ಕೋಲಾರ: ಹಲವಾರು ಸ್ವತಂತ್ರ ಅಭ್ಯರ್ಥಿಗಳು ನಮ್ಮ ಕ್ಷೇತ್ರದಲ್ಲಿದ್ದಾರೆ. ಅವರು ಪಡೆದ ಮತಗಳನ್ನು ಗೆದ್ದವರಿಗೆ ಸೇರಿಸಿದ್ದಾರೆ ಎಂದು ಮಾಲೂರು ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಎಸ್ ಮಂಜುನಾಥ್ ಗೌಡ ಆರೋಪಿಸಿದ್ದಾರೆ.
ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿ, ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ ನೀಡಿದ ಬಗ್ಗೆ ಅವರು ʻಪಬ್ಲಿಕ್ ಟಿವಿʼಗೆ ಪ್ರತಿಕ್ರಿಯಿಸಿದರು. ಈ ವೇಳೆ, ಪ್ರಜಾಪ್ರಭುತ್ವವನ್ನು ಸಾಯಿಸಲು ಯತ್ನಿಸಿದ್ದಾರೆ. ನನ್ನನ್ನು ಇವರು ಸೋಲಿಸಿದ್ದಾರೆ. ಸ್ವಲ್ಪ ದಿನದಲ್ಲಿ ಗೆದ್ದಿರೋದು ಯಾರು? ಸೋತವರು ಯಾರು ಎಂದು ಗೊತ್ತಾಗುತ್ತದೆ. ನನ್ನ ಗೆಲುವನ್ನು ಘೋಷಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ
ಮತ ಎಣಿಕೆ ವೀಡಿಯೋಗಳನ್ನು ನಾಶ ಮಾಡಿದ್ದಾರೆ. ಮರು ಎಣಿಕೆಗೆ ಮನವಿ ಮಾಡಿದರೆ, ಮಾಡಿಲ್ಲ. ವೀಡಿಯೋ ಡಿಲಿಟ್ ಮಾಡಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆದೇಶಿಸಲಾಗಿದೆ. ರೀಕೌಂಟಿಂಗ್‌ಗೆ ಲಿಖಿತ ರೂಪದಲ್ಲಿ ಮನವಿ ಮಾಡಿದ್ರೂ ಯಾವುದೇ ಕ್ರಮಕೈಗೊಂಡಿರಲಿಲ್ಲ. ಅದಕ್ಕೆ ನಾವು ಕೋರ್ಟ್‌ಗೆ ಹೋಗಿದ್ದೆವು ಎಂದಿದ್ದಾರೆ.
ರಾಹುಲ್ ಗಾಂಧಿಯವರು ಮತಗಳ್ಳತನ ಆಗಿದೆ ಎಂದು ಹೇಳುತ್ತಿದ್ದಾರೆ. ಅವರಿಗೆ ಮತಗಳ್ಳತನ ಆಗಿದ್ದು ಮಾಲೂರಲ್ಲಿ, ನನಗೆ ಸಹಾಯ ಮಾಡಿ ಎಂದಿದ್ದೆ. ಆದರೆ ಅದಕ್ಕೆ ಅವರು ಯಾವ ಪ್ರತಿಕ್ರಿಯೆ ನೀಡಿರಲಿಲ್ಲ ಎಂದಿದ್ದಾರೆ.
ಏನಿದು ಪ್ರಕರಣ ?
2023ರ ವಿಧಾನಸಭಾ ಚುನಾವಣೆಯಲ್ಲಿ (Assembly Election) ಕಾಂಗ್ರೆಸ್ ಅಭ್ಯರ್ಥಿ ಕೆ.ವೈ ನಂಜೇಗೌಡ ಅವರು 248 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದನ್ನ ಪ್ರಶ್ನಿಸಿ ಮತ ಮರು ಎಣಿಕೆಗೆ ಕೋರಿ ಬಿಜೆಪಿ ಅಭ್ಯರ್ಥಿ ಕೆ.ಎಸ್ ಮಂಜುನಾಥಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇಂದು (ಸೆ.16) ತೀರ್ಪು ಹೊರಬಿದ್ದಿದ್ದು, ಮರು ಮತ ಎಣಿಕೆ ನಡೆಸುವಂತೆ ಹೈಕೋರ್ಟ್ (High Court) ಮಹತ್ವದ ತೀರ್ಪು ನೀಡಿದೆ. ನಾಲ್ಕು ವಾರದ ಒಳಗೆ ಮರು ಎಣಿಕೆ ಮಾಡಿ, ಹೊಸದಾಗಿ ಚುನಾವಣಾ ಫಲಿತಾಂಶ ಪ್ರಕಟಿಸುವಂತೆ ಕೋರ್ಟ್ ಆದೇಶದಲ್ಲಿ ತಿಳಿಸಿದೆ. ಮಾಲೂರು ಶಾಸಕ ನಂಜೇಗೌಡ (K.Y Nanjegowda) ಆಯ್ಕೆಯನ್ನು ಅಸಿಂಧುಗೊಳಿಸಲಾಗಿದೆ. ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಂಜೇಗೌಡ ಪರ ವಕೀಲರು ಆದೇಶವನ್ನು 30 ದಿನಗಳ ಕಾಲ ಅಮಾನತಿನಲ್ಲಿಡುವಂತೆ ಮನವಿ ಮಾಡಿದರು. ಈ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಇದನ್ನೂ ಓದಿ: 19ನೇ ವಯಸ್ಸಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು – ಮಾಲೂರು ಪುರಸಭೆ ಸದಸ್ಯೆ ಆಯ್ಕೆ ಅಸಿಂಧು