ಚಿತ್ರದುರ್ಗ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಸಿಎಂ ಕುಮಾರಸ್ವಾಮಿ ದಾದಾಗಳಾ? ಸಚಿವ ರೇವಣ್ಣ ಅವರದ್ದು ಕೇವಲ ಬೊಗಳೆ ಹೇಳಿಕೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಎಚ್.ಡಿ.ದೇವೇಗೌಡ ಅವರನ್ನು ಮುಟ್ಟಿದರೆ ಉಳಿಯಲ್ಲ ಎಂಬ ಸಚಿವ ರೇವಣ್ಣ ಹೇಳಿಕೆಗೆ ತಿರುಗೇಟು ಕೊಟ್ಟರು. ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳ ದಾಳಿ ವೇಳೆ ಕೋಟ್ಯಂತರ ರೂ. ನಗದು, ಅಕ್ರಮ ಆಸ್ತಿ ಪತ್ತೆಯಾಗಿದೆ. ಅದರ ಬಗ್ಗೆ ಸಿಎಂ ಹಾಗೂ ಸಚಿವರು ಏನು ಹೇಳುತ್ತಾರೆ. ಇವತ್ತು ಐಟಿ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಂಡವರು ಹಾಳಾಗುತ್ತಾರೋ ಅಥವಾ ಯಾರು ಹಾಳಾಗ್ತಾರೋ ನೋಡೋಣ. ಆದರೆ ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನುವ ಆರೋಪ ಸರಿಯಲ್ಲ ಎಂದು ಹೇಳಿದರು.
ಸಿಎಂ ಕುಮಾರಸ್ವಾಮಿ ಅವರು ಐಟಿ ದಾಳಿಯ ಬಗ್ಗೆ ಮಂಡ್ಯದಲ್ಲಿ ಬುಧವಾರವೇ ಹೇಳಿದ್ದಾರೆ. ಈ ಮೂಲಕ ಗೌಪ್ಯತೆ ಕಾಪಾಡುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕುಮಾರಸ್ವಾಮಿ ಅವರು ಸುಪ್ರೀಂಕೋರ್ಟ್ ಹಾಗೂ ಸಂವಿಧಾನಕ್ಕೆ ಬೆಲೆ ಕೊಡುವ ಜನರಲ್ಲ. ಹೀಗಾಗಿ ಸಿಎಂ ಸ್ಥಾನದಿಂದ ವಜಾಗೊಳಿಸಲು ರಾಜ್ಯಪಾಲರಿಗೆ ಒತ್ತಾಯಿಸುತ್ತೇವೆ ಎಂದರು.
ಐಟಿ ದಾಳಿಯ ಬಗ್ಗೆ ಬಹಿರಂಗ ಹೇಳಿಕೆ ನೀಡುವ ಮೂಲಕ ಸಿಎಂ ಕುಮಾರಸ್ವಾಮಿ ಅವರು ಕಳ್ಳರಿಗೆ ಬೆಂಬಲ ನೀಡಿದ್ದಾರೆ. ಆದರೂ ದಾಳಿಯ ವೇಳೆ ಅನೇಕರ ಮನೆಯಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕಿವೆ. ಹೀಗಿದ್ದರೂ ಐಟಿ ದಾಳಿಯ ವಿರುದ್ಧ ಕಾಂಗ್ರೆಸ್-ಜೆಡಿಎಸ್ ನಾಯಕರು ಧರಣಿ ಮಾಡಿದ್ದು ಸಂವಿಧಾನ ವಿರೋಧಿ ನಡೆಯಾಗಿದೆ. ಕಳ್ಳರನ್ನು ರಕ್ಷಿಸುತ್ತಿರುವುದು ಅಕ್ಷಮ್ಯ. ಸರ್ವಾಧಿಕಾರಿ ಧೋರಣೆ ಪ್ರಜಾಪ್ರಭುತ್ವದಲ್ಲಿ ನಡೆಯುವುದಿಲ್ಲ ಎಂದು ಮೈತ್ರಿ ನಾಯಕರ ವಿರುದ್ಧ ಕಿಡಿಕಾರಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೂ, ನಡವಳಿಕೆಗೂ ಸಂಬಂಧವೇ ಇಲ್ಲ. ಅವರು ಪ್ರತಿ ಬಾರಿಯೂ ಸುಳ್ಳಾಗುತ್ತದೆ ಎಂದು ದೂರಿದರು.