

ನವದೆಹಲಿ: ಇತ್ತೀಚೆಗೆ ಕಾಬೂಲ್‍ನಲ್ಲಿ ನಡೆದ ಸಿಖ್‍ರ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ನಾಲ್ಕು ಜನ ಭಯೋತ್ಪಾದಕರಲ್ಲಿ ಓರ್ವ ಕೇರಳದ ಕಾಸರಗೋಡಿನ ಯುವಕನಿದ್ದ ಎಂದು ವರದಿಯಾಗಿದೆ.

ಮಾರ್ಚ್ 25ರಂದು ಕಾಬೂಲ್‍ನ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದ ಸಿಖ್‍ರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ಮಾಡಲಾಗಿತ್ತು. ಈ ದಾಳಿಯಲ್ಲಿ ನಾಲ್ಕು ಜನ ಸೂಸೈಡ್ ಬಾಂಬರ್ ಗಳು ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿತ್ತು. ಈಗ ಇದರಲ್ಲಿ ಓರ್ವ ಭಾರತದ ಮೂಲದವನಾಗಿದ್ದು, ಕೇರಳದಿಂದ 4 ವರ್ಷದ ಹಿಂದೆ 14 ಜನರೊಂದಿಗೆ ಕಾಣೆಯಾಗಿದ್ದನು.

Kabul Gurdwara 1 1

ಕಳೆದ ಬುಧವಾರ ಕಾಬೂಲ್‍ನ ಸಿಖ್ ದೇಗುಲದ ಮೇಲೆ ದಾಳಿ ನಡೆಸಿದ ನಾಲ್ಕು ಸದಸ್ಯರ ತಂಡದ ಭಾಗವಾಗಿದ್ದ ಆತ್ಮಾಹುತಿ ದಾಳಿಕೋರ ಅಬು ಖಾಲಿದ್ ಅಲ್-ಹಿಂದಿ ಫೋಟೋವನ್ನು ಇಸ್ಲಾಮಿಕ್ ಸ್ಟೇಟ್ ಶುಕ್ರವಾರ ಪ್ರಕಟಿಸಿದೆ. ಉನ್ನತ ಮೂಲಗಳ ಪ್ರಕಾರ ಈತ ಕೇರಳದ ಕಾಸರಗೋಡಿನ ಪಾಡ್ನೆ ಪ್ರದೇಶದಲ್ಲಿ ಅಂಗಡಿ ಇಟ್ಟುಕೊಂಡಿದ್ದ ಮೊಹಮ್ಮದ್ ಸಾಜಿದ್ ಕುಥಿರುಮಾಲ್ ಎಂದು ತಿಳಿದು ಬಂದಿದೆ. 2016ರ ಎನ್‍ಐಎ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತು ಮತ್ತು ಆತನ ವಿರುದ್ಧ ಇಂಟರ್‍ಪೋಲ್ ರೆಡ್ ನೋಟಿಸ್ ಜಾರಿಗೊಳಿಸಿತ್ತು.

terrorist

2016ರ ಜುಲೈನಲ್ಲಿ ಕೇರಳದ ಕಾಸರಗೋಡಿನ ಪೋಷಕರು, 30 ವರ್ಷದ ತಮ್ಮ ಮಗ ಅಬ್ದುಲ್ ರಶೀದ್ ಮತ್ತು ಆತನ ಪತ್ನಿ ಆಯಿಷಾ (ಸೋನಿಯಾ ಸೆಬಾಸ್ಟಿಯನ್) ಮತ್ತು ಮಗುವಿನೊಂದಿಗೆ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಇವರ ಜೊತೆ 14 ಜನರೊಂದಿಗೆ ಮೊಹಮ್ಮದ್ ಸಾಜಿದ್ ಕೂಡ ಕಾಣೆಯಾಗಿದ್ದಾನೆ ಎಂದು ಅದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೇ ವೇಳೆ ಕೇರಳದ ಸುತ್ತಲಿನ ಪ್ರದೇಶದ 14 ಯುವಕರು ಕಾಣೆಯಾಗಿದ್ದರು.

