ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ದಲಿತ ಮಹಿಳೆ ಮೇಲೆ ನ್ಯಾಯಬೆಲೆ ಅಂಗಡಿ ವಿತರಕಿಯಿಂದ ಜಾತಿನಿಂದನೆ ಮಾಡಿ ದೌರ್ಜನ್ಯ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ದಲಿತ ಮಹಿಳೆಯ ಮನೆಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಸಾಂತ್ವನ ಹೇಳಿದರು.
ನಿನ್ನೆ ಕಾಟೇನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಹೋಗಿದ್ದ ದಲಿತ ಸಮುದಾಯದ ಮಹಿಳೆ ನಾರಾಯಣಮ್ಮ, ಅಕ್ಕಿಯಲ್ಲಿ ರಾಗಿ ಮಿಶ್ರಣವಾಗಿದೆ. ಹೀಗಾಗಿ ನನಗೆ ಈ ಅಕ್ಕಿ ಬೇಡ ಎಂದು ವಾದ ಮಾಡಿ ಚೆಲ್ಲಿದ್ದಾರೆ. ಈ ಸಂಬಂಧ ಪಡಿತರ ವಿತರಣೆ ಮಾಡುತ್ತಿದ್ದ ಪದ್ಮಾವತಮ್ಮ ಹಾಗೂ ನಾರಾಯಣಮ್ಮ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ನಗರದಲ್ಲಿ ಅಂರ್ತಜಲ ಮಟ್ಟ ಭಾರೀ ಏರಿಕೆ – ಕಟ್ಟಡಗಳಿಗೆ ಕಾದಿದೆಯಾ ಅಪಾಯ?
Advertisement
Advertisement
ಈ ಘಟನೆಯಾದ ನಂತರ ನಾರಾಯಣಮ್ಮ ಮಗ ಸೆಲ್ಫಿ ವೀಡಿಯೋ ಮಾಡಿ ಪದ್ಮಾವತಮ್ಮ ನನ್ನ ಪ್ರಶ್ನೆ ಮಾಡಿದ್ದು, ಈ ವೇಳೆ ಅನಕ್ಷರಸ್ಥಳಾದ ಪದ್ಮಾವತಮ್ಮ ಸಮರ್ಪಕ ಉತ್ತರ ನೀಡದೆ ಹಾರಿಕೆ ಉತ್ತರ ನೀಡಿದ್ದಳು. ಇದೇ ವೀಡಿಯೋವನ್ನ ನಾರಾಯಣಮ್ಮ ಮಗ ಸೋಶಿಯಲ್ ಮೀಡಿಯಾಗೆ ಹಾಕಿದ್ದು, ಈ ವೀಡಿಯೋ ವೈರಲ್ ಆಗಿತ್ತು. ಕಾರ್ಯಕ್ರಮ ನಿಮಿತ್ತ ವರಲಕೊಂಡ ಬಳಿ ಆಗಮಿಸಿದ್ದ ಸುಧಾಕರ್ ಅವರು ವಿಷಯ ತಿಳಿದು ಕಾಟೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ದಲಿತ ಮಹಿಳೆ ನಾರಾಯಣಮ್ಮ ಮನೆಗೆ ಭೇಟಿ ನೀಡಿದರು.
Advertisement
ಎಸ್‍ಪಿ-ಡಿಸಿ ಹಾಗೂ ಆಹಾರ ಇಲಾಖೆ ನಿರ್ದೇಶಕಿಯನ್ನು ಸಹ ಭೇಟಿ ಮಾಡಿದ್ದಾರೆ. ಅದು ಅಲ್ಲದೇ ಸ್ಥಳದಲ್ಲೇ ನ್ಯಾಯಬೆಲೆ ಅಂಗಡಿಯ ಪರವಾನಿಗೆ ರದ್ದು ಮಾಡಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಬಗ್ಗೆ ಮಾಹಿತಿ ನೀಡಿರುವ ಆಹಾರ ಇಲಾಖೆ ಉಪನಿರ್ದೇಶಕಿ, ಘಟನೆ ಸಂಬಂಧ ಪ್ರಾಥಮಿಕ ತನಿಖೆಯಲ್ಲಿ ಮೇಲ್ನೋಟಕ್ಕೆ ತೂಕದಲ್ಲಿ ಕಡಿಮೆ ವಿತರಣೆ, ಥಂಬ್ ಪಡೆಯಲು 10 ರೂ. ವಸೂಲಿ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ.
Advertisement
ಅದು ಅಲ್ಲದೇ ಮಹಿಳೆ ಮೇಲೆ ದೌರ್ಜನ್ಯ ನಡೆಸಿದ ಬಗ್ಗೆ ಮಾಹಿತಿ ಸಿಕ್ಕಿದ್ದು, ನ್ಯಾಯಬೆಲೆ ಅಂಗಡಿ ಪರವಾನಿಗೆ ರದ್ದು ಮಾಡಲಾಗಿದೆ. ಸೋಮೇನಹಳ್ಳಿ ವಿ ಎಸ್ ಎಸ್ ಎನ್ ಮೂಲಕ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಉತ್ತರ ಕರ್ನಾಟಕ ಭಾಗದ ಜನರು ಮುಗ್ದರು : ಡಾ.ಚಂದ್ರಶೇಖರ್ ಕಂಬಾರ
ನ್ಯಾಯಬೆಲೆ ಅಂಗಡಿ ಪರವಾನಿಗೆ ಪದ್ಮಾವತಮ್ಮ ಅವರ ತಾಯಿ ನಾಗರತ್ನ ಹೆಸರಲ್ಲಿದೆ. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪದ್ಮಾವತಮ್ಮ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಪ್ರಸ್ತುತ ಪದ್ಮಾವತಮ್ಮ ನಾಪತ್ತೆಯಾಗಿದ್ದಾರೆ.