ಮೈಸೂರು: ತಮಿಳುನಾಡಿಗೆ(Tamil Nadu) ನಿರಂತರವಾಗಿ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಭರ್ತಿಯಾಗಿದ್ದ ಕಬಿನಿ ಜಲಾಶಯದ (Kabini Dam) ನೀರಿನ ಮಟ್ಟದಲ್ಲಿ ಭಾರೀ ಕುಸಿತ ಕಂಡುಬಂದಿದೆ.
ಎಚ್.ಡಿ. ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಜಲಾಶಯದಲ್ಲಿ ಕಳೆದ 9 ದಿನಗಳ ಅಂತರದಲ್ಲಿ ಬರೋಬ್ಬರಿ 4 ಟಿಎಂಸಿ ನೀರು ಖಾಲಿಯಾಗಿದ್ದು, ಜಲಾಶಯದ ನೀರಿನ ಮಟ್ಟ 7 ಅಡಿಗಳಷ್ಟು ಇಳಿಕೆಯಾಗಿದೆ.
ಕಳೆದ ಆಗಸ್ಟ್ 13ರಂದು ಗರಿಷ್ಠ ಮಟ್ಟವಾದ 2,282 ಅಡಿಗಳಷ್ಟಿದ್ದ ಜಲಾಶಯದ ನೀರಿನ ಮಟ್ಟ, ಭಾರೀ ಪ್ರಮಾಣದ ಹೊರಹರಿವಿನಿಂದಾಗಿ ಇಂದು 2,275 ಅಡಿಗೆ ಕುಸಿದಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 9 ಕೋಟಿ ಹಣ ಸೀಜ್
19.52 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 14.57 ಟಿಎಂಸಿ ನೀರಿದೆ. ಕಳೆದ 9 ದಿನಗಳಲ್ಲಿ 4.95 ಟಿಎಂಸಿ ನೀರು ಹರಿದು ಹೋಗಿದೆ.
ಸಂಪೂರ್ಣ ಭರ್ತಿಯಾಗಿ ತುಂಬಿ ತುಳುಕುತ್ತಿದ್ದ ಜಲಾಶಯದಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಸ್ಥಳೀಯ ರೈತರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುವ ಆತಂಕ ಎದುರಾಗಿದೆ.