ISIS 1

ಇದಾದ ನಂತರ ಮೊಹಮ್ಮದ್ ಸಾಜಿದ್, ಅಬ್ದುಲ್ ರಶೀದ್ ಎಂಬಾತನ ಸಹಾಯ ಪಡೆದು, ನಿಷೇಧಿತ ಇಸ್ಲಾಮಿಸ್ಟ್ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಐಸಿಸ್)ಗೆ ತನ್ನ 14 ಜನ ಸ್ನೇಹಿತರೊಂದಿಗೆ ಸೇರಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ತಂದೆ ಮತ್ತು ಸಹೋದರನ ಜೊತೆ ಮಲೇಷ್ಯಾಗೆ ಹೋಗಿದ್ದ ಈತ ಅಲ್ಲಿ ಉಗ್ರರ ಜೊತೆ ನಂಟು ಹೊಂದಿದ್ದ ಎಂದು ಹೇಳಲಾಗಿತ್ತು.

Kabul Gurdwara

ಬಿಸಿನೆಸ್ ವಿಚಾರವಾಗಿ ಮಲೇಷ್ಯಾಗೆ ತಂದೆ ಮತ್ತು ಸಹೋದರನ ಜೊತೆ ಹೋಗಿದ್ದ ಸಾಜಿದ್ ಮತ್ತೆ ಅವರ ಜೊತೆ ವಾಪಸ್ ಬಂದಿರಲಿಲ್ಲ. ಆತ ಅಲ್ಲಿಂದ ಸೌದಿ ಅರೆಬೀಯಾಗೆ ಹೋಗಿದ್ದ. ಸೌದಿಯಿಂದ ದುಬೈಗೆ ಹೋಗಿ ಅಲ್ಲಿ ಪಾಕಿಸ್ತಾನದ ಐಸಿಸ್ ಏಜೆಂಟ್ ಜೊತೆ ಸಂಪರ್ಕ ಹೊಂದಿದ್ದ. ನಂತರ ಭಾರತಕ್ಕೆ ಬಂದಿದ್ದ ಆತ ತನ್ನೊಂದಿಗೆ 14 ಜನ ಕರೆದುಕೊಂಡು ಅಬ್ದುಲ್ ರಶೀದ್ ಸಹಾಯ ಪಡೆದು ಅಪ್ಘಾನಿಸ್ತಾಕ್ಕೆ ಹೋಗಿ ಉಗ್ರ ಸಂಘಟನೆ ಸೇರಿಕೊಂಡಿದ್ದ.

ಭಾರತದಿಂದ ಪರಾರಿಯಾದ ನಂತರ ಸುಮಾರು 6 ತಿಂಗಳವರೆಗೆ ಸಾಜಿದ್ ಅವರು ತಾಯಿ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿದ್ದ. ಆದರೆ ಕಳೆದ ಕೆಲ ತಿಂಗಳಿನಿಂದ ಸಾಜಿದ್ ತನ್ನ ತಾಯಿ ಜೊತೆ ಸಂಪರ್ಕ ಕಳೆದುಕೊಂಡಿದ್ದ. ಇದಾದ ಕೆಲವೇ ದಿನಗಳಲ್ಲಿ ಸಾಜಿದ್ ಕಾಬೂಲ್‍ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಪ್ರಮುಖ ಸೂಸೈಡ್ ಬಾಂಬರ್ ಆಗಿದ್ದ ಎಂದು ಸಾಜಿದ್ ಅವನ ಫೋಟೋ ಐಸಿಸ್ ಬಿಡುಗಡೆ ಮಾಡಿದೆ.

ISIS

ಕಳೆದ ಮಾರ್ಚ್ 25 ರಂದು ಕಾಬೂಲ್‍ನ ಶೋರ್ ಬಜಾರ್ ಪ್ರದೇಶದಲ್ಲಿನ ಗುರುದ್ವಾರದಲ್ಲಿ 150 ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಆದರ ಭಯೋತ್ಪಾದಕರು ದಾಳಿ ನಡೆದಿತ್ತು. ಈ ದಾಳಿಯಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದು ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ದಾಳಿಯ ಸಮಯದಲ್ಲಿ ಗುರುದ್ವಾರಕ್ಕೆ ಭೇಟಿ ನೀಡಿದ ಭಾರತೀಯ ರಾಜತಾಂತ್ರಿಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿತ್ತು ಎಂದು ವರದಿಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *